Dailyhunt Logo
  • Light mode
    Follow system
    Dark mode
    • Play Story
    • App Story
ದೆಹಲಿಯಲ್ಲಿ ಮುಂದುವರಿದ ಪ್ರತಿಭಟನೆ: ರಾಹುಲ್, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆ

ದೆಹಲಿಯಲ್ಲಿ ಮುಂದುವರಿದ ಪ್ರತಿಭಟನೆ: ರಾಹುಲ್, ಪ್ರಿಯಾಂಕಾ ಮತ್ತೆ ಪೊಲೀಸ್ ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್‌ ಮಂತರ್‌ ಕಡೆಗೆ ತೆರಳುತ್ತಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಮಂದಿ ವಿರೋಧ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

ರಾಹುಲ್ ಗಾಂಧಿ ಹಾಗೂ ಇತರ ಸಂಸದರು ಮತ್ತು ನಾಯಕರು ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಬಸ್‌ಗಳಲ್ಲಿ ತೆರಳುತ್ತಿದ್ದರು. ಆದರೆ ಪೊಲೀಸರು ಅವರನ್ನು ಮುಂದೆ ಸಾಗದಂತೆ ತಡೆದರು. ಹೀಗಾಗಿ ಅವರು ಮಧ್ಯ ದೆಹಲಿಯ ಶಾಂಗ್ರಿ-ಲಾ ಹೋಟೆಲ್ ಸಮೀಪದ ವೃತ್ತದಲ್ಲಿ ಧರಣಿ ನಡೆಸಿದರು.

ಪ್ರಿಯಾಂಕಾ ಗಾಂಧಿ ಇತರ ಮಹಿಳಾ ನಾಯಕರೊಂದಿಗೆ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು. ಅವರ ಕೈಯಲ್ಲಿ ಸಂವಿಧಾನದ ಪ್ರತಿ ಇತ್ತು.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಜಮಾಯಿಸಿದ್ದರು. ರಾಹುಲ್ ಗಾಂಧಿ ಅವರನ್ನು ಬಲವಂತವಾಗಿ ತೆರವುಗೊಳಿಸಿ, ಹೆಗಲ ಮೇಲೆ ಹೊತ್ತುಕೊಂಡು ಭದ್ರತಾ ಸಿಬ್ಬಂದಿ ಬಸ್‌ನೊಳಗೆ ದಬ್ಬಿದರು.

ರಾಹುಲ್ ಗಾಂಧಿ ಅವರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಕಾಂಗ್ರೆಸ್‌ನ ನಾಯಕರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಉದಯ್ ಭಾನು ಚಿಬ್ ಸೇರಿದಂತೆ ಹಲವರು ಏರಿದರು. ಮುಮ್ತಾಜ್ ಪಟೇಲ್ ಬಸ್‌ನ ಬಾನೆಟ್ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಆಗಮಿಸಿ, ರಸ್ತೆಯಲ್ಲಿ ಮಲಗಿದ್ದ ಪ್ರಿಯಾಂಕಾ ಗಾಂಧಿ ಹಾಗೂ ಇತರ ಮಹಿಳೆಯರನ್ನು ಬಲವಂತವಾಗಿ ತೆರವುಗೊಳಿಸಿ ಬಸ್‌ಗಳಲ್ಲಿ ಕರೆದೊಯ್ಯಲಾಯಿತು.

ಇದಕ್ಕೂ ಮುನ್ನ ಪ್ರತಿಪಕ್ಷ ಸಂಸದರು ಮಧ್ಯ ದೆಹಲಿಯ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನದ ಊಟದ ಸಭೆ ನಡೆಸಿದ್ದರು. ಅಲ್ಲಿಂದ ಅವರು ಬಸ್‌ಗಳಲ್ಲಿ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ತೆರಳಿದರು.

ಮಂಗಳವಾರವೂ ಪ್ರತಿಭಟನೆ ನಡೆಸಿದ್ದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani