Dailyhunt Logo
  • Light mode
    Follow system
    Dark mode
    • Play Story
    • App Story
ದೇಶದ 17 ರಾಜ್ಯಗಳಲ್ಲಿ ಎಸ್‌ಐಆರ್: 5.57 ಕೋಟಿ ಮತದಾರರು ಹೊರಕ್ಕೆ

ದೇಶದ 17 ರಾಜ್ಯಗಳಲ್ಲಿ ಎಸ್‌ಐಆರ್: 5.57 ಕೋಟಿ ಮತದಾರರು ಹೊರಕ್ಕೆ

ವದೆಹಲಿ: 2024ರ ಲೋಕಸಭೆ ಚುನಾವಣೆ ಬಳಿಕ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭಕ್ಕೂ ಮುನ್ನ 17 ರಾಜ್ಯಗಳಲ್ಲಿ ಅಂದಾಜು 57.57 ಲಕ್ಷ ಹೊಸಬರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದರು. ಆದರೆ, ಎಸ್‌ಐಆರ್ ಆರಂಭದ ಬಳಿಕ ಬರೋಬ್ಬರಿ 5.57 ಕೋಟಿ ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ.

ಎಸ್‌ಐಆರ್ ಮೂರನೇ ಹಂತ ಜಾರಿಯಲ್ಲಿರುವ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ವೇಳೆಗೆ 35.50 ಕೋಟಿ ಮತದಾರರಿದ್ದರು. ಬಳಿಕ ಈ ಸಂಖ್ಯೆ ಶೇ 1.62ರಷ್ಟು ಹೆಚ್ಚಳದೊಂದಿಗೆ 36.08 ಕೋಟಿಗೆ ತಲುಪಿತ್ತು. ಆದರೆ ಎಸ್‌ಐಆರ್ ಭಾಗವಾಗಿ ಮತದಾರರ ಕರಡು ಪಟ್ಟಿ ಪ್ರಕಟವಾದ ಬಳಿಕ ಈ ಸಂಖ್ಯೆ 29.93 ಕೋಟಿಗೆ ಕುಸಿದಿದೆ.

ಲೋಕಸಭೆ ಚುನಾವಣೆ ವೇಳೆ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ, ಶೇ 15.7ರಷ್ಟು ಮತದಾರರು ಕರಡು ಪಟ್ಟಿಯಿಂದ ಹೊರಗಿದ್ದಾರೆ. ಎಸ್‌ಐಆರ್ ಪೂರ್ವದಲ್ಲಿ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ ಒಟ್ಟು 6.15 ಕೋಟಿ ಮತದಾರರ ಹೆಸರು ಅಳಿಸಲಾಗಿದ್ದು, ಈ ಪೈಕಿ 1.11 ಕೋಟಿ (ಶೇ 18) ಜನರನ್ನು ಮಾತ್ರ ಮೃತರು ಎಂದು ಗುರುತಿಸಲಾಗಿದೆ. ಉಳಿದವರನ್ನು ಗೈರು, ಶಾಶ್ವತ ಸ್ಥಳಾಂತರ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಮತ್ತು ಇತರ ವರ್ಗಗಳಲ್ಲಿ ಗುರುತಿಸಲಾಗಿದೆ.

ಲೋಕಸಭೆ ಚುನಾವಣೆ ಮತ್ತು ಎಸ್‌ಐಆರ್ ಪ್ರಕ್ರಿಯೆ ಆರಂಭದ ನಡುವೆ ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ ಸೇರಿ 11 ರಾಜ್ಯಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿದ್ದರೆ, ದೆಹಲಿ, ಒಡಿಶಾ, ಉತ್ತರಾಖಂಡ ಸೇರಿ ಆರು ರಾಜ್ಯಗಳಲ್ಲಿ ಇಳಿಕೆ ಕಂಡಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮತದಾರರ ಸಂಖ್ಯೆ ಏರಿಳಿತ: ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ ಕರಡು ಪಟ್ಟಿ ಪ್ರಕಟಣೆ ಬಳಿಕ ಮಹಾರಾಷ್ಟ್ರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 1.59 ಕೋಟಿಗೂ ಅಧಿಕ ಮತದಾರರ ಸಂಖ್ಯೆ ತಗ್ಗಿದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವಿನ ಅವಧಿಯಲ್ಲಿ 41 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದರು. ಆಗ 'ಚುನಾವಣಾ ಆಯೋಗವು ಬಿಜೆಪಿ ಗೆಲುವಿಗಾಗಿ ಮತ ಕಳವಿಗೆ ನೆರವಾಗುತ್ತಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.

ಇದೀಗ 'ಮತದಾರರ ಕರಡು ಪಟ್ಟಿಯಿಂದ ಹೊರಗುಳಿದವರ ಸಂಖ್ಯೆಯು ನನ್ನ ಆರೋಪಕ್ಕೆ ಪುಷ್ಟಿ ನೀಡುತ್ತಿದೆ' ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ ಲೋಕಸಭೆ ಚುನಾವಣೆ ಹೊತ್ತಿಗೆ 1.52 ಕೋಟಿ ಇದ್ದ ಮತದಾರರ ಸಂಖ್ಯೆಯು 2025ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆಗೆ 1.56 ಕೋಟಿಗೆ ತಲುಪಿತ್ತು. ಎಸ್‌ಐಆರ್ ಆರಂಭಕ್ಕೆ ಮುನ್ನ ಇದು 1.45 ಕೋಟಿಗೆ ತಗ್ಗಿತ್ತು ಮತ್ತು ಮತದಾರರ ಕರಡು ಪಟ್ಟಿ ಪ್ರಕಟಣೆ ಬಳಿಕ 97.53 ಲಕ್ಷಕ್ಕೆ ಕುಗ್ಗಿದೆ. ಲೋಕಸಭೆ ಚುನಾವಣೆ ಮತ್ತು ಎಸ್‌ಐಆರ್ ಪ್ರಕ್ರಿಯೆ ನಡುವೆ ಮತದಾರರ ಸಂಖ್ಯೆ ಕುಸಿತ ಕಂಡ ರಾಜ್ಯಗಳ ಪೈಕಿ ಒಡಿಶಾಕ್ಕೆ ಅಗ್ರ ಸ್ಥಾನ. 3.37 ಕೋಟಿಯಿಂದ 3.33 ಕೋಟಿಗೆ ತಗ್ಗಿದ್ದ ಈ ಸಂಖ್ಯೆಯು ಕರಡು ‍ಪಟ್ಟಿ ಪ್ರಕಟಣೆ ಬಳಿಕ 3.13 ಕೋಟಿಗೆ ಕುಸಿದಿದೆ. ಚಂಡೀಗಢದಲ್ಲಿ ಕೂಡ 6.60 ಲಕ್ಷದಿಂದ 5.16 ಲಕ್ಷಕ್ಕೆ (ಶೇ 31.84) ಕಡಿತಗೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani