ಮೈಸೂರು: 'ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಧಾರ್ಮಿಕ ಆಚರಣೆಯ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಕಂಬಳ ಕ್ರೀಡೆ ಸೇರಿಸುವುದು ಸರಿಯಲ್ಲ' ಎಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, 'ಕಂಬಳ ಕರಾವಳಿಯ ನೆಲದ ಕ್ರೀಡೆ.
ಅದಕ್ಕೂ ಸಾಕಷ್ಟು ಗೌರವ- ಮಹತ್ವವಿದೆ. ಅಲ್ಲಿನ ಆಚರಣೆಯನ್ನು ಇಲ್ಲಿಗೆ ತಂದು, ಪ್ರದರ್ಶನಕ್ಕೆಂದು ನಡೆಸುವುದನ್ನು ಖಂಡಿಸುತ್ತೇನೆ' ಎಂದರು.
'ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದೆ. ರೈತರೇ ಬೆಳೆ ಬೆಳೆಯಬೇಡಿ, ನೀರಿಗಾಗಿ ಒತ್ತಡ ಹಾಕಬೇಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಹೀಗಿರುವಾಗ, 2 ದಿನಗಳ ಕಂಬಳಕ್ಕೆ ₹ 8 ಕೋಟಿ ವ್ಯಯಿಸಲು ಹೊರಟಿರುವುದು ಸರಿಯಲ್ಲ. ಆಯಾ ನೆಲದ ಆಚರಣೆಗಳು ಅಲ್ಲಲ್ಲೇ ನಡೆದರಷ್ಟೆ ಸಮಂಜಸ' ಎಂದು ಪ್ರತಿಕ್ರಿಯಿಸಿದರು.
'ದಸರೆಯನ್ನು ಅದ್ದೂರಿಯಾಗಿ ನಡೆಸಬೇಕೋ, ಸರಳವಾಗಿರಬೇಕೋ ಎಂಬುದನ್ನು ರಾಜ್ಯದ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಿದರೆ ನಮ್ಮ ಬೆಂಬಲ ಇರುತ್ತದೆ. ಬರಗಾಲ ಎದುರಾದಾಗ ಸರಳವಾಗಿ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಮಳೆಯಿಲ್ಲದೇ ಜನ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ, ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ' ಎಂದು ಹೇಳಿದರು.

