Dailyhunt Logo
  • Light mode
    Follow system
    Dark mode
    • Play Story
    • App Story
ದೇಶದ ಖಾಸಗಿ ಈಕ್ವಿಟಿ, ವೆಂಚರ್ ಕ್ಯಾಪಿಟಲ್ ಆಕರ್ಷಣೆ; ಕರ್ನಾಟಕ,ಮಹಾರಾಷ್ಟ್ರ ಮುಂದು

ದೇಶದ ಖಾಸಗಿ ಈಕ್ವಿಟಿ, ವೆಂಚರ್ ಕ್ಯಾಪಿಟಲ್ ಆಕರ್ಷಣೆ; ಕರ್ನಾಟಕ,ಮಹಾರಾಷ್ಟ್ರ ಮುಂದು

ಭಾರತದ ಆರ್ಥಿಕ ಬೆಳವಣಿಗೆಯು ಗಮನಾರ್ಹ ವೇಗದಲ್ಲಿದೆ. ಹೂಡಿಕೆದಾರರಲ್ಲೂ ವೈವಿಧ್ಯತೆ ಕಂಡುಬರುತ್ತಿದೆ.‍ ಅದರಲ್ಲೂ ಖಾಸಗಿ ಈಕ್ವಿಟಿ ಮತ್ತು ವೆಂವರ್ ಕ್ಯಾಪಿಟಲ್‌ ಹೂಡಿಕೆದಾರರು ತಮ್ಮ ಹಣವನ್ನು ಎಲ್ಲಿ ತೊಡಗಿಸಬೇಕು ಎಂಬುದರ ಕುರಿತಾಗಿ ಅತ್ಯಂತ ನಿರ್ದಿಷ್ಟವಾಗಿರುವುದು ಕಂಡುಬಂದಿದೆ.

ಹೌದು, ನೀತಿ ಆಯೋಗದ ಇತ್ತೀಚಿನ ವರದಿಯು ಈ ಖಾಸಗಿ ಹೂಡಿಕೆಯು ಎರಡೇ ಎರಡು ರಾಜ್ಯಗಳತ್ತ ಹೆಚ್ಚು ಹೊರಳಿರುವುದು ಕಂಡುಬಂದಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಈ ಖಾಸಗಿ ಹೂಡಿಕೆಯ ಶೇ 57ರಷ್ಟು ಆಕರ್ಷಿಸುವ ಮೂಲಕ ಬೃಹತ್ ಪಾಲನ್ನು ಪಡೆದುಕೊಂಡಿವೆ.

ಮಹಾರಾಷ್ಟ್ರದ ಪಾಲು ದೊಡ್ಡದು

ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರವು ಖಾಸಗಿ ಬಂಡವಾಳ ಆಕರ್ಷಣೆಯಲ್ಲೂ ಮುಂದಿದೆ.

ದೇಶದ ಒಟ್ಟು ಖಾಸಗಿ ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ಹೂಡಿಕೆಗಳಲ್ಲಿ ಈ ರಾಜ್ಯವು ಗಮನಾರ್ಹವಾದ ಶೇ 35ರಷ್ಟು ಪಾಲನ್ನು ಹೊಂದಿದೆ. ವ್ಯಾಪಾರ ಮಾನದಂಡ, ಹೂಡಿಕೆ ಮೂಲಸೌಕರ್ಯ ಮತ್ತು ಇತರೆ ಅಂಶಗಳು ಇದರಲ್ಲಿ ಪರಿಣಾಮ ಬೀರುತ್ತವೆ ಎನ್ನುತ್ತಾರೆ ವಿಶ್ಲೇಷಕರು.

ನಾವೀನ್ಯತೆಯ ಉತ್ತೇಜನ: ಮಹಾರಾಷ್ಟ್ರದಲ್ಲಿ 1,033 'ಅಟಲ್ ಟಿಂಕರಿಂಗ್ ಲ್ಯಾಬ್‌'ಗಳಿವೆ. ಭಾರತದ ಒಟ್ಟು ಸಂಖ್ಯೆಯ ಶೇ 10 ರಷ್ಟು ಪಾಲು ಇದಾಗಿದೆ. ಇವು ಸ್ಥಳೀಯ ಉದ್ಯಮಶೀಲತೆಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತವೆ ಎಂದು ವರದಿ ತಿಳಿಸಿದೆ.

ಆರ್ಥಿಕ ಸ್ಥಿತಿಗತಿ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ತಲಾ ₹ 2,16,710 ರೂಪಾಯಿ ಮೂಲಕ ಆರ್ಥಿಕ ಅಡಿಪಾಯವು ದೃಢವಾಗಿದೆ.

ಎರಡನೇ ಸ್ಥಾನದಲ್ಲಿ ಕರ್ನಾಟಕ

ದೇಶದಲ್ಲಿ ಉನ್ನತ ತಂತ್ರಜ್ಞಾನ ಮತ್ತು ಸ್ಟಾರ್ಟಪ್ ಕೇಂದ್ರಬಿಂದುವಾಗಿರುವ ಕರ್ನಾಟಕವು 2024ರಲ್ಲಿ ₹1.20 ಲಕ್ಷ ಕೋಟಿಯಷ್ಟು ಈಕ್ವಿಟಿ ಷೇರು ಮತ್ತು ವೆಂಚರ್ ಕ್ಯಾಪಿಟಲ್ ಅನ್ನು ಆಕರ್ಷಿಸಿದೆ. ಇದು ದೇಶದ ಒಟ್ಟು ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ಹೂಡಿಕೆಯ ಶೇ 22ರಷ್ಟಾಗಿದೆ. ಹಾಗಾಗಿ, ಕರ್ನಾಟಕದ ಜಿಎಸ್ ಡಿಪಿ ಸಹ ಉತ್ತಮವಾಗಿದೆ.

ಬೇರೆ ರಾಜ್ಯಗಳು ಎಲ್ಲಿವೇ?

ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೊತೆಗೆ ಕೇವಲ ಐದೇ ರಾಜ್ಯಗಳಲ್ಲಿ ಒಟ್ಟು ಹೂಡಿಕೆಯ ಸಿಂಹಪಾಲು ಹೋಗಿರುವುದು ಕಂಡುಬಂದಿದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ನವದೆಹಲಿ

ಮತ್ತು ತಮಿಳುನಾಡು ರಾಜ್ಯಗಳಿಗೆ ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ನ ಶೇ 85ರಷ್ಟು ಹೂಡಿಕೆ ಹೋಗಿದೆ. ಹೂಡಿಕೆದಾರರು ತಮ್ಮ ಬಂಡವಾಳ ತೊಡಗಿಸಲು ಈ ಐದು ರಾಜ್ಯಗಳನ್ನಷ್ಟೇ ಆದ್ಯತೆಯಾಗಿ ಇರಿಸಿಕೊಂಡಿರುವುದು ಕಂಡುಬಂದಿದೆ.

ಬಂಡವಾಳ ಆಕರ್ಷಿಸಲು ವಿಫಲ

ಸಂಪನ್ಮೂಲ ಭರಿತವಾಗಿರುವ ಛತ್ತೀಸಗಢ ರಾಜ್ಯವು ಕೆಲವು ಪ್ರಾದೇಶಿಕ ಕಾರಣಗಳಿಂದ ಬಂಡವಾಳ ಆಕರ್ಷಿಸುವಲ್ಲಿ ವಿಫಲವಾಗಿದೆ. ದೇಶದ ಒಟ್ಟು ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ನ ಕೇವಲ ಶೇ 0.02ರಷ್ಟು ಮಾತ್ರ ಇಲ್ಲಿಗೆ ಬಂದಿದೆ. ಈಶಾನ್ಯ ರಾಜ್ಯಗಳ ಸ್ಥಿತಿ ಏನೂ ಭಿನ್ನವಾಗಿಲ್ಲ. ಈ ಭಾಗದ ಎಲ್ಲ ರಾಜ್ಯಗಳು ಒಟ್ಟು ಹೂಡಿಕೆಯ ಶೇ 1 ರಷ್ಟು ಬಂಡವಾಳ ಮಾತ್ರ ಆಕರ್ಷಿಸಿವೆ.

ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ನ ಈ ನಿರ್ದಿಷ್ಟ ಹರಿವು ದೇಶದ ಇತರೆ ರಾಜ್ಯಗಳಿಗೆ ಒಂದು ಸಂದೇಶವಾಗಿದೆ. ದೇಶದ‍ ಆರ್ಥಿಕತೆಯು ಗಮನಾರ್ಹ ಸುಧಾರಣೆ ಕಾಣುತ್ತಿರುವಾಗ ರಾಜ್ಯಗಳು ತಮ್ಮೆಡೆಗೆ ಖಾಸಗಿ ಬಂಡವಾಳ ಆಕರ್ಷಣೆಗೆ ಸಕ್ರಿಯವಾಗಿ ಸ್ಪರ್ಧಿಸಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಹೂಡಿಕೆದಾರರು ಬಯಸುವ ವಿಶ್ವಾಸಾರ್ಹತೆ ಮತ್ತು ತಾಂತ್ರಿಕ ಮೂಲಸೌಕರ್ಯ ನೀಡುವ ಮೂಲಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿವೆ.

ವೆಂಚರ್ ಕ್ಯಾಪಿಟಲ್ ಅನ್ನು ಆಕರ್ಷಿಸಲು ತಳಮಟ್ಟದಿಂದಲೇ ಹೂಡಿಕೆದಾರರಿಗೆ ಆದ್ಯತೆ ನೀಡುವ ಹಾಗೂ ನಿರಂತರ ಪ್ರಯತ್ನಶೀಲ ವಾತಾವರಣ ರೂಪಿಸುವುದು ಅಗತ್ಯ ಎಂಬ ಸ್ಪಷ್ಟ‍ಸಂದೇಶವನ್ನು ಈ ಅಂಕಿ ಅಂಶ ನೀಡಿದೆ.

ಮಾಹಿತಿ: ಎನ್ಡಿಟಿವಿ, ಪಿಟಿಐ ಮತ್ತು ಇತರೆ ಮೂಲಗಳಿಂದ

Dailyhunt
Disclaimer: This content has not been generated, created or edited by Dailyhunt. Publisher: Prajavani