Tuesday, 20 Oct, 2.55 pm ಪ್ರಜಾವಾಣಿ

ರಾಷ್ಟ್ರೀಯ
ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6ಕ್ಕೆ ಭಾಷಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ 6 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

'ದೇಶದ ನಾಗರಿಕ ಬಂಧುಗಳೊಂದಿಗೆ ಇಂದು ಸಂಜೆ 6ಕ್ಕೆ ಸಂದೇಶ ಹಂಚಿಕೊಳ್ಳಲಿದ್ದೇನೆ' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ. ಆದರೆ, ಯಾವ ವಿಷಯ ಕುರಿತು ಮಾತನಾಡಲಿದ್ದಾರೆ ಎಂದು ಬಹಿರಂಗ ಪಡಿಸಿಲ್ಲ.

ಸಾಲು ಸಾಲು ಹಬ್ಬಗಳು ಬರುತ್ತಿವೆ, ದೇಶದಲ್ಲಿ ಕೋವಿಡ್‌-19 ಒಟ್ಟು ಪ್ರಕರಣಗಳ ಸಂಖ್ಯೆ 75 ಲಕ್ಷ ದಾಟಿದೆ ಹಾಗೂ 1.15 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಆದರೆ, ಪ್ರಧಾನಿ ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಇದನ್ನು ಓದಿ: LIVE | ಪ್ರಧಾನಿ ನರೇಂದ್ರ ಮೋದಿ ಭಾಷಣ: ಲಾಕ್‌ಡೌನ್‌ ಮುಗಿದಿದೆ, ಕೊರೊನಾ ವೈರಸ್‌ ದೇಶದಿಂದ ಹೋಗಿಲ್ಲ...

ಮಾರ್ಚ್‌ನಿಂದ ಹಲವು ಬಾರಿ ದೇಶದ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಜಾರಿಗೆ ತರಲಾದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಹಿಡಿದು ಕೋವಿಡ್‌-19 ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿರುವ ಕ್ರಮಗಳ ವರೆಗೂ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಇದನ್ನು ಓದಿ: Video: ಪ್ರಧಾನಿ ನರೇಂದ್ರ ಮೋದಿ ಮಾತು; ನೇರ ಪ್ರಸಾರ

ದುರ್ಗಾ ಪೂಜೆ, ಈದ್‌-ಮಿಲಾದ್‌, ದೀಪಾವಳಿ ಸೇರಿದಂತೆ ಹಲವು ಹಬ್ಬಗಳಿದ್ದು, ಜನರು ಸುರಕ್ಷತಾ ಕ್ರಮಗಳನ್ನು ಕಡೆಗಣಿಸಿರುವ ಕುರಿತು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ದೇಶದಾದ್ಯಂತ ಲಾಕ್‌ಡೌನ್‌ ಸಡಿಲಗೊಳಿಸುವ ಪ್ರಕ್ರಿಯೆ ಶುರುವಾದಾಗಿನಿಂದ ಕೋವಿಡ್‌-19 ನಿಯಂತ್ರಣದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿರುವಂತೆ ವರ್ತಿಸುತ್ತಿರುವ ಬಗ್ಗೆ ಪ್ರಧಾನಿ ಮೋದಿ ಜೂನ್‌ 30ರ ಭಾಷಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‌ ಧರಿಸುವುದರ ಪ್ರಾಮುಖ್ಯತೆಯನ್ನು ಸಾರಿದ್ದರು.

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ದೇಶದ ಜನರಿಗೆ ಅನುವಾಗುವ ನಿಟ್ಟಿನಲ್ಲಿ ₹20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ ಘೋಷಿಸಿ ಮೇ 12ರಂದು ಮಾತನಾಡಿದ್ದರು. ಸಾಂಕ್ರಾಮಿಕದ ಸಮಯದಲ್ಲಿ ಮುಂದಾಳುಗಳಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೆ ಅಭಿನಂದನೆ ಸಲ್ಲಿಸಲು ಏಪ್ರಿಲ್‌ 5ರಂದು ದೀಪ ಬೆಳಗುವಂತೆ ಏಪ್ರಿಲ್‌ 3ರಂದು ವಿಡಿಯೊ ಸಂದೇಶ ನೀಡಿದ್ದರು. ಏಪ್ರಿಲ್‌ 14ರಂದು ಮಾತನಾಡಿ, ಲಾಕ್‌ಡೌನ್‌ ಅವಧಿಯನ್ನು ಮೇ 3ರ ವರೆಗೂ ವಿಸ್ತರಿಸಿರುವುದಾಗಿ ಪ್ರಕಟಿಸಿದ್ದರು.

ಮಾರ್ಚ್‌ 19ರಂದು ಮಾಡಿದ ಭಾಷಣದಲ್ಲಿ ಮಾರ್ಚ್‌ 22ರಂದು ಜನತಾ ಕರ್ಫ್ಯೂ ಅನುಸರಿಸುವಂತೆ ಜನರನ್ನು ಕೋರಿದ್ದರು. ನಂತರ ಮಾರ್ಚ್‌ 24ರಂದು ಮಾತನಾಡಿ ರಾಷ್ಟ್ರವ್ಯಾಪಿ 21 ದಿನಗಳ ಲಾಕ್‌ಡೌನ್‌ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top