ಧಾರವಾಡ: ತಾಲ್ಲೂಕಿನ ಹಿರೇಮಲ್ಲಿಗವಾಡದ ಕರ್ನಾಟಕ ಗೃಹ ಮಂಡಳಿ (ಕೆಎಚ್‍ಬಿ) ಬಡಾ ವಣೆ ನಿರ್ಮಿಸಿ ಹಲವು ವರ್ಷ ಕಳೆದರೂ ರಸ್ತೆ, ಸಮರ್ಪಕ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
2014-15ನೇ ಸಾಲಿನಲ್ಲಿ 285 ಎಕರೆ ವಿಸ್ತೀರ್ಣದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನಿವೇಶನ ನಿರ್ಮಿಸಲಾಗಿದೆ.
ಕೆಎಚ್‌ಬಿ ವತಿಯಿಂದಲೇ 172 ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ. ನಿವೇಶನ ಖರೀದಿಸಿದವರು 50ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ.
ಆದರೆ, ಬಡಾವಣೆಗೆ ನಿಯಮಿತವಾಗಿ ನೀರು ಪೂರೈಕೆಯಾಗಲ್ಲ. ನಿವಾಸಿಗಳು ನೀರಿಗಾಗಿ ವಾರಗಟ್ಟಲೇ ಕಾಯಬೇಕಾದ, ಎರಡು ಕಿಲೋ ಮೀಟರ್ ದೂರದಿಂದ ನೀರು ತರಬೇಕಾದ ಸ್ಥಿತಿ ಇದೆ.
ಬಡಾವಣೆಯ ಪ್ರಮುಖ ಹಾಗೂ ಒಳರಸ್ತೆಗಳು ಹದಗೆಟ್ಟಿವೆ, ಗುಂಡಿಗಳಾಗಿವೆ. ವಾಹನ ಸವಾರರು ಬಿದ್ದು ಪೆಟ್ಟಾಗಿರುವ ನಿದರ್ಶನಗಳೂ ಇವೆ. ಮಳೆಯಾದಾಗ ಇಲ್ಲಿನ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ಬಡಾವಣೆಯಲ್ಲಿ ಉದ್ಯಾನಕ್ಕಾಗಿ ಜಾಗ ಮೀಸಲಿಟ್ಟಿದ್ದರೂ ಅದನ್ನು ಅಭಿವೃದ್ಧಿಪಡಿಸಿಲ್ಲ. ಉದ್ಯಾನದ ಜಾಗ ಕಸ ಎಸೆಯುವ ತಾಣವಾಗಿದೆ. ಮುಳ್ಳಿನ ಕಂಟಿಗಳು ಬೆಳೆದಿವೆ.
'ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಕೆಲವು ಕಡೆ ಮ್ಯಾನ್‌ಹೋಲ್‌ಗೆ ಮುಚ್ಚಳ ಇಲ್ಲ. ಕಸದ ವಾಹನಗಳು ನಿಯಮಿತವಾಗಿ ಬಾರದ ಹಿನ್ನೆಲೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ' ಎಂದು ಕಾಲೊನಿಯ ಮಹಿಳೆಯೊಬ್ಬರು ಸಂಕಷ್ಟ ತೋಡಿಕೊಂಡರು.
'ಬಡಾವಣೆಯಲ್ಲಿ ಬೀದಿದೀಪಗಳು ಇಲ್ಲ. ಇಲ್ಲಿ ರಾತ್ರಿ ವೇಳೆ ಕತ್ತಲಿನಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ಮೂಲಸೌಕರ್ಯ ಕಲ್ಪಿಸಬೇಕು. ಪೊಲೀಸ್ ಗಸ್ತು ವ್ಯವಸ್ಥೆ ಮಾಡಬೇಕು' ಎಂಬುದು ನಿವಾಸಿಗಳ ಆಗ್ರಹ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-24-1785556082

