ಧರ್ಮಪುರ: ಹೋಬಳಿಯಾದ್ಯಂತ ಸೋಮವಾರ ಬೆಳಿಗ್ಗೆ 6ರಿಂದ ಆರಂಭವಾದ ಬಿರುಗಾಳಿ ಸಹಿತ ಮಳೆ ಎರಡು ಗಂಟೆ ಸುರಿದಿದೆ. ಕೆಲವೆಡೆ ಹಳ್ಳಗಳು ತುಂಬಿ ಹರಿದಿವೆ.
ಕಳೆದ ವರ್ಷ ಉತ್ತಮ ಮಳೆಯಾಗಿರಲಿಲ್ಲ. ಆದ್ದರಿಂದ ಕೊಳವೆ ಬಾವಿಗಳು ಬರಿದಾಗಿ ರೈತರು ಮುಗಿಲಿನತ್ತ ಮುಖ ಮಾಡಿದ್ದರು.
ಕೆಲವರು ಕೊಳವೆಬಾವಿ ಕೊರೆಸಲು ಮುಂದಾಗಿದ್ದರು. 600ರಿಂದ 800 ಅಡಿಯವರೆಗೂ ಕೊರೆಸಿದರೂ ನೀರು ಸಿಗದೆ ಹತಾಶರಾಗಿದ್ದರು.
ಒಂದು ವಾರದಲ್ಲಿ ಮೂರು ಬಾರಿ ಮಳೆಯಾಗಿರುವುದರಿಂದ ಭೂಮಿ ಹದವಾಗಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ.
ಅರಳೀಕೆರೆ, ಸೂಗೂರು, ಧರ್ಮಪುರ, ಶ್ರವಣಗೆರೆ, ಇಕ್ಕನೂರು, ಹೊಸಕೆರೆ, ಪಿ.ಡಿ.ಕೋಟೆ, ಬೆನಕನಹಳ್ಳಿ, ಹರಿಯಬ್ಬೆ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆಲವೆಡೆ ಹಳ್ಳಗಳು ಹರಿಯುತ್ತಿವೆ. ಕಟ್ಟೆ, ಚೆಕ್ ಡ್ಯಾಂ, ಗೋಕಟ್ಟೆಗಳಲ್ಲಿ ನೀರು ಬಂದಿದೆ.
ಇಕ್ಕನೂರಿನಲ್ಲಿ 6.84 ಸೆಂ.ಮೀ, ಸೂಗೂರು 3.44 ಸೆಂ.ಮೀ, ಈಶ್ವರಗೆರೆಯಲ್ಲಿ 3.32 ಸೆಂ.ಮೀ ಮಳೆಯಾಗಿದೆ.
ಗರಿಗೆದರಿದ ಕೃಷಿ ಚಟುವಟಿಕೆ: ಹೋಬಳಿಯಾದ್ಯಂತ ಉತ್ತಮ ಮಳೆ ಯಾಗಿದ್ದರಿಂದ ಕೃಷಿ ಚಟುವಟಿಕೆ ಗಳು ಗರಿಗೆದರಿವೆ. ಭೂಮಿ ಹಸನು ಮಾಡಲು ರೈತರು ಮುಂದಾಗಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-44-2113678843

