Dailyhunt Logo
  • Light mode
    Follow system
    Dark mode
    • Play Story
    • App Story
ಚಿತ್ತಾಪುರದಲ್ಲಿ ಟ್ಯಾಂಕರ್ - ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು

ಚಿತ್ತಾಪುರದಲ್ಲಿ ಟ್ಯಾಂಕರ್ - ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು

ವಾಡಿ(ಕಲಬುರಗಿ ಜಿಲ್ಲೆ): ಟ್ಯಾಂಕರ್ ಮತ್ತು ಕ್ರೂಸರ್ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ ಭೀಕರ‌ ಅಪಘಾತದಲ್ಲಿ ಐವರು ಸ್ಥಳದಲ್ಲೇ‌ ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಹಾಗೂ ಹಲಕರ್ಟಿ ಮಧ್ಯೆ ಶನಿವಾರ ಬೆಳಗಿನ ಜಾವ ಈ‌ ದುರಂತ ಸಂಭವಿದೆ.

ವಾಡಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-150ರ ಮೇಲೆ ಈ‌ ಅಪಘಾತ ಜರುಗಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಯಾದಗಿರಿಯಿಂದ ಇಂಗಳಗಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ವಾಡಿಯಿಂದ ಯಾದಗಿರಿಗೆ ತೆರಳುತ್ತಿದ್ದ ಲಾರಿ ಮಧ್ಯೆ ಈ‌ ಅಪಘಾತ ಸಂಭವಿಸಿದೆ.

ದುರ್ಘಟನೆಯಲ್ಲಿ ಇಂಗಳಗಿಯ ಐದು ಜನ ಮೃತಪಟ್ಟಿದ್ದು ಎಲ್ಲರೂ ಪರಸ್ಪರ ಸಂಬಂಧಿಕರೇ ಆಗಿದ್ದಾರೆ.

ಮೆಹಬೂಬ್ ಅಲಿ(42), ತೊಲಾ ಬಾಷಾ (30), ಹುಸೇನ್ ಶಾಹಾಪುರ(47), ರಸೂಲಬಿ(43) ಹಾಗೂ ಫಾತಿಮಾ(40) ಮೃತಪಟ್ಟವರು.

ಡಿಕ್ಕಿ ರಭಸಕ್ಕೆ ಕ್ರೂಸರ್ ಮತ್ತು ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ ಐವರ ದೇಹಗಳು ಛಿದ್ರಗೊಂಡಿವೆ.

ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ

ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಸರ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಕ್ರೂಜರ್ ಗಾಡಿಯಲ್ಲಿದ್ದ ಇಂಗಳಗಿ ಗ್ರಾಮದ ಐವರು ಸ್ಥಳದಲ್ಲೇ ಮೃತರಾಗಿರುವ ವಿದ್ರಾವಕ ಸುದ್ದಿಯು ಮನಸಿನಲ್ಲಿ ತಲ್ಲಣವನ್ನುಂಟುಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಅಮೂಲ್ಯ ಜೀವಗಳು ಅಪಘಾತಕ್ಕೆ ಬಲಿಯಾಗಿರುವುದರ ಬಗ್ಗೆ ನೋವು ವ್ಯಕ್ತಪಡಿಸಿ, 'ಭಾರವಾದ ಮನಸ್ಸಿನಿಂದಲೇ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಮೃತರ ಕುಟುಂಬ ವರ್ಗವು ಧೈರ್ಯ ತಂದುಕೊಳ್ಳಬೇಕು ಎಂದಷ್ಟೇ ಈಗ ಹೇಳಬಹುದಾದ ಸಮಾಧಾನದ ಮಾತುಗಳು' ಎಂದು ಪ್ರಿಯಾಂಕ್ ಹೇಳಿದ್ದಾರೆ.

'ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿದ್ದೇನೆ, ನಾನು ಮತ್ತು ಜಿಲ್ಲಾಡಳಿತವು ಮೃತರ ಕುಟುಂಬದವರ ಅಗತ್ಯ ನೆರವಿಗೆ ಪೂರ್ಣ ಸಹಕಾರ ನೀಡಲಿದ್ದೇವೆ. ಪ್ರೀತಿಪಾತ್ರರ ಅಗಲಿಕೆ ಭರಿಸುವ ಶಕ್ತಿ ಮೃತರ ಕುಟುಂಬ ವರ್ಗಕ್ಕೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ' ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮೆಹಬೂಬ್ ಅಲಿ, ತೊಲಾ ಬಾಷಾ, ಹುಸೇನ್ ಶಾಹಾಪುರ, ರಸೂಲಬಿ ಹಾಗೂ ಫಾತಿಮಾ

Dailyhunt
Disclaimer: This content has not been generated, created or edited by Dailyhunt. Publisher: Prajavani