ದಾವಣಗೆರೆ: ಬೆಳೆಸಾಲ ಪಡೆಯುವ ರೈತರು ಬೆಳೆ ವಿಮೆ ಯೋಜನೆಗೆ ಆಯಾ ಬ್ಯಾಂಕ್ ಮೂಲಕವೇ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ವಿಮೆ ನೋಂದಣಿ ಮಾಡಿಸಲು ಬ್ಯಾಂಕ್‌ಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ರೈತರು ಗೊಂದಲಕ್ಕೆ ಸಿಲುಕಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ, ರೈತರು ಬೆಳೆಸಾಲ ಪಡೆಯುವ ಹಂತದಲ್ಲೇ 'ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಪುನರ್ ರೂಪಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ'ಗೆ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ, ಪ್ರಸಕ್ತ ಸಾಲಿನಲ್ಲಿ ತೀವ್ರ ಬರ ಎದುರಾಗುವ ಆತಂಕ ತಲೆದೋರಿದ್ದರೂ ಈವರೆಗೆ ಶೇ 10ರಷ್ಟು ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ.
'ಬ್ಯಾಂಕ್‌ಗಳು ತಮ್ಮಲ್ಲಿ ಸಾಲ ಪಡೆದವರಿಂದ 'ನಮ್ಮ ಬೆಳೆಗೆ ವಿಮೆ ಮಾಡಿಸುವುದಿಲ್ಲ' ಎಂಬ ಅರ್ಜಿಗೆ
(ಆಪ್ಟ್ ಔಟ್) ಸಹಿ ಮಾಡಿಸಿಕೊಳ್ಳುತ್ತಿವೆಯೇ ಹೊರತು ನೋಂದಣಿ ಮಾಡಿಸುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆಯದ ರೈತರಿಗಷ್ಟೇ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಸ್ವಇಚ್ಛೆಯಿಂದ ಬೆಳೆ ವಿಮೆ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರಣದಿಂದ ಅಲ್ಲಿಯೂ ವಿಮೆ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ರೈತರು ಅಳಲು
ತೋಡಿಕೊಳ್ಳುತ್ತಿದ್ದಾರೆ.
ಸಿಎಸ್‌ಸಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆ ನೋಂದಣಿ ಮಾಡಿಸಲು ಸಾಲ ಪಡೆಯದ ದೃಢೀಕರಣದ ಜೊತೆಗೆ ಘೋಷಣಾ ಪತ್ರ, ಪಹಣಿ, ಆಧಾರ್ ಕಾರ್ಡ್, ಬೆಳೆಯ ವಿವರ ನೀಡಬೇಕಿದೆ.
ವಿಮೆ ಪರಿಹಾರ ಮಂಜೂರಾದ ಸಂದರ್ಭದಲ್ಲಿ ನಡೆಸಲಾಗುವ ಅಗತ್ಯ ಪರಿಶೀಲನೆ ಹಾಗೂ ಆಡಿಟ್ ವೇಳೆ ಕೃಷಿ ಸಾಲ ಪಡೆದಿರುವುದು ಗೊತ್ತಾದರೆ, ಅಂತಹ ಅರ್ಜಿಗಳನ್ನು ತಿರಸ್ಕರಿಸುವ ಎಚ್ಚರಿಕೆ ನೀಡಲಾಗಿದೆ.
ಬ್ಯಾಂಕ್‌ಗಳು ತೋರುತ್ತಿರುವ ನಿರಾಸಕ್ತಿಯಿಂದ ಮಧ್ಯವರ್ತಿಗಳಿಗೆ ಅನುಕೂಲವಾಗಿದೆ. ಕಳೆದ ಹಂಗಾಮಿನಲ್ಲಿ ಬೆಳೆ ವಿಮೆ ಅಕ್ರಮದಲ್ಲಿ ಭಾಗಿಯಾಗಿದ್ದ ಏಜೆನ್ಸಿಯ ಪ್ರತಿನಿಧಿಗಳು ಹಾಗೂ ಮಧ್ಯವರ್ತಿಗಳು ಪ್ರೀಮಿಯಂ ಹಣ ಕಟ್ಟುವ ಆಮಿಷ ಒಡ್ಡಿ, ಸಾವಿರಾರು ರೈತರ ಪಹಣಿ ಹಾಗೂ ಆಧಾರ್ ಸಂಖ್ಯೆ ಪಡೆದಿದ್ದರು. ಅವರು ನೋಂದಣಿ ಮಾಡಿಸಿದ್ದ ರೈತರಿಗೆ ಉತ್ತಮ ಮಳೆಯಿಂದಾಗಿ ಗರಿಷ್ಠ ಇಳುವರಿ ಲಭಿಸಿದ್ದರೂ ಪೂರ್ಣಪ್ರಮಾಣದ ಪರಿಹಾರವೂ ಸಿಕ್ಕಿತ್ತು. ಇಂತಹ ಅಕ್ರಮಗಳು ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಪತ್ತೆಯಾಗಿದ್ದವು. ಈ ಸಂಬಂಧ ಏಜೆನ್ಸಿಯ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
'ಸರ್ಕಾರದಿಂದ ನಮಗೆ ಯಾವ ಮಾರ್ಗಸೂಚಿಯೂ ಬಂದಿಲ್ಲ. ಹಾಗಾಗಿ, ನಾವು ಬ್ಯಾಂಕ್‌ನಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ' ಎಂದು ಹರಿಹರ ತಾಲ್ಲೂಕಿನ ಗ್ರಾಮೀಣ ಬ್ಯಾಂಕ್‌ವೊಂದರ ವ್ಯವಸ್ಥಾಪಕರು 'ಪ್ರಜಾವಾಣಿ'ಗೆ ತಿಳಿಸಿದರು.
'ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿ ಎರಡು ವಾರಗಳಾದರೂ ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ನಾವು ಕೇಳಿದರೂ ನೋಂದಣಿ ಮಾಡದೆ, ಬೆಳೆ ಸಾಲ ನವೀಕರಣದ ಸಂದರ್ಭದಲ್ಲಿ ಆಪ್ಟ್ ಔಟ್ ಅರ್ಜಿಗೆ ಸಹಿ ಮಾಡಿಸಿಕೊಂಡಿದ್ದಾರೆ' ಎಂದು ಹುಬ್ಬಳ್ಳಿ ತಾಲ್ಲೂಕು ಶರೇವಾಡ ಹಾಗೂ ಕುಸುಗಲ್ ಗ್ರಾಮಗಳ ರೈತರಾದ ಶಿವಾನಂದ, ನಾಗರಾಜ ಮತ್ತಿತರರು ದೂರಿದರು.
'ಸಿಎಸ್‌ಸಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆ ನೋಂದಣಿ ಮಾಡಿಸಬಹುದು. ಆದರೆ ಆಡಿಟ್ ವೇಳೆ ಬೆಳೆ ಹೊಂದಾಣಿಕೆ ಆಗದಿದ್ದರೆ ಅರ್ಜಿ ತಿರಸ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ತೀವ್ರ
ಆತಂಕ ಎದುರಾಗಿದೆ. ಪ್ರಸಕ್ತ ಮುಂಗಾರು ಕೈಕೊಟ್ಟಿದ್ದರಿಂದ ಸಾಲದ ಹೊರೆ ಹೆಚ್ಚಿದ್ದು, ಬೆಳೆ ವಿಮೆ ಪರಿಹಾರಕ್ಕೆ ಅರ್ಹತೆ ದೊರೆಯುವುದೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ' ಎಂದು ಅವರು ಹೇಳಿದರು.
'ಸಾಲ ಪಡೆಯಬಹುದಾದ ಬೆಳೆಯನ್ನು ಉದ್ದೇಶಿತ ಬೆಳೆಯಾಗಿ (ಪ್ರಪೋಸ್ಡ್ ಕ್ರಾಪ್) ವಿಮೆಗೆ ನೋಂದಣಿ ಮಾಡಿಸಬಹುದು. ಒಂದೊಮ್ಮೆ ಮಳೆ ಕೈಕೊಟ್ಟು ಅದಕ್ಕೆ ಪರ್ಯಾಯವಾಗಿ ಬೇರೆ ಬೆಳೆ ಬೆಳೆದರೆ ಅದನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ನಮಗೆ ತೊಂದರೆಯಾಗಲಿದೆ' ಎಂದು ರೈತರು ಹೇಳಿದ್ದಾರೆ.
ಟಿ.ಎಚ್. ಅಳಗವಾಡಿ, ಗ್ರಾಮ ಒನ್ ಕೇಂದ್ರದ ಸಂಚಾಲಕರೈತರು ಬೆಳೆ ಸಾಲ ಮಾಡಿಲ್ಲ ಎಂದು ನಮೂದಿಸಿದರೆ ಮಾತ್ರ ನೋಂದಣಿ ಮಾಡಿಸಬಹುದು ನಾವು ಸದ್ಯಕ್ಕೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದೇವೆ.ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿಕೆಲ ಜಿಲ್ಲೆಗಳಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗೆ ಸಾಲ ನೀಡಲಾಗಿದೆ. ಬಹುತೇಕರು ಹೆಸರು, ಮೆಕ್ಕೆಜೋಳಕ್ಕೆ ವಿಮೆ ಮಾಡಿಸುತ್ತಿದ್ದಾರೆ. ಇದರಿಂದ ಆಡಿಟ್ ವೇಳೆ ಸಮಸ್ಯೆ ಆಗಲಿದೆ.ಪ್ರೀಮಿಯಂ ಭರಿಸುವ ಆಮಿಷ
ಪ್ರತಿವರ್ಷ ಮಧ್ಯವರ್ತಿಗಳು ಸಂಪೂರ್ಣ ಪ್ರೀಮಿಯಂ ಹಣ ಭರಿಸುವ ಆಮಿಷ ಒಡ್ಡಿ, ಆನ್‌ಲೈನ್ ಪೋರ್ಟಲ್‌ನಲ್ಲಿ ರೈತರ ಬೆಳೆ ನೋಂದಣಿ ಮಾಡಿಸುತ್ತಾರೆ. ವಿಮಾ ಪರಿಹಾರ ಮೊತ್ತದಲ್ಲಿ ಅರ್ಧದಷ್ಟನ್ನು ಪಡೆದು ಕೃಷಿಕರು ಹಾಗೂ ವಿಮಾ ಕಂಪನಿಗಳಿಗೆ ಮೋಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲೆಂದೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೃಷಿ ಇಲಾಖೆ ಆಯುಕ್ತರು ಆಯಾ ಬ್ಯಾಂಕ್‌ಗಳಲ್ಲೇ ಬೆಳೆ ವಿಮೆ ನೋಂದಣಿ ಕಡ್ಡಾಯಗೊಳಿಸಿ ಆದೇಶಿಸಿದ್ದಾರೆ.

