Dailyhunt Logo
  • Light mode
    Follow system
    Dark mode
    • Play Story
    • App Story
ಚುರುಮುರಿ: ಹಸು ಪ್ರವೇಶ

ಚುರುಮುರಿ: ಹಸು ಪ್ರವೇಶ

ಕರಾವಿನ ಹಸು ಖರೀದಿಸಿ ಮನೆಗೆ ಕರೆತಂದಿದ್ದ ಶಂಕ್ರಿ. ಹಸು ಕೊಂಡರೆ ಕರು ಫ್ರೀ ಇದ್ದಿದ್ದರಿಂದ ತಾಯಿ ಹಿಂದೆ ಕರುವೂ ಬಂದಿತ್ತು. ಕಾರನ್ನು ರಸ್ತೆಪಾಲು ಮಾಡಿ, ಹಸು ವಾಸ್ತವ್ಯಕ್ಕೆ ಕಾರ್ ಶೆಡ್ಡನ್ನು ಕೊಟ್ಟಿಗೆ ಮಾಡಿಕೊಂಡಿದ್ದ.

ಹಸುವಿನ ಕೊಟ್ಟಿಗೆ ಪ್ರವೇಶ ಕಾರ್ಯಕ್ರಮಕ್ಕೆ ನೆರೆಹೊರೆಯವರನ್ನು ಆಹ್ವಾನಿಸಿದ್ದ.

ಬಂದವರೆಲ್ಲಾ ಹಸುವಿನ ಮೈ ಸವರಿ, 'ಸಾಧು ಹಸು ಹಾಯೊಲ್ಲ, ಒದೆಯೊಲ್ಲ' ಎಂದು ಹಸುವನ್ನು ಮುಟ್ಟಿನೋಡಿ ಸಂತಸಪಟ್ಟರು. ಕರುವನ್ನೂ ಮುದ್ದು ಮಾಡಿದರು.

'ಹಸು ಒಂದು ಹೊತ್ತಿಗೆ ಎಷ್ಟು ಹಾಲು ಕರೆಯುತ್ತದೆ?'

'ನಮ್ಮ ಆರೈಕೆ, ಮೇವಿನ ಪೂರೈಕೆ ಆಧಾರದಲ್ಲಿ ಹಸು ಹಾಲು ಕೊಡುತ್ತದೆ. ಹಾಲಿನೊಂದಿಗೆ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ನಂದಿನಿಯ ಎಲ್ಲಾ ಉತ್ಪನ್ನಗಳನ್ನು ಇದೊಂದೇ ಹಸು ಕೊಡುತ್ತದೆ' ಸುಮಿ ಸಂಭ್ರಮಿಸಿದಳು.

'ಹಸುವಿನ ಸಗಣಿ, ಗಂಜಲಕ್ಕೂ ಬೇಡಿಕೆ ಇದೆ. ಮಾರಿದರೆ ಹೆಚ್ಚುವರಿ ಲಾಭವಾಗುತ್ತದೆ' ಎಂದು ಶಂಕ್ರಿ ಲೆಕ್ಕಾಚಾರದ ಮಾತುಗಳನ್ನಾಡಿದ.

'ನೀವು ಬಾಳಾ ಬುದ್ಧಿವಂತರು, ವಿದ್ಯುತ್ ದರ ಜಾಸ್ತಿಯಾದಾಗ ಮನೆ ಮೇಲೆ ಸೋಲಾರ್ ಸಿಸ್ಟಂ ಹಾಕಿಸಿಕೊಂಡ್ರಿ, ತರಕಾರಿ ಬೆಲೆ ಜಾಸ್ತಿಯಾದಾಗ ಕಾಂಪೌಂಡಿನಲ್ಲಿ ತರಕಾರಿ ಬೆಳೆದ್ರಿ. ಹಾಲಿನ ಬೆಲೆ ಹೆಚ್ಚಾಯ್ತು ಅಂತ ಈಗ ಹಸುವನ್ನೇ ತಂದು ಹಾಲಿನ ಸ್ವಾವಲಂಬಿ ಆಗಿದ್ದೀರಿ' ಎಂದು ಒಬ್ಬ ಹಾಡಿ ಹೊಗಳಿದ.

'ನೀವೂ ಹಸು ಸಾಕಣೆ ಮಾಡಿ ಸಾರ್'.

'ಸಾಕಬೇಕು, ಹೆಂಡ್ತಿ ಮಾತು ಕೇಳಿ ನಾಯಿ ಸಾಕಿದ್ದೇನೆ, ನಮ್ಮ ನಾಯಿ ಹಾಲೂ ಕೊಡೊಲ್ಲ, 'ಅಂಬಾ'ನೂ ಅನ್ನಲ್ಲ' ಅಂದ.

'ನಿಮಗೆ ಹಾಲು ಬೇಕಾದರೆ ನಮ್ಮಲ್ಲಿಗೆ ಬನ್ನಿ. ನೀವೇ ಹಸುವಿನಲ್ಲಿ ಹಾಲು ಹಿಂಡಿಕೊಂಡು ಹೋಗಬಹುದು, ಹಾಲಿಗೆ ಸರ್ಕಾರಿ ರೇಟ್ ಕೊಟ್ಟರೆ ಸಾಕು' ಎಂದು ಸುಮಿ ಆಫರ್ ಕೊಟ್ಟು ಹಸುವಿನ ಹಾಲು ಕರೆದಳು. ತಾಜಾ ಹಾಲಿನಲ್ಲಿ ಎಲ್ಲರಿಗೂ ಕಾಫಿ ಮಾಡಿಕೊಟ್ಟಳು.

Dailyhunt
Disclaimer: This content has not been generated, created or edited by Dailyhunt. Publisher: Prajavani