ಮಂಗಳೂರು: ವಾಕೊ ಇಂಡಿಯಾ ಸಬ್ ಜೂನಿಯರ್ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಐಕೆಎಂಎ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ತಂಡದ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಗೆ 11 ಚಿನ್ನದ ಪದಕ, 2 ಬೆಳ್ಳಿಯ ಪದಕ ಹಾಗೂ 9 ಕಂಚಿನ ಪದಕಗಳನ್ನು ಜಯಿಸಿದ್ದಾರೆ ಎಂದು ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 'ಮಧ್ಯಪ್ರದೇಶದ ಅಮೆಚೂರ್ ಸ್ಪೋರ್ಟ್ಸ್ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಮಧ್ಯಪ್ರದೇಶದ ಇಂದೋರ್ ಪಬ್ಲಿಕ್ ಸ್ಕೂಲ್‌ನಲ್ಲಿ ಜೂ.17ರಿಂದ 21ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ 2 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದಿಂದ 58 ವಿದ್ಯಾರ್ಥಿಗಳು ಹಾಗೂ ಜಿಲ್ಲೆಯಿಂದ 15 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯಕ್ಕೆ20 ಚಿನ್ನದ ಪದಕಗಳು ಬಂದಿದ್ದು, ಇದರಲ್ಲಿ 11 ಪದಕಗಳು ದಕ್ಷಿಣ ಕನ್ನಡ ಜಿಲ್ಲೆಗೆ ದೊರೆತಿದ್ದು, ಇದೊಂದು ಐತಿಹಾಸಿಕ ದಾಖಲೆ' ಎಂದರು.
ಮೇ 30 ರಿಂದ ಜೂನ್ 3ರವರೆಗೆ ಒಡಿಶಾದಲ್ಲಿ ನಡೆದ ವಾಕೋ ಇಂಡಿಯಾ ಜೂನಿಯರ್ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ ಐಕೆಎಂಎ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದೆ. ಈ ಟೂರ್ನಿಯಲ್ಲಿ 3 ಚಿನ್ನದ ಪದಕ, 1 ಬೆಳ್ಳಿ ಪದಕ ಹಾಗೂ 3 ಕಂಚಿನ ಪದಕಗಳನ್ನು ಗೆದ್ದುಕೊಂಡು ಸಾಧನೆ ಮಾಡಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ದಕ್ಕಿದ ಏಳು ಪದಕಗಳನ್ನೂ ದ.ಕ. ಜಿಲ್ಲೆಯ ಐಕೆಎಂಎ ಆಟಗಾರರೇ ಗೆದ್ದಿರುವುದು ವಿಶೇಷ. ಪ್ರಥಮ ಮತ್ತು ದ್ವೀತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಇಟಲಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಸಂಸ್ಥೆಯ ಮುಖ್ಯ ತರಬೇತುದಾರರಾದ ನಿತಿನ್ ಎನ್. ಸುವರ್ಣ, ತರಬೇತುದಾರ ಸಂಪತ್ ಕುಮಾರ್ ಅವರು ಈ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು.
ಐಕೆಎಂಎಯ ಮುಖ್ಯ ಶಿಕ್ಷಕ ನಿತಿನ್ ಎನ್. ಸುವರ್ಣ, ಶಿಕ್ಷಕರಾದ ಸಂಪತ್ ಕುಮಾರ್, ಶಿವಪ್ರಸಾದ್, ಸಹ ಶಿಕ್ಷಕರಾದ ರಾಜೇಶ್ ಕೆ., ಅವನಿ, ಅಂಶಿ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-29-1539863440

