Tuesday, 22 Sep, 11.25 am ಪ್ರಜಾವಾಣಿ

ರಾಷ್ಟ್ರೀಯ
ದೆಹಲಿ ಗಲಭೆಗೆ ₹1.61 ಕೋಟಿ ಪಡೆದಿದ್ದ ತಾಹಿರ್ ಹುಸೇನ್, ಇಶ್ರತ್, ಇತರ ಆರೋಪಿಗಳು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಎಸಗಲು ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಹೋರಾಟಗಾರ ಖಾಲಿದ್ ಸೈಫಿ ಮತ್ತು ಎಎಪಿಯ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ ₹1.61 ಕೋಟಿ ಹಣ ಪಡೆದಿದ್ದಾರೆ ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ (ಚಾರ್ಜ್‌ಶೀಟ್‌) ಉಲ್ಲೇಖಿಸಲಾಗಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಫಿಯಾ ಉರ್ ರೆಹಮಾನ್ ಮತ್ತು ವಿದ್ಯಾರ್ಥಿ ಮೀರನ್ ಹೈದರ್ ಅವರ ಹೆಸರೂ ಹಣಪಡೆದವರ ಪಟ್ಟಿಯಲ್ಲಿ ಇದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಶ್ರತ್, ತಾಹಿರ್ ಹುಸೇನ್ ಸೇರಿದಂತೆ 15 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

'2019ರ ಡಿಸೆಂಬರ್ 1ರಿಂದ 2020ರ ಫೆಬ್ರುವರಿ 26ರ ವರೆಗೆ ಇಶ್ರತ್ ಜಹಾನ್, ಖಾಲಿದ್ ಸೈಫಿ, ತಾಹಿರ್ ಹುಸೇನ್, ರೆಹಮಾನ್, ಹೈದರ್ ಅವರ ಬ್ಯಾಂಕ್ ಖಾತೆಗಳಿಗೆ ಮತ್ತು ನಗದು ರೂಪದಲ್ಲಿ ಒಟ್ಟು ₹1,61,33,703 ಸಂದಾಯವಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಪೈಕಿ ₹1,48,01186 ಮೊತ್ತವನ್ನು ಡ್ರಾ ಮಾಡಿಕೊಂಡಿದ್ದ ಆರೋಪಿಗಳು ಗಲಭೆಗೆ ಸಂಚು ರೂಪಿಸಲು, ಪ್ರತಿಭಟನೆಗೆ ಬಳಸಿಕೊಂಡಿದ್ದರು' ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

: ದೆಹಲಿ ಹಿಂಸಾಚಾರ: ತಪ್ಪೊಪ್ಪಿಕೊಂಡ ತಾಹಿರ್ ಹುಸೇನ್

ಡಿಸೆಂಬರ್ 10ರಂದು ಆರೋಪಿ ಇಶ್ರತ್ ಜಹಾನ್ ಬ್ಯಾಂಕ್ ಖಾತೆಗೆ ಕಾರ್ಪೊರೇಷನ್ ಬ್ಯಾಂಕ್ ಖಾತೆಯಿಂದ ₹4 ಲಕ್ಷ ವರ್ಗಾವಣೆಯಾಗಿತ್ತು. ಆ ಬ್ಯಾಂಕ್ ಖಾತೆ ಮಹಾರಾಷ್ಟ್ರದ ಮಹಾದೇವ್ ವಿಜಯ್ ಕಾಸ್ಟೆ ಎಂಬುವವರಿಗೆ ಸೇರಿದ್ದಾಗಿದೆ. ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಜಹಾನ್ ನೇರ ಪರಿಚಯವಿಲ್ಲವೆಂದೂ ಮಹಾರಾಷ್ಟ್ರದ ನಿವಾಸಿ ಸಮೀರ್ ಅಬ್ದುಲ್ ಸಾಯಿ ಎಂಬುವವರ ಕಾರು ಚಾಲಕ ತಾನು ಎಂದೂ ಹೇಳಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸಮೀರ್ ಅಬ್ದುಲ್ ಸೂಚನೆಯಂತೆ ಐಸಿಐಸಿಐ ಬ್ಯಾಂಕ್‌ನಿಂದ ₹4,31,700 ಚಿನ್ನದ ಸಾಲ ಪಡೆದಿರುವುದಾಗಿಯೂ ಅದನ್ನು ಕಾರ್ಪೊರೇಷನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದಾಗಿಯೂ ಮಹಾದೇವ್ ವಿಜಯ್ ತಿಳಿಸಿದ್ದಾರೆ. ಒಟ್ಟು ಮೊತ್ತದ ಪೈಕಿ ₹4 ಲಕ್ಷವನ್ನು ಜಹಾನ್ ಖಾತೆಗೆ ಸಮೀರ್ ಅಬ್ದುಲ್ ಅವರೇ ವರ್ಗಾಯಿಸಿದ್ದಾರೆ ಎಂದೂ ಮಹಾದೇವ್ ವಿಜಯ್ ತಿಳಿಸಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಮೀರ್ ಅಬ್ದುಲ್ ಸಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಮ್ರಾನ್‌ ಸಿದ್ದಿಕಿ ಎಂಬುವವರ ಜತೆ ಉದ್ಯಮ ಸಹಭಾಗಿತ್ವ ಹೊಂದಿದ್ದುದು ತಿಳಿದುಬಂದಿದೆ.

: ದೆಹಲಿ ಗಲಭೆ: 10 ಸಾವಿರ ಪುಟದ ದೋಷಾರೋಪ ಪಟ್ಟಿ ಸಲ್ಲಿಕೆ

'2019ರ ಡಿಸೆಂಬರ್‌ 9ರಂದು ಇಮ್ರಾನ್ ಸಿದ್ದಿಕಿ ಅವರು ಜಹಾನ್, ಗುಲ್ಜರ್ ಅಲಿ ಹಾಗೂ ಬಿಲಾಲ್ ಅಹ್ಮದ್ ಎಂಬುವವರಿಗೆ ಸೇರಿದ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಸಮೀರ್ ಅಬ್ದುಲ್‌ಗೆ ನೀಡಿ ತಕ್ಷಣವೇ ₹10 ಲಕ್ಷ ವರ್ಗಾವಣೆ ಮಾಡಲು ತಿಳಿಸಿದ್ದರು. ಇಷ್ಟೊಂದು ಮೊತ್ತದ ಹಣ ವರ್ಗಾವಣೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದಾಗ ಜಹಾನ್ ಅವರ ಖಾತೆಗೆ ತುರ್ತಾಗಿ ₹5 ಲಕ್ಷ ವರ್ಗಾವಣೆ ಮಾಡಲು ಸೂಚಿಸಿದ್ದರು' ಎಂದೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾನು ಇಶ್ರತ್ ಜಹಾನ್‌ನ ಮೈದುನನೆಂದೂ ಆಕೆಯಿಂದ ಉದ್ಯಮ ಚಟುವಟಿಕೆಗಾಗಿ ₹4 ಲಕ್ಷ ಪಡೆದಿದ್ದೆ ಎಂದು ಇಮ್ರಾನ್ ಹೇಳಿದ್ದಾರೆ. ಆದರೆ, ಸಾಲ ಪಡೆದಿರುವ ಬಗ್ಗೆ ಐಟಿ ರಿಟರ್ನ್ಸ್‌ನಲ್ಲಿ ಉಲ್ಲೇಖಿಸಿರಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

2020ರ ಜನವರಿ 10ರಂದು ಇಶ್ರತ್ ಜಹಾನ್ ಬ್ಯಾಂಕ್ ಖಾತೆಗೆ ₹1,41,000 ನಗದು ಜಮೆ ಮಾಡಲಾಗಿತ್ತು. ₹4,60,900 ಮೊತ್ತವನ್ನು ಆಕೆ ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿರುವುದೂ ತಿಳಿದುಬಂದಿದೆ ಎಂದೂ ಪೊಲೀಸರು ಹೇಳಿದ್ದಾರೆ.

: ದೆಹಲಿ ಗಲಭೆ: ಹಿಂಸೆಯಲ್ಲಿ ಪೊಲೀಸರ ಪಾತ್ರದ ಕುರಿತು ತನಿಖೆಗೆ ಆಗ್ರಹ

'ಈ ಹಣವನ್ನು ಪ್ರತಿಭಟನಾ ಸ್ಥಳಗಳ ನಿರ್ವಹಣೆಗೆ, ಆರೋಪಿ ಅಬ್ದುಲ್ ಖಾಲಿದ್ ಮೂಲಕ ಆಯುಧಗಳ ಖರೀದಿಗೆ ಆಕೆ ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ. ಆಯುಧಗಳನ್ನು ಗಲಭೆ ವೇಳೆ ಬಳಸಲಾಗಿದೆ' ಎಂದೂ ಆರೋಪಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top