ನವದೆಹಲಿ: 'ದೇಶದ ಧೈರ್ಯಶಾಲಿ ಗೃಹ ಸಚಿವ ಎಂದು ಕರೆಸಿಕೊಳ್ಳುವ ಅಮಿತ್ ಶಾ ಅವರು ಸದನಕ್ಕೆ ಏಕೆ ಬರುತ್ತಿಲ್ಲ? ಅವರು ಏನೂ ತಪ್ಪು ಮಾಡಿಲ್ಲ ಎಂದಾದಲ್ಲಿ ಕಲಾಪಕ್ಕೆ ಏಕೆ ಹಾಜರಾಗುತ್ತಿಲ್ಲ' ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಲೋಕಸಭೆ ಕಲಾಪದ ಬಳಿಕ ಸಂಸತ್ ಭವನದ ಸಂಕೀರ್ಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಈ ವಿಚಾರದಲ್ಲಿ ನಮ್ಮ ಮುಂದೆ ಎರಡೇ ಆಯ್ಕೆಗಳು ಇರಲು ಸಾಧ್ಯ. ಒಂದೋ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿಗೆ ಗೃಹ ಸಚಿವರೇ ಆದೇಶ ನೀಡಿರಬೇಕು. ಇಲ್ಲವೇ ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ ನಡೆಯಲಿದೆ ಎಂಬ ಬಗ್ಗೆ ಅವರಿಗೆ ಮಾಹಿತಿಯೇ ಇರಲಿಕ್ಕಿಲ್ಲ' ಎಂದರು. 'ಮೊದಲ ಪ್ರಕರಣ ಪರಿಗಣಿಸಿದರೆ ಅವರು (ಅಮಿತ್ ಶಾ) ಅಪರಾಧಿ ಎನಿಸುತ್ತಾರೆ. ಇನ್ನು ಎರಡನೇ ಪ್ರಕರಣ ಗಣನೆಗೆ ತೆಗೆದುಕೊಂಡರೆ ಅವರು ಅಸಮರ್ಥ ಎಂದಾಗುತ್ತದೆ. ಇವೆರಡನ್ನು ಹೊರತುಪಡಿಸಿ ಬೇರೆ ಆಯ್ಕೆಯೇ ಇಲ್ಲ' ಎಂದು ಹೇಳಿದರು.
ಆರ್‌ಎಸ್‌ಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು 'ಆರ್‌ಎಸ್‌ಎಸ್ ದೇಶದ ಶಿಕ್ಷಣ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತಿದೆ. ಮಕ್ಕಳಿಗೆ ಏನು ಬೋಧಿಸಬೇಕು ಎಂಬುದನ್ನು ಈ ಸಂಘಟನೆಯೇ ರೂಪಿಸುತ್ತಿದೆ' ಎಂದರು. 'ನಮ್ಮ ಶಿಕ್ಷಣ ಕ್ಷೇತ್ರದ ಆತ್ಮವನ್ನೇ ಆರ್‌ಎಸ್‌ಎಸ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವಾಲಯವನ್ನು ಮುನ್ನಡೆಸಲಿಲ್ಲ. ಈ ಸಚಿವಾಲಯವನ್ನು ಮುನ್ನಡೆಸಿದ ವ್ಯಕ್ತಿ ಮತ್ತು ಸಂಸ್ಥೆಯೇ ಆರ್‌ಎಸ್‌ಎಸ್' ಎಂದು ರಾಹುಲ್ ಆರೋಪಿಸಿದರು. 'ಆರ್‌ಎಸ್‌ಎಸ್ ಹುಚ್ಚು ಕಲ್ಪನೆಗಳೊಂದಿಗೆ ಹೇಳುವ ಅಸಂಬದ್ಧ ಇತಿಹಾಸವನ್ನೇ ವಿದ್ಯಾರ್ಥಿಗಳು ಕಲಿಯಬೇಕಿದೆ. ಇಲ್ಲಿ ಪ್ರಧಾನ್ ನೆಪ ಮಾತ್ರ. ನಿಮ್ಮ ನಿಜವಾದ ಶತ್ರು ಎಂದರೆ ಆರ್‌ಎಸ್‌ಎಸ್. ನೀವು ಅಂಧಭಕ್ತರಾಗಬೇಕು ಎಂದೇ ಅವರು ಬಯಸುತ್ತಾರೆ' ಎಂದು ಟೀಕಿಸಿದರು.

