Dailyhunt Logo
  • Light mode
    Follow system
    Dark mode
    • Play Story
    • App Story
ಧಾರವಾಡ | ಮಳೆ ಕೊರತೆ: ಕಮರಿದ ಈರುಳ್ಳಿ ಬೆಳೆ

ಧಾರವಾಡ | ಮಳೆ ಕೊರತೆ: ಕಮರಿದ ಈರುಳ್ಳಿ ಬೆಳೆ

ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಲ್ಲೊಂದಾದ ಈರುಳ್ಳಿ ಬೆಳೆ ಕಮರುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಹಲವು ರೈತರು ಸ್ಪ್ರಿಂಕ್ಲರ್‌ನಲ್ಲಿ ನೀರುಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈರುಳ್ಳಿ ಬಿತ್ತನೆ ಗುರಿ 7,630 ಹೆಕ್ಟೇರ್‌ ಪೈಕಿ 6,175 ಹೆಕ್ಟೇರ್‌ನಲ್ಲಿ (ಶೇ 80.93) ಬಿತ್ತನೆಯಾಗಿದೆ. ಕಳೆದ ಒಂದು ವಾರದ ವಾಡಿಕೆ ಮಳೆ ಪ್ರಮಾಣ 37 ಮಿ.ಮೀ ಪೈಕಿ 0.9 ಮಿ.ಮೀ ಮಳೆಯಾಗಿದೆ. ಶೇ 76ರಷ್ಟು ಮಳೆ ಕಡಿಮೆಯಾಗಿದೆ. ಮೊಳಕೆಯೊಡೆದ ಪೈರು ಒಣಗುವ ಹಂತಕ್ಕೆ ತಲುಪಿದೆ. ರೈತರು ಮಳೆ ನಿರೀಕ್ಷೆಯಲಿದ್ದಾರೆ. ಮಳೆಯಾಗದಿದ್ದರೆ ಬೆಳೆ ನಾಶವಾಗುವ ಸಂಕಷ್ಟ ಎದುರಾಗಿದೆ.

ಮುಂಗಾರು ಹಂಗಾಮಿನ ಆರಂಭದಲ್ಲಿ ಸಾಧಾರಣ ಮಳೆಯಾಗಿತ್ತು. ರೈತರು ಬಿತ್ತನೆ ಮಾಡಿದ್ದರು. ಕೆಲ ದಿನಗಳಿಂದ ಮಳೆ ಕೈಕೊಟ್ಟಿದೆ. ಮೊಳಕೆಯೊಡೆದ ಈರುಳ್ಳಿ ಸಸಿಗಳು ತೇವಾಂಶದ ಕೊರತೆ ಹಾಗೂ ಬಿಸಿಲಿನ ತಾಪಕ್ಕೆ ಕಮರುತ್ತಿವೆ. ಕೆಲ ದಿನಗಳಲ್ಲಿ ಹದ ಮಳೆಯಾಗದಿದ್ದರೆ ಬೆಳೆ ಪೂರ್ತಿ ನಾಶವಾಗುವ ಭೀತಿ ಎದುರಾಗಿದೆ.

'ಬಿತ್ತನೆ ಬೀಜ, ಉಳುಮೆ, ಗೊಬ್ಬರ, ಕಳೆ ತೆಗೆಯಲು ಎಕರೆಗೆ ₹ 30ಸಾವಿರವರೆಗೆ ಖರ್ಚಾಗಿದೆ. ಸಾಲ ಮಾಡಿದ್ದೇನೆ. ಈಗಿನ ಸ್ಥಿತಿ ನೋಡಿದರೆ ಬೆಳೆಗೆ ಖರ್ಚು ಮಾಡಿದಷ್ಟು ಹಣ ವಾಪಸ್‌ ಸಿಗುವ ಭರವಸೆ ಇಲ್ಲ. ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು. ಪರಿಹಾರ ನೀಡದಿದ್ದರೆ ಹಿಂಗಾರು ಹಂಗಾಮಿಗೆ ಬೀಜ, ಗೊಬ್ಬರ ಖರೀದಿಸಲು ತೊಂದರೆಯಾಗುತ್ತದೆ' ಎಂದು ಕಬ್ಬೇನೂರು ಗ್ರಾಮದ ಮಲ್ಲಿಕಾರ್ಜುನ ಕುರಗುಂದ ಅಳಲು ತೋಡಿಕೊಂಡರು.

ಈರುಳ್ಳಿ ಬೆಳೆ ಒಣಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ಬೆಳೆ ನಷ್ಟ‌ಕ್ಕೆ ಪರಿಹಾರ ನೀಡಬೇಕು ಎಂಬುದು ಬೆಳೆಗಾರರ ಒತ್ತಾಯ.

- ಮುತ್ತು ತಲವಾಯಿ, ರೈತ, ಹೆಬ್ಬಳ್ಳಿಮೊದಲ ಬಾರಿ ಬಿತ್ತನೆ ಮಾಡಿದ ಈರುಳ್ಳಿ ಬೀಜಗಳು ಮಳೆ ಕೊರತೆಯಿಂದ ಮೊಳಕೆಯೊಡೆಯಲಿಲ್ಲ. ತಿಂಗಳ ಹಿಂದೆ ಎರಡನೇ ಬಾರಿ ಬಿತ್ತನೆ ಮಾಡಿದ್ದೆವು. ಮೊಳಕೆಯೊಡೆದಿದ್ದ ಸಸಿಗಳು ತೇವಾಂಶವಿಲ್ಲದೆ ಒಣಗುತ್ತಿವೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260722-24-560584283

Dailyhunt
Disclaimer: This content has not been generated, created or edited by Dailyhunt. Publisher: Prajavani