Sunday, 22 Nov, 7.01 am ಪ್ರಜಾವಾಣಿ

ದಿನದ ಸೂಕ್ತಿ
ದಿನದ ಸೂಕ್ತಿ | ಬೆನ್ನಿಗೆ ಚೂರಿ

ಪರೋಕ್ಷೇ ಕಾರ್ಯಹಂತಾರಂ ಪ್ರತ್ಯಕ್ಷೇ ಪ್ರಿಯವಾದಿನಮ್‌ ।

ವರ್ಜಯೇತ್ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್‌ ।।

ಇದರ ತಾತ್ಪರ್ಯ ಹೀಗೆ:

'ಎದುರಿಗೆ ಒಳ್ಳೆಯ ಮಾತನ್ನಾಡುತ್ತ, ಮರೆಯಲ್ಲಿ ಕೆಲಸ ಕೆಡಿಸುವ ಮಿತ್ರನು ಹೇಗೆಂದರೆ, ಮೇಲೆ ಹಾಲಿರುವ ಆದರೆ ಒಳಗೆ ವಿಷವಿರುವ ಮಡಕೆಯಂತೆ ನಂಬಿಕೆಗೆ ಅರ್ಹನಲ್ಲ.'

ಕೆಲವರ ಸ್ವಭಾವವೇ ಹಾಗಿರುತ್ತದೆ, ಎದುರಿಗೆ ಸಿಕ್ಕಾಗ ನಮ್ಮನ್ನು ಇಂದ್ರ ಚಂದ್ರ ದೇವೇಂದ್ರ ಎಂದು ಹೊಗಳುತ್ತಾರೆ; ನಾವು ಮರೆಯಾದ ಕೂಡಲೇ ನಮ್ಮ ವಿರುದ್ಧವೇ ಪಿತೂರಿ ನಡೆಸುತ್ತಾರೆ. ಇಂಥವರ ಬಗ್ಗೆ ಎಚ್ಚರದಿಂದ ಇರುವಂತೆ ಸುಭಾಷಿತ ಹೇಳುತ್ತಿದೆ.

ನೇರ ಹೋರಾಡುವವರನ್ನು ನಾವು ಎದುರಿಸಬಹುದು; ಮರೆಯಲ್ಲಿ ನಿಂತು ಮೋಸದಿಂದ ಯುದ್ಧ ಮಾಡುವವರನ್ನು ಗೆಲ್ಲುವುದು ಸುಲಭವಲ್ಲ. ಇಂಥವರು ಎಲ್ಲೆಲ್ಲೂ ಇರುತ್ತಾರೆ; ಮನೆಯಲ್ಲಿ, ಕಚೇರಿಯಲ್ಲಿ - ಹೀಗೆ ಎಲ್ಲೆಲ್ಲೂ ಇರುತ್ತಾರೆ; ಇವರು ಸರ್ವಾಂತರ್ಯಾಮಿಗಳಾದ ನೀಚರು!

ಸಾಮಾನ್ಯವಾಗಿ ನಮ್ಮೆಲ್ಲರಲ್ಲೂ ದೊಡ್ಡ ದೋಷವೊಂದು ಇರುತ್ತದೆ. ನಾವೆಲ್ಲರೂ ಹೊಗಳಿಕೆಯನ್ನು ತುಂಬ ಇಷ್ಟಪಡುತ್ತೇವೆ. ನಮಗೆ ಯಾರಾದರೂ ಬುದ್ಧಿ ಹೇಳಿದರೆ ಅವರನ್ನು ನಾವು ಶತ್ರುಗಳಂತೆ ಕಾಣುತ್ತೇವೆ. ಅದೇ ಯಾರಾದರೂ ಸಿಹಿ ಸಿಹಿಯಾದ ಮಾತುಗಳನ್ನು ಆಡಿದರೆ ಸಂಭ್ರಮಿಸುತ್ತವೇ; ಹಾಗೆ ಸಿಹಿಮಾತುಗಳನ್ನು ಉದುರಿಸುವವರನ್ನೇ ನಮ್ಮ ನಿಜವಾದ ಶ್ರೇಯೋಭಿಲಾಷಿಗಳೆಂದು ನಂಬುತ್ತೇವೆ. ನಮ್ಮ ಇಂಥ ದೌರ್ಬಲ್ಯವನ್ನು ನೀಚರು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ.

ಯಾವ ಕಾಲದಲ್ಲೂ ಹೀಗೆ ಮಾತಿನಲ್ಲಿಯೇ ಮೋಸ ಮಾಡುವವರು ಇದ್ದರೆನ್ನಿ! ಪ್ರಾಚೀನ ಕಾಲದಲ್ಲಿ ಇಂಥವರನ್ನು ಚಾರ್ವಕರು ಎಂದು ಕರೆಯುತ್ತಿದ್ದರು. ರುಚಿಯಾದ ಮಾತುಗಳನ್ನು ಆಡುವವರು ಎಂದು ಇದರ ಅರ್ಥ. ಮಾತಿನ ಮೂಲಕವೇ ಇವರು ಜನರನ್ನು ಮರುಳು ಮಾಡುತ್ತಿದ್ದರು.

ದುರ್ಯೋಧನನನ್ನು ಶಕುನಿ ಅವನ ಸಮ್ಮುಖದಲ್ಲಿ ಹೊಗಳಿ ಹೊಗಳಿ ಆಕಾಶಕ್ಕೆ ಏರಿಸುತ್ತಿದ್ದ; ಆದರೆ ಅದರ ಉದ್ದೇಶ ಕೌರವರನ್ನು ನಾಶ ಮಾಡುವುದೇ ಆಗಿದ್ದಿತು. ಆದರೆ ಈ ಮರ್ಮವನ್ನು ಗ್ರಹಿಸುವಲ್ಲಿ ದುರ್ಯೋಧನ ಸೋತ.

ನಮ್ಮನ್ನು ಯಾರಾದರೂ ವಿನಾ ಕಾರಣ ದೊಡ್ಡ ದೊಡ್ಡ ಮಾತುಗಳಲ್ಲಿ ಹೊಗಳುತ್ತಿದ್ದಾರೆ ಎಂದಾದಲ್ಲಿ ನಾವು ಎಚ್ಚರಿಕೆಯಿಂದ ಇರಬೇಕು. ಇದು ಮೀನಿಗೆ ಗಾಳ ಹಾಕಿದಂತೆ, ಮೇಕೆಯ ಆಸೆ ತೋರಿಸಿ ಹುಲಿಯನ್ನು ಸೆರೆ ಹಿಡಿಯವಂತೆ. ಯಾರಾದರೂ ನಮ್ಮ ದೋಷಗಳನ್ನು, ದೌರ್ಬಲ್ಯಗಳನ್ನು ನಮ್ಮ ಎದುರಿಗೇ ಹೇಳುತ್ತಿದ್ದಾರೆ ಎಂದರೆ ಅವರ ಪ್ರಾಮಾಣಿಕತೆಯನ್ನೂ ಕಾಳಜಿಯನ್ನೂ ಧೈರ್ಯವನ್ನೂ ಮೆಚ್ಚಬೇಕು. ಅವರು ನಿಜವಾಗಿಯೂ ನಮ್ಮ ಶ್ರೇಯೋಭಿಲಾಷಿಗಳೇ ಆಗಿರಬಲ್ಲರು. ಹೀಗಲ್ಲದೆ ನಮ್ಮ ಎದರಿನಲ್ಲಿ ಅಮೃತದಂಥ ಮಾತುಗಳನ್ನು ಆಡಿ, ಮರೆಯಲ್ಲಿ ಹೋಗಿ ನಮ್ಮ ವಿರುದ್ಧ ಷಡ್ಯಂತ್ರವನ್ನು ರಚಿಸುವ ನೀಚರಿಂದ ನಾವು ದೂರ ಉಳಿಯುವುದೇ ಲೇಸು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top