ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್‌ಗಳ ಜಯ ದಾಖಲಿಸಿತು. ಅಕ್ಷರ್ ಪಟೇಲ್ ಪಡೆಗೆ ಇದು ಸತತ ಎರಡನೇ ಸೋಲು.
ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಸಂಜು ಮತ್ತು ನಾಯಕ ಋತುರಾಜ್ ಅವರು ಪವರ್‌ಪ್ಲೇ ಹಂತದಲ್ಲಿ 62 ರನ್ ಸೇರಿಸಿದರು. ಡೆಲ್ಲಿ ನಾಯಕ, ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ಋತುರಾಜ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು.
ಸಂಜು ಸ್ಯಾಮ್ಸನ್ ಶತಕ

ರಾಜಸ್ಥಾನ ರಾಯಲ್ಸ್‌ನಿಂದ ಚೆನ್ನೈ ತಂಡಕ್ಕೆ ಬಂದ ಸಂಜು ಅವರಿಗೆ ಮೊದಲ ಮೂರು ಪಂದ್ಯಗಳಲ್ಲಿ ಎರಡಂಕಿ ದಾಟಲು ಸಾಧ್ಯವಾಗಿರಲಿಲ್ಲ. ಆದರೆ, ಈ ಪಂದ್ಯದಲ್ಲಿ 56 ಎಸೆತಗಳಲ್ಲಿ ಅಜೇಯ 115 ರನ್ ಬಾರಿಸಿದರು. ಐಪಿಎಲ್‌ನಲ್ಲಿ ಅವರಿಗೆ ಇದು ನಾಲ್ಕನೇ ಶತಕವಾಗಿದೆ.
ಆಯುಷ್ ಮ್ಹಾತ್ರೆಗೆ ಗಾಯ

ಯುವ ಬ್ಯಾಟರ್ ಆಯುಷ್ ಮ್ಹಾತ್ರೆ, ಕೇವಲ 36 ಎಸೆತಗಳಲ್ಲಿ 59 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಶಿವಂ ದುಬೆ, ಕೇವಲ 10 ಎಸೆತಗಳಲ್ಲಿ 20 ರನ್ ಗಳಿಸಿದರು.
ಡೆಲ್ಲಿಗೆ 213 ಗುರಿ

ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಶತಕ ಮತ್ತು ಆಯುಷ್ ಮ್ಹಾತ್ರೆ ಅವರ ಅರ್ಧಶತಕದ ಬಲದಿಂದ ಚೆನ್ನೈ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 212 ರನ್ ಗಳಿಸಿತು.
189 ರನ್ ಗಳಿಸಿದ ಡೆಲ್ಲಿ

ಕಠಿಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇಂಗ್ಲೆಂಡ್‌ನ ವೇಗಿ ಜೇಮಿ ಓವರ್ಟನ್ (18ಕ್ಕೆ 4) ಮತ್ತು ಅನ್ಶುಲ್ ಕಂಬೋಜ್ (35ಕ್ಕೆ 3) ಕಡಿವಾಣ ಹಾಕಿದರು. ಇದರಿಂದಾಗಿ ನಿಗದಿತ ಓವರ್‌ಗಳಲ್ಲಿ 189 ರನ್ ಗಳಿಸಿ ಹೋರಾಟವನ್ನು ಮುಗಿಸಿತು.
ಟ್ರಿಸ್ಟನ್ ಸ್ಟಬ್ಸ್ ಉತ್ತಮ ಆಟ

ಪಥುಮ್ ನಿಸಾಂಕ (41) ಮತ್ತು ಕೆ.ಎಲ್.ರಾಹುಲ್ (18) ಮೊದಲ ವಿಕೆಟ್‌ಗೆ 61 ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ನಂತರದಲ್ಲಿ ಕಂಬೋಜ್ ಮತ್ತು ಓವರ್ಟನ್ ದಾಳಿಗೆ ನಿಯಮಿತವಾಗಿ ವಿಕೆಟ್‌ಗಳು ಉರುಳಿದವು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ (60;38) ಏಕಾಂಗಿ ಹೋರಾಟ ತೋರಿದರೂ ಗೆಲುವಿನ ಗುರಿ ದೂರವಿತ್ತು.

