Dailyhunt Logo
  • Light mode
    Follow system
    Dark mode
    • Play Story
    • App Story
ಚುರುಮುರಿ: ಪಾರ್ಲೆ ವರ್ಸಸ್ ಜಿರ್ಲೆ!

ಚುರುಮುರಿ: ಪಾರ್ಲೆ ವರ್ಸಸ್ ಜಿರ್ಲೆ!

'ಏನ್ರಪ್ಪಾ ನಮ್ ಮೋದಿಮಾಮ ಮೆಲೊನಿಗೆ ಮೆಲೊಡಿ ಚಾಕೊಲೇಟ್ ಕೊಟ್ಟಿದ್ದೇ ದೊಡ್ ಸುದ್ದಿ ಆಗೋಗದೆ' ಎಂದ ಗುದ್ಲಿಂಗ.

'ಭಾಳಾ ಅನ್ಯಾಯ ಕಣ್ ಬುಡ್ಲಾ! ದೀದಿ ದುರ್ಗಾಪೂಜೆ ಟೈಮಾಗೆ ಮೋದಿಮಾಮಂಗೆ ಕುರ್ತಾ, ಸ್ವೀಟ್ ಕಳ್ಸೋರು. ಅವರಿಗೆ ಒಂದ್ ಚಾಕೊಲೇಟ್ ಕೊಡೋದಿರ‍್ಲಿ, ಬಂಗಾಳಿಂದ ಟಿಕೇಟೆ ಕೊಟ್ ಬಿಟ್ರು' ಎಂದ ಮಾಲಿಂಗ.

'ಊ ಕಣೇಳ್ಳಾ! ಇಲ್ ನಮ್ ಇಟಲಿ ಸೊಸೆಗೆ ಒಂದು ಚಾಕೊಲೇಟ್ ಕೊಡಕ್ಕೇನ್ಲಾ ಆಗಿತ್ತು? ಬ್ಯಾಡ, ಅವ್ರು ಅಪೊಸಿಶನ್ನು, ಅವರ‍್ದೇ ಪಾರ್ಟಿಯ ಸ್ಮೃತಿ ಅಕ್ಕ, ಡೆಲ್ಲಿ ಸಿಎಂ ರೇಖಕ್ಕ, ವಸುಂಧರಕ್ಕ, ಬಂಗಾಳದ ರೇಖಪಾತ್ರ, ಅಗ್ನಿಮಿತ್ರಕ್ಕ ಎಲ್ಲಾ ಇಲ್ವಾ?'

'ಅದೆಲ್ಲಕ್ಕಿಂತ ಹೆಚ್ಚಾಗಿ ಡ್ರೀಮ್ ಗರ್ಲ್ ಹೇಮಾಮಾಲಿನಿ ಅವ್ರೆ, ದೀಪಿಕಾ ಅವ್ರೆ. ನೂಪುರಕ್ಕ, ಮಾಧವಿ ಅಕ್ಕ ಸದಾ ಕಮಲದ ತುತ್ತೂರಿ ಊದ್ತಾರೆ. ಇವರಿಗೆಲ್ಲಾ ನಮ್ ಮೋದಿಮಾಮ ಯಾವತ್ತಾದ್ರೂ ಚಾಕಲೇಟಿರಲಿ ಶುಂಠಿ ಪೆಪ್ಪರಮೆಂಟಾದ್ರೂ ಕೊಟ್ಟವ್ರೇನ್ಲಾ?' ಕೇಳಿದ ಕಲ್ಲೇಶಿ.

'ಲೇಯ್ ಅವರೆಲ್ಲಾ ಸ್ವದೇಶೀ ಕಣ್ಲಾ, ಇದು ವಿದೇಶೀ ವಿನಿಮಯ! ಸದ್ಯ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ತರ ಮುತ್ತಿಕ್ಕಿಲ್ಲ, ಆಲ್ಬೇನಿಯಾ ಪ್ರಧಾನಿ ತರ ಮಂಡಿಯೂರಿಲ್ಲವಲ್ಲ..!'

'ಯೋನೇ ಯೋಳು ಇದು ತುಂಬಾ ಅವಮಾನಕರ ಸಂಗತಿ ಬುಡು' ಎಂದು ಗುದ್ಲಿಂಗ.

'ಯಾಕ್ಲಾ ಅಂಗಂದೀಯ? ಇದು ಚಾಕೊಲೇಟ್ ಡಿಪ್ಲೊಮೆಸಿ ಕಣ್ಲಾ!'

'ಆದರೇನ್ಲಾ? ನಮ್ದು ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆ ಅಂದ್ಕೊಂಡು ಐವತ್ತು ರೂಪಾಯಿ ಚಾಕೊಲೇಟ್ ಕೊಟ್ಟವ್ರಲ್ಲ! ನಮ್ ಮರ‍್ವಾದೆ ಕತೆ ಏನು? ಇನ್ಮೇಲೆ ಜುಲೈ 7 ಚಾಕೊಲೇಟ್ ದಿನಾನ 'ಮೆಲೊಡಿ ಡೇ' ಅಂತ ಚಪ್ಪರಿಸಿ ಎಂದು ಮೋದಿ ಸಂದೇಶ ಕೊಡ್ತಾರೆ'.

'ಆದ್ರೆ ಹತ್ತು ಮಿಲಿಯನ್ ಸೈನ್ಯ ಕಟ್ಕಂಡು ಜಿರಲೆಗಳು ಮೀಸೆ ತಿರುವಿಕೊಂಡು ಓಡಾಡ್ತಿವೆ. ಚಾಕಲೇಟೆಲ್ಲಾ ಜಿರಲೆ ಪಾಲೇ ಅನ್ಸುತ್ತೆ!'

'ಪಾರ್ಲೆನ ಜಿರ್ಲೆ ನುಂಗಿತ್ತಾ ನೋಡವ್ವ ತಂಗಿ' ಎಂದ ಪರ‍್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು.

Dailyhunt
Disclaimer: This content has not been generated, created or edited by Dailyhunt. Publisher: Prajavani