Dailyhunt Logo
  • Light mode
    Follow system
    Dark mode
    • Play Story
    • App Story
ದಾವಣಗೆರೆ: ಬಡ ಕುಟುಂಬಗಳಿಗೆ ವಿದ್ಯುತ್ ಬಿಲ್ ಶಾಕ್‌!

ದಾವಣಗೆರೆ: ಬಡ ಕುಟುಂಬಗಳಿಗೆ ವಿದ್ಯುತ್ ಬಿಲ್ ಶಾಕ್‌!

ದಾವಣಗೆರೆ: '2025ರ ಜುಲೈನಲ್ಲಿ ₹ 250 ವಿದ್ಯುತ್ ಬಿಲ್ ಬಂದಿತ್ತು. ಅದನ್ನು ಕೂಡಲೇ ಪಾವತಿ ಮಾಡಿದ್ದೆವು. ಆ ಬಳಿಕ 3 ತಿಂಗಳು ಬೆಸ್ಕಾಂ ಸಿಬ್ಬಂದಿ ಮನೆ ಕಡೆ ಸುಳಿದಿರಲಿಲ್ಲ. ಬಿಲ್ ಕೂಡ ನೀಡಿರಲಿಲ್ಲ. ನವೆಂಬರ್‌ನಲ್ಲಿ ಬಂದ ಅವರು ಬರೋಬ್ಬರಿ ₹ 8,685 ಮೊತ್ತದ ಬಿಲ್ ಕೈಗಿತ್ತಿದ್ದರು.

ಅನಂತರ ಪ್ರತೀ ತಿಂಗಳು ಬಿಲ್‌ ಮೊತ್ತ ಒಂದೆರಡು ಸಾವಿರ ರೂಪಾಯಿ ಹೆಚ್ಚಾಗುತ್ತಲೇ ಬಂದಿದೆ. ಕಳೆದ ತಿಂಗಳು ಒಟ್ಟು ₹ 13,432 ಮೊತ್ತದ ಬಿಲ್‌ ನೀಡಿದ್ದಾರೆ. ಅದನ್ನು ನೋಡಿ ನಮಗೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ'....

ಭಾಷಾ ನಗರದ 16ನೇ ಕ್ರಾಸ್‌ನ ಸಣ್ಣ ಮನೆಯೊಂದರ ನಿವಾಸಿ ಸಾಹೇರಾ ಬಾನು ಅವರ ಮಾತಿದು.

'ಬೀಡಿ ಕಟ್ಟುವ ಕೆಲಸದ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಮನೆಯಲ್ಲಿ ಫ್ರಿಡ್ಜ್‌ ಇಲ್ಲ. ಟಿವಿ ಇದ್ದರೂ ನೋಡುವುದು ತೀರಾ ಕಡಿಮೆ. ಫ್ಯಾನ್‌ಗಳಾಗಲೀ, ಬಲ್ಬ್‌ಗಳಾಗಲೀ ಜಾಸ್ತಿಯೇನೂ ಇಲ್ಲ. ಆದರೂ ಇಷ್ಟೊಂದು ವಿದ್ಯುತ್‌ ಬಿಲ್ ಯಾಕೆ ಬರುತ್ತಿದೆ ಎಂಬುದು ತಿಳಿಯುತ್ತಿಲ್ಲ' ಎಂದು ಅವರು ನೋವು ತೋಡಿಕೊಂಡರು.

ಇದು ಇವರೊಬ್ಬರದ್ದೇ ಸಂಕಷ್ಟವಲ್ಲ. ಭಾಷಾ ನಗರ, ಶಿವನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳ ನೂರಾರು ಕುಟುಂಬಗಳ ಸಮಸ್ಯೆಯಾಗಿದೆ.

₹ 10,000 ದಿಂದ ₹ 25,000ದ ವರೆಗಿನ ವಿದ್ಯುತ್ ಬಿಲ್‌ಗಳನ್ನು ಹಿಡಿದ ಕುಟುಂಬಗಳ ಸದಸ್ಯರು ಬೆಸ್ಕಾಂ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ದೊರೆತಿಲ್ಲ.

'2025ರ ನವೆಂಬರ್‌ನಲ್ಲಿ ₹ 20,531 ವಿದ್ಯುತ್ ಬಿಲ್ ಬಂದಿದೆ. ಅಲ್ಲಿಯವರೆಗೂ ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ಬರುತ್ತಿತ್ತು. ಕೆಲವೊಮ್ಮೆ ₹ 60, ₹ 70 ಬಂದಾಗ ಕಟ್ಟಿದ್ದೇವೆ. ಇದೀಗ ಜೂನ್‌ನಲ್ಲಿ ಒಟ್ಟು ₹ 24,616 ಬಿಲ್ ಬಂದಿದೆ. ಬೆಸ್ಕಾಂಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ' ಎಂದು ಭಾಷಾನಗರದ ಹಸೀನಾ ಬಾನು ವಿದ್ಯುತ್ ಬಿಲ್ ಪ್ರದರ್ಶಿಸುತ್ತಾ ಅಸಮಾಧಾನ ಹೊರಹಾಕಿದರು.

'2025ರ ಜುಲೈನಲ್ಲಿ ₹ 360 ವಿದ್ಯುತ್ ಬಿಲ್ ಪಾವತಿಸಿದ್ದೆವು. ಆ ಬಳಿಕ ಒಮ್ಮೆಲೇ ಡಿಸೆಂಬರ್‌ನಲ್ಲಿ ಬಂದ ಬೆಸ್ಕಾಂ ಸಿಬ್ಬಂದಿ ₹ 5,454 ಬಿಲ್ ನೀಡಿದರು. ಇದೀಗ ಜೂನ್‌ನಲ್ಲಿ ₹ 7,585 ಬಿಲ್ ಕೊಟ್ಟಿದ್ದಾರೆ. ಸರಾಸರಿ ₹ 350 ರಿಂದ ₹ 400ರ ಬದಲು ಸಾವಿರಾರು ರೂಪಾಯಿ ಬಿಲ್ ಬರುತ್ತಿದೆ' ಎಂದು ಶಿವನಗರದ ಮೆಹಬೂಬಿ ಅವರು ಅಳಲು ತೋಡಿಕೊಂಡರು.

ಶಿವನಗರದ ಫೈರೋಜಾ ಬಾನು, ಪರ್ವಿನ್ ಬಾನು, ರಮೀಜಾ ಅವರದ್ದೂ ಇದೇ ಕಥೆ. ಹತ್ತಾರು ಸಾವಿರ ಮೊತ್ತದ ವಿದ್ಯುತ್ ಬಿಲ್‌ಗಳನ್ನು ಹಿಡಿದು ಸಂಕಷ್ಟ ಹೇಳಿಕೊಳ್ಳುವ ಅಲ್ಲಿನ ನಿವಾಸಿಗಳು, ಆಗಿರುವ ಸಮಸ್ಯೆಯನ್ನು ಯಾರೊಬ್ಬರೂ ಬಗೆಹರಿಸುತ್ತಿಲ್ಲ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದರು.

ಕಾರ್ಮಿಕರೇ ಹೆಚ್ಚು

ಭಾಷಾನಗರ, ಶಿವನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಾರ್ಮಿಕ ಕುಟುಂಬಗಳೇ ಹೆಚ್ಚಾಗಿ ನೆಲೆಸಿವೆ. ಮಹಿಳೆಯರು ಬೀಡಿ ಕಟ್ಟುವುದು ಹಾಗೂ ಟೇಲರಿಂಗ್‌ ಕೆಲಸ ಮಾಡುತ್ತಿದ್ದರೆ, ಪುರುಷರು ಮಂಡಕ್ಕಿ ಭಟ್ಟಿಗಳಲ್ಲಿ ಕೆಲಸ ಮಾಡುವುದು, ಆಟೊ ಓಡಿಸುವುದು ಹಾಗೂ ಇನ್ನಿತರ ವೃತ್ತಿಗಳಲ್ಲಿ ತೊಡಗಿದ್ದಾರೆ.

ವಿದ್ಯುತ್‌ ಬಿಲ್‌ ಪಾವತಿಸದಿದ್ದರೆ ಸಂಪರ್ಕ ಕಡಿತ ಮಾಡುವ ಭಯದಿಂದ ಕೆಲವರು ಅರ್ಧದಷ್ಟಾದರೂ ಮೊತ್ತವನ್ನು ಕಟ್ಟುತ್ತಿದ್ದಾರೆ. ಇನ್ನೂ ಕೆಲವರು ಆಗಿರುವ ಸಮಸ್ಯೆಯನ್ನು ಮೊದಲು ಬಗೆಹರಿಸುವಂತೆ ಒತ್ತಾಯಿಸುತ್ತಿದ್ದಾರೆ.

'ಆರಂಭದಲ್ಲಿ ಸಮಸ್ಯೆಯಾಗಿದೆ. ಮುಂದಿನ ತಿಂಗಳು ಸರಿಯಾಗುತ್ತದೆ ಎಂದು ಹೇಳಿದ್ದ ಬೆಸ್ಕಾಂ ಸಿಬ್ಬಂದಿ, ಇದೀಗ ನಿಮ್ಮ ಮನೆಗಳ ಮೀಟರ್ ಸರಿಯಿಲ್ಲ, ಬದಲಾಯಿಸಬೇಕು ಎನ್ನುತ್ತಿದ್ದಾರೆ' ಎಂದು ಹತ್ತಾರು ಸಾವಿರದ ಬಿಲ್‌ ಹಿಡಿದಿದ್ದ ಮಹಿಳೆಯರು ದೂರಿದರು.

-ಜಬೀನಾ ಖಾನಂ, ನೆರಳು ಬೀಡಿ ಯೂನಿಯನ್ ಅಧ್ಯಕ್ಷೆಸಣ್ಣ ಸಣ್ಣ ಶೆಡ್‌ಗಳಂತಿರುವ ಮನೆಗಳಲ್ಲಿ ಹತ್ತಾರು ಸಾವಿರ ಬಿಲ್ ಬರುವಷ್ಟು ವಿದ್ಯುತ್ ಬಳಕೆ ಸಾಧ್ಯವಿಲ್ಲ. ಬೆಸ್ಕಾಂ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು. -ಕರಿಬಸಪ್ಪ ಎಂ., ಮುಖಂಡ, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕಬೆಸ್ಕಾಂ ಸಿಬ್ಬಂದಿ ಹಣ ಪಡೆದರೂ ರಶೀದಿ ನೀಡಿಲ್ಲ ಎಂಬ ಆರೋಪ ಇದೆ. ವಿದ್ಯುತ್ ಬಿಲ್ ಸಮಸ್ಯೆಯನ್ನು ಸರಿಪಡಿಸದಿದ್ದರೆ ಬೆಸ್ಕಾಂ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-43-1066758866

Dailyhunt
Disclaimer: This content has not been generated, created or edited by Dailyhunt. Publisher: Prajavani