ನವದೆಹಲಿ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಯುವ ಘಟಕದ(ಐವೈಸಿ) ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನಕಾರರು ಜ್ಞಾನೇಶ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳಿದ್ದ ಮುಖವಾಡವನ್ನು ಧರಿಸಿ, ಕೈಗೆ ಕಬ್ಬಿಣದ ಸರಪಳಿಯನ್ನು ಹಾಕಿಕೊಂಡಿದ್ದರು. ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮೊದಲು ಪ್ರತಿಭಟನಕಾರರು ಐವೈಸಿ ಕಚೇರಿಯಿಂದ ಜಂತರ್‌ಮಂತರ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿದ್ದರು.
ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾಗಿರುವ ಯುನಿಯನ್ ಆಫ್ ಇಂಡಿಯಾ(ಎನ್‌ಎಸ್‌ಯುಐ)ವು ಆಯೋಗದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿತು.
'ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿ, ವಶಕ್ಕೆ ಪಡೆದಿದ್ದಾರೆ' ಎಂದು ಎನ್‌ಎಸ್‌ಯುಐ ಆರೋಪಿಸಿದೆ.
ದೇಶದ ಹಲವೆಡೆ ಪ್ರತಿಭಟನೆ
ರಾಜಸ್ಥಾನದ ರಾಜ್ಯ ಚುನಾವಣಾ ಆಯೋಗದ ಕಚೇರಿಯ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸೇರಿದಂತೆ ಪಕ್ಷ ಹಿರಿಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಬ್ಯಾರಿಕೇಡ್‌ಗಳನ್ನು ದೂಡಿ ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಕಾರರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗ ಮಾಡಿದರು
ಮಧ್ಯಪ್ರದೇಶದಲ್ಲಿ ಪ‍್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಜಲಫಿರಂಗಿ ಪ್ರಯೋಗದಿಂದ ಮಹಿಳೆಯೊಬ್ಬರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಾಜ್ಯ ಕಾಂಗ್ರೆಸ್ ಘಟಕ ದೂರಿದೆ. ರಾಜ್ಯ ಚುನಾವಣಾ ಕಚೇರಿಯ ಬಳಿ ಬ್ಯಾರಿಕೇಡ್ ಮೇಲೆ ಹತ್ತಿದ್ದ ಪ್ರತಿಭಟನಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ವತಿಯಿಂದ ಮುಂಬೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಿತು. ಅಮರಾವತಿಯಲ್ಲಿ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿಯನ್ನು ಕತ್ತೆಯ ಮೇಲಿಟ್ಟು ಮೆರವಣಿಗೆ ನಡೆಸಿದರು
ಜಾರ್ಖಂಡ್‌ನಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿಯ ಮೇಲೆ ಮುತ್ತಿಗೆ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತರ ಪ್ರತಿಕೃತಿಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು
ಜಮ್ಮು-ಕಾಶ್ಮೀರದಲ್ಲಿಯೂ ಪ್ರತಿಭಟನೆ ತೀವ್ರವಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ತೆಲಂಗಾಣ ಮಣಿಪುರ ಹರಿಯಾಣ ಪಂಜಾಬ್‌ನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬಿಹಾರದ ಪಟ್ನಾದಲ್ಲಿ ಸಿಪಿಐ ಮತ್ತು ಇತರ ಸಹಸಂಘಟನೆಗಳ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗ ಮಾಡಿದರು. 'ಪ್ರತಿಭಟನಕಾರರೊಂದಿಗೆ ಇದ್ದ ಸಮಾಜವಿರೋಧಿ ಶಕ್ತಿಗಳು ಕಲ್ಲು ತೂರಾಟ ನಡೆಸಿದ್ದು ಹಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಆರೋಪಿಸಿದ್ದಾರೆ
ಇದೇ 2ರಂದು ಸಿಜೆಪಿ ಪ್ರತಿಭಟನೆ
ಗುವಾಹಟಿ: ದೇಶದ 13 ಕೋಟಿ ಮತದಾರರ ಹೆಸರನ್ನು ಕೈಬಿಟ್ಟಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡುವವರೆಗೆ ನಾವು ಹಿಂದೆ ಸರಿಯುವುದಿಲ್ಲ. ಅಕ್ಟೋಬರ್ 2ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುತ್ತೇವೆ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ವಕ್ತಾರ ಅಶುತೋಷ್ ರಾಂಕಾ ಅವರು ಸೋಮವಾರ ಹೇಳಿದ್ದಾರೆ. '48 ಗಂಟೆಗಳ ಕಾಲ ಚೆಂಡು ಜ್ಞಾನೇಶ್ ಅವರ ಅಂಕಣದಲ್ಲಿತ್ತು. ಈಗ ಸಿಜೆಪಿ ಅಂಕಣದಲ್ಲಿದೆ. ಅವರು ರಾಜೀನಾಮೆ ನೀಡುವವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ. ಸಿಜೆಪಿ ಯಾವುದೇ ವಿಚಾರದಲ್ಲಿ ಮಧ್ಯಪ್ರವೇಶಿಸಿದರೆ ಗೆಲ್ಲುವವರೆಗೆ ಹಿಂದೆ ಸರಿಯುವುದಿಲ್ಲ' ಎಂದು ಹೇಳಿದರು. 48 ಗಂಟೆಗಳಲ್ಲಿ ಜ್ಞಾನೇಶ್ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಸೆ.24ರಂದು ಎಚ್ಚರಿಕೆ ನೀಡಿತ್ತು.

