Dailyhunt Logo
  • Light mode
    Follow system
    Dark mode
    • Play Story
    • App Story
ದಕ್ಷಿಣ ಕನ್ನಡ | ಕಡಲ್ಕೊರೆತ: ತುರ್ತು ಪರಿಹಾರಕ್ಕೆ ಶಿಫಾರಸು

ದಕ್ಷಿಣ ಕನ್ನಡ | ಕಡಲ್ಕೊರೆತ: ತುರ್ತು ಪರಿಹಾರಕ್ಕೆ ಶಿಫಾರಸು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸಿರುವ ತಾಂತ್ರಿಕ ಸಮಿತಿಯು ಸಲ್ಲಿರುವ ಕರಡು ವರದಿಯಲ್ಲಿ, ಬಟ್ಟಪ್ಪಾಡಿ, ಉಚ್ಚಿಲ, ಸೋಮೇಶ್ವರ, ಪಣಂಬೂರು, ಹೊಸಬೆಟ್ಟು ಮತ್ತು ಹಳೆಯಂಗಡಿ ಕಡಲತೀರಗಳಲ್ಲಿ ತುರ್ತು ಪರಿಹಾರ ಕಾಮಗಾರಿಗೆ ಶಿಫಾರಸು ಮಾಡಿದೆ.

ಕರಾವಳಿ ನಿರ್ವಹಣಾ ಯೋಜನೆ ಅಡಿಯಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಗಳನ್ನು ಒಳಗೊಂಡ 320 ಕಿ.ಮೀ ಉದ್ದದ ಕರ್ನಾಟಕ ಕರಾವಳಿಯಲ್ಲಿ ಈ ಅಧ್ಯ ಯನ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲವಾಹಿನಿ ಮ್ಯಾನೇಜ್‌ ಮೆಂಟ್ ಸರ್ವಿಸಸ್ ಎಂಬ ಏಜೆನ್ಸಿಯು ಕಡಲ್ಕೊರೆತ ಬಾಧಿತ 12 ಸ್ಥಳಗಳಲ್ಲಿ ಆರು ತಿಂಗಳ ಅಧ್ಯಯನ ನಡೆಸಿ 222 ಪುಟಗಳ ಕರಡು ವರದಿಯನ್ನು ಸಲ್ಲಿಸಿದೆ. ಇನ್ನೆರಡು ಜಿಲ್ಲೆಗಳಲ್ಲಿ ಬೇರೆ ಬೇರೆ ಏಜೆನ್ಸಿಗಳು ಈ ಹೊಣೆ ನಿರ್ವಹಿಸಿವೆ ಎಂದು ಮೂಲಗಳು ತಿಳಿಸಿವೆ.

'ಚೆನ್ನೈನ ಕರಾವಳಿ ಸುಸ್ಥಿತ ನಿರ್ವಹಣೆಯ ರಾಷ್ಟ್ರ್ರೀಯ ಕೇಂದ್ರ (ಎನ್‌ಸಿಎಸ್‌ಸಿಎಂ) ಕರಾವಳಿ ನಿರ್ವ ಹಣಾ ಯೋಜನೆಗೆ ಸಂಬಂಧಿಸಿ ವರದಿ ನೀಡಿತ್ತು. ಇದರ ಪ್ರಕಾರ ಗುರುತಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಟ್ಟಪ್ಪಾಡಿ, ಸೋಮೇಶ್ವರ, ಉಚ್ಚಿಲ, ಉಳ್ಳಾಲ, ಪಣಂಬೂರು, ಹೊಸಬೆಟ್ಟು, ಹಳೆಯಂಗಡಿ, ಸುರತ್ಕಲ್ ಕಡಲತೀರ, ದೀಪಸ್ತಂಭ, ರೆಡ್‌ ರಾಕ್ ಬೀಚ್, ಮೂಲ್ಕಿ ಹಾಗೂ ಸಸಿಹಿತ್ಲು ಸೇರಿ ಕಡಲ್ಕೊರೆತ ಉಂಟಾಗುವ ಒಟ್ಟು 12 ಸ್ಥಳಗಳಲ್ಲಿ ₹1 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕ್ಷೇತ್ರ ಸಮೀಕ್ಷೆ, ದತ್ತಾಂಶ ಸಂಗ್ರಹ, ಡ್ರೋನ್ ಸರ್ವೆ, ತಜ್ಞರೊಂದಿಗೆ ಸಮಾಲೋಚನೆ ಹೀಗೆ ವಿವಿಧ ಆಯಾ ಮಗಳನ್ನು ಅಧ್ಯಯನ ಮಾಡಲಾಗಿದೆ. ಮಾನವ ಹಸ್ತಕ್ಷೇಪದಿಂದ ಕಡಲ್ಕೊರೆತ ಸಂಭವಿಸುತ್ತಿದೆಯೇ ಅಥವಾ ಇದು ನೈಸರ್ಗಿಕ ಪ್ರಕ್ರಿಯೆ ಭಾಗವೇ ಎಂಬುದರ ಕಾರಣ ವಿಶ್ಲೇಷಿಸಿ, ಪ್ರತಿಯೊಂದು ಸ್ಥಳಕ್ಕೆ ಪ್ರತ್ಯೇಕ ಪರಿಹಾರ ಕ್ರಮಗಳು, ಸಂರಕ್ಷಣಾ ಕ್ರಮಗಳನ್ನು ವರದಿ ಸೂಚಿಸಿದೆ ಎಂದು ಅವರು ಮಾಹಿತಿ ನೀಡಿದರು.

ಕಡಲ್ಕೊರೆತದ ಶಾಶ್ವತ ಪರಿಹಾರಕ್ಕೆ ಬಟ್ಟಪ್ಪಾಡಿ ಮತ್ತು ಹೊಸಬೆಟ್ಟುವಿನಲ್ಲಿ ಸಮುದ್ರ ದಂಡೆಯಿಂದ ಆಚೆ ದಿಬ್ಬಗಳ ರಚನೆ (ಆಫ್‌ ಶೋರ್‌ ರೀಫ್‌), ಉಚ್ಚಿಲ ಹಾಗೂ ಸೋಮೇಶ್ವರದಲ್ಲಿ ಕಡಲ ತಡೆಗೋಡೆಯ (ಸೀ ವಾಲ್) ಜೊತೆಗೆ ಶಾರ್ಟ್ ಗ್ರೊಯಿನ್ಸ್ ಅಳವಡಿಕೆ, ಉಳ್ಳಾಲದಲ್ಲಿ ತಡೆಗೋಡೆ ನಿರ್ಮಾಣ, ಪಣಂಬೂರು ಕಡಲತೀರಕ್ಕಿಂತ ತುಸು ದೂರದಲ್ಲಿ ದಿಬ್ಬಗಳ ರಚನೆ (ಆಫ್‌ ಶೋರ್ ಡಿಟ್ಯಾಚ್ಡ್ ರೀಫ್) ವರದಿಯಲ್ಲಿ ಸಲಹೆ ನೀಡಲಾಗಿದೆ. ಸುರತ್ಕಲ್ ಕಡಲತೀರ, ಸುರತ್ಕಲ್ ದೀಪಸ್ತಂಭ, ರೆಡ್ ರಾಕ್ ಬೀಚ್, ಮೂಲ್ಕಿ, ಹಳೆಯಂಗಡಿಯಲ್ಲಿ ಸದ್ಯಕ್ಕೆ ನಿರ್ಮಾಣಕ್ಕಿಂತ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಸಸಿಹಿತ್ಲುವಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ ಎಂದು ತಾಂತ್ರಿಕ ವರದಿ ಹೇಳಿದೆ ಎಂದು ಅವರು ವಿವರಿಸಿದರು.

'ಅಹವಾಲು ಸಭೆ ನಂತರ ವರದಿ ಅಂತಿಮ'

ತಾಂತ್ರಿಕ ಅಧ್ಯಯನದ ಕರಡು ವರದಿ ದೊರೆತಿದೆ. ಕಡಲ್ಕೊರೆತ ಬಾಧಿತ ಜನರು, ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಅಂತಿಮಗೊಳಿಸಲಾಗುತ್ತದೆ. ಈಗಾಗಲೇ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಅಹವಾಲು ಸಭೆಯನ್ನು ಸೋಮೇಶ್ವರದಲ್ಲಿ ನಡೆಸಲಾಗಿದೆ. ಮಂಗಳೂರು ಉತ್ತರ ಮತ್ತು ಮೂಡುಬಿದಿರೆ- ಮೂಲ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಧರ್ ಎಸ್. 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-29-896141620

Dailyhunt
Disclaimer: This content has not been generated, created or edited by Dailyhunt. Publisher: Prajavani