Dailyhunt
ಚಿತ್ರಮಂದಿರಗಳ ಕೊರತೆ: 'ಶಿವಲೀಲಾ' ತಂಡದ ಪ್ರತಿಭಟನೆ

ಚಿತ್ರಮಂದಿರಗಳ ಕೊರತೆ: 'ಶಿವಲೀಲಾ' ತಂಡದ ಪ್ರತಿಭಟನೆ

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಕುರಿತಾದ ಕಥೆಯನ್ನು ಹೊಂದಿರುವ 'ಶಿವಲೀಲಾ' ಚಿತ್ರಕ್ಕೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯವೆಸಗಲಾಗುತ್ತಿದೆ ಎಂದು ಆರೋಪಿಸಿ ಚಿತ್ರತಂಡ ನಗರದ ಸ್ವತಂತ್ರ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು. ಚಿತ್ರದ ಪ್ರಮುಖ ಪಾತ್ರಧಾರಿ ಮಂಜಮ್ಮ ಜೋಗತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿತ್ರತಂಡ ಭಾಗಿಯಾಗಿತ್ತು.

'ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಾಮಾನ್ಯರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವ ಬಲವಾದ ಪ್ರಯತ್ನವಿದು. ಸಮಾಜದಲ್ಲಿ ಈ ಸಮುದಾಯದ ಕುರಿತು ಜಾಗೃತಿ ಮೂಡಿಸುವ ಯತ್ನಕ್ಕೆ ಇಡೀ ರಾಜ್ಯದ ಮೂರು ಚಿತ್ರಮಂದಿರಗಳಲ್ಲಿ ತಲಾ ಒಂದು ಪ್ರದರ್ಶನ ಮಾತ್ರ ನೀಡಲಾಗಿದೆ. ಈ ಸಿನಿಮಾ ಪ್ರೋತ್ಸಾಹಿಸುವಂತೆ ಇತ್ತೀಚಿನ ಬೆಳಗಾವಿ ಅಧಿವೇಶನದಲ್ಲಿಯೂ ಸ್ಪೀಕರ್‌ ಯು.ಟಿ ಖಾದರ್‌ ಕೂಡ ಹೇಳಿದ್ದರು. ಶಾಲಾ, ಕಾಲೇಜು ಮಕ್ಕಳು ಕಡ್ಡಾಯವಾಗಿ ಈ ಚಿತ್ರ ನೋಡಲು ಸುತ್ತೋಲೆ ನೀಡಬೇಕೆಂದು ನಾವು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ' ಎಂದು ಚಿತ್ರದ ನಿರ್ದೇಶಕ ಅಶೋಕ್ ಜೈರಾಮ್ ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತರ ಬದುಕು ಬವಣೆಗಳನ್ನು ತೋರಿಸುವ ಚಿತ್ರ ಜ.2ರಂದು ತೆರೆಕಂಡಿತ್ತು. 300ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರು ಚಿತ್ರದಲ್ಲಿ ನಟಿಸಿದ್ದು, ರಮೇಶ್‌ ಕೃಷ್ಣ ಸಂಗೀತ, ಪ್ರವೀಣ್‌ ಶೆಟ್ಟಿ ಛಾಯಾಚಿತ್ರಗ್ರಹಣವಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani