ನವದೆಹಲಿ: ಭಾರಿ ಸುದ್ದಿಮಾಡಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ(ಎಬಿವಿಪಿ) ಅಭ್ಯರ್ಥಿಗಳು ಕೇಂದ್ರ ಸಮಿತಿಯ ನಾಲ್ಕು ಹುದ್ದೆಗಳ ಪೈಕಿ ಮೂರರಲ್ಲಿ ಗೆಲುವು ಪಡೆದಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೀಪಾಂಶು ಶೋಕಿನ್ ಅವರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐನಲ್ಲಿ ಗುರುತಿಸಿಕೊಂಡಿದ್ದ ದೀಪಾಂಶುಗೆ ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದರು.
ಎನ್‌ಎಸ್‌ಯುಐ ಯಾವುದೇ ಸ್ಥಾನ ಪಡೆಯಲು ವಿಫಲವಾಗಿದೆ. ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳನ್ನು ಎಬಿವಿಪಿ ಗೆದ್ದುಕೊಂಡಿದೆ.
ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ಯಶ್ ಡಬಾಶ್ 24,576 ಮತಗಳನ್ನು ಪಡೆದರೆ, ಎನ್‌ಎಸ್‌ಯುಐನ ವಿಜೈ ಶಂಕರ್ ಮೀನಾ ಅವರನ್ನು 2052 ಮತಗಳಿಂದ ಮಣಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ದೀಪಾಂಶು ಶೋಕಿನ್ ಅವರು 30,615 ಮತಗಳನ್ನು ಪಡೆದು ಗೆಲುವು ಪಡೆದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ಲಕ್ಷ್ಯ ರಾಜ್ ಸಿಂಗ್ 16,615 ಮತಗಳನ್ನು ಪಡೆದರೆ, ಸಮಾಜವಾದಿ ಛಾತ್ರಾ ಸಭಾದ ಅಭ್ಯರ್ಥಿ 15,778 ಮತಗಳನ್ನು ಪಡೆದಿದ್ದಾರೆ.
ಕಾರ್ಯದರ್ಶಿ ಹುದ್ದೆಗೆ ಎಬಿವಿಪಿಯ ರಿಯಾ ಚಾವಡಿ 21,650 ಮತ ಪಡೆದರೆ, ಎನ್‌ಎಸ್‌ಯುಐ ಅಭ್ಯರ್ಥಿ ನಮ್ರತಾ ಚೌಧರಿ 14,869 ಮತಗಳನ್ನು ಪಡೆದಿದ್ದಾರೆ.
ಕಳೆದ ವರ್ಷ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸ್ಥಾನವನ್ನು ಎಬಿವಿಪಿ ಗೆದ್ದಿದ್ದರೆ, ಉಪಾಧ್ಯಕ್ಷ ಸ್ಥಾನವನ್ನು ಎನ್‌ಎಸ್‌ಯುಐ ಗೆದ್ದುಕೊಂಡಿತ್ತು.

