Dailyhunt Logo
  • Light mode
    Follow system
    Dark mode
    • Play Story
    • App Story
ದೇವಸ್ಥಾನದ ಚಿನ್ನ ನಗದೀಕರಣ ಇಲ್ಲ: ಕೇಂದ್ರ ಸ್ಪಷ್ಟನೆ

ದೇವಸ್ಥಾನದ ಚಿನ್ನ ನಗದೀಕರಣ ಇಲ್ಲ: ಕೇಂದ್ರ ಸ್ಪಷ್ಟನೆ

ವದೆಹಲಿ : ದೇವಸ್ಥಾನದ ಟ್ರಸ್ಟ್‌ಗಳು ಅಥವಾ ದೇಶದ ಯಾವುದೇ ಧಾರ್ಮಿಕ ಸಂಸ್ಥೆಗಳ ಬಳಿ ಇರುವ ಚಿನ್ನವನ್ನು ನಗದೀಕರಿಸುವ ಯೋಜನೆಯನ್ನು ಜಾರಿಗೆ ತರುವ ಆಲೋಚನೆ ತನಗಿಲ್ಲ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸ್ಪಷ್ಟಪಡಿಸಿದೆ.

ಈ ರೀತಿಯ ಆಲೋಚನೆ ಇದೆ ಎಂಬ ಊಹಾಪೋಹಗಳನ್ನು ಅದು ತಳ್ಳಿಹಾಕಿದೆ.

'ಇವು ಸಂಪೂರ್ಣವಾಗಿ ಸುಳ್ಳು, ತಪ್ಪುದಾರಿಗೆ ಎಳೆಯುವಂಥವು' ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟನೆ ನೀಡಿದೆ.

ದೇವಸ್ಥಾನಗಳ ಗೋಪುರದ ಮೇಲೆ, ಬಾಗಿಲುಗಳ ಮೇಲೆ ಅಥವಾ ದೇವಸ್ಥಾನದ ಇತರ ರಚನೆಗಳ ಮೇಲೆ ಇರುವ ಚಿನ್ನದ ಹೊದಿಕೆಯನ್ನು 'ದೇಶದ ಮೀಸಲು ಚಿನ್ನ' ಎಂದು ಪರಿಗಣಿಸಲಾಗುತ್ತದೆ ಎಂಬ ಪ್ರತಿಪಾದನೆಗಳು ಸುಳ್ಳು, ಸಂಪೂರ್ಣವಾಗಿ ಆಧಾರರಹಿತ ಎಂದು ಸ್ಪಷ್ಟನೆಯಲ್ಲಿ ಹೇಳಲಾಗಿದೆ.

ಇಂತಹ ಸುಳ್ಳುಗಳನ್ನು ಜನ ನಂಬಬಾರದು, ಇಂಥವುಗಳನ್ನು ಹಂಚಿಕೊಳ್ಳಬಾರದು ಎಂದು ಅದು ಹೇಳಿದೆ.

ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಇಂತಹ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ, ಇತರರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ ಎಂದು ಅದು ತಿಳಿಸಿದೆ.

ಸರ್ಕಾರದ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ, ಸರ್ಕಾರದ ಜಾಲತಾಣಗಳ ಮೂಲಕ ಹಾಗೂ ಅಧಿಕೃತ ಸಂವಹನ ವೇದಿಕೆಗಳ ಮೂಲಕವೇ ಹಂಚಿಕೊಳ್ಳಲಾಗುತ್ತದೆ ಎಂದು ಸಚಿವಾಲಯವು ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani