ಮಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಬಳಿಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, 'ಈ ವರ್ಷ ಮಳೆ ಸರಿಯಾಗಿ ಬಂದಿಲ್ಲ.
ಜನವರಿಯಲ್ಲೇ ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ಝಳ ಹೆಚ್ಚುವ ಲಕ್ಷಣಗಳಿವೆ. ಹವಾಮಾನ ವೈಪರೀತ್ಯದ ಪರಿಣಾಮ ಎದುರಿಸಲು ಸನ್ನದ್ದವಾಗಬೇಕಿದೆ' ಎಂದರು.
ತುಳು ಭಾಷೆಯನ್ನು ರಾಜ್ಯದ ಎರಡನೇ ಆಡಳಿತ ಭಾಷೆಯಾಗಿ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಖಾದರ್, 'ಇದು ತುಳುನಾಡಿಗೆ ಸಿಕ್ಕಿದ ಗೌರವ' ಎಂದರು.
'ಭಾಷೆ, ಸಂಸ್ಕೃತಿಗಳನ್ನು ಕಾಪಾಡಿಕೊಂಡು ಸೌಹಾರ್ದ ಪ್ರೀತಿಯಿಂದ ಬದುಕುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು. ಎಲ್ಲ ಮನೆಗಳಲ್ಲಿ , ಶಾಲೆಗಳಲ್ಲಿ, ಆಡಳಿತದಲ್ಲಿ ತಂತ್ರಜ್ಞಾನದಲ್ಲಿ ಕನ್ನಡಕ್ಕೆ ಗೌರವಯುತ ಸ್ಥಾನ ಸಿಗಬೇಕಿದೆ' ಎಂದರು.
'ಕನ್ನಡ ಅಭಿಮಾನ ಎಂದರೆ ಇತರ ಭಾಷೆಗಳನ್ನು ದೂರ ಇಡುವುದಲ್ಲ. ಭಾಷೆ ಅಭಿಮಾನ ಸಂಕುಚಿತ ಭಾವನೆ ಆಗಬಾರದು. ನಮ್ಮ ಭಾಷೆ ಬೆಳೆಯಬೇಕಾದರೆ ಬೇರೆ ಬೇರೆ ಭಾಷೆಗಳನ್ನು ಕಲಿತು ಗೌರವಿಸಬೇಕು. ಭಾಷೆಯನ್ನು ಇನ್ನಷ್ಟು ಬೆಳೆಸಬೇಕು. ಕನ್ನಡ ತಂತ್ರಜ್ಞಾನದ ಬೆಳವಣಿಗೆಗೆ ಕೊಡುಗೆ ನೀಡುವ ಭಾಷೆ ಆಗಬೇಕು. ಯುವಜನರು ಜಗತ್ತಿನ ಯಾವುದೇ ಭಾಷೆ ಕಲಿಯಿರಿ,ಆದರೆ ಕನ್ನಡ ಮರೆಯದಿರಿ' ಎಂದರು.
'ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರ ಪಡಿತರ ಚೀಟಿ ವಿತರಿಸಲಾಗುವುದು. ನಗರದಲ್ಲಿ ವಿದ್ಯುತ್ ಕೇಬಲ್ ನೆಲದಡಿ ಅಳವಡಿಸುವ ಯೋಜನೆಯನ್ನು ₹ 166 ಕೋಟಿಯಲ್ಲಿ ಜಾರಿಗೆ ತರಲಾಗುವುದು. ಉಳ್ಳಾಲ ತಾಲ್ಲೂಕು ಆಸ್ಪತ್ರೆಯನ್ನು ಮುಡಿಪು ಕೇಂದ್ರದಲ್ಲಿ ಆರಂಭಿಸಲಾಗುವುದು' ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಕಾರ್ಭಾರಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್ , ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಹಾಜರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 54 ಸಂಘ ಸಂಸ್ಥೆಗಳನ್ನು ಹಾಗೂ 120 ಮಂದಿಯನ್ನು ಸನ್ಮಾನಿಸಲಾಯಿತು.
ಉತ್ತಮ ಪಥಸಂಚಲನ ನಡೆಸಿದ ವಿದ್ಯಾರ್ಥಿ ತಂಡಗಳಾದ ಉರ್ವ ಅಶೋಕನಗರ ಎಸ್ಡಿಎಂ ಶಾಲೆಯ ಗೈಡ್ಸ್ ತಂಡ ಹಾಗೂ ಸೇಂಟ್ ತೆರೆಸಾ ಶಾಲೆಯ ರೋಡ್ ಸೇಫ್ಟಿ ಬಾಲಕರ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

