ಡಾಕರ್ (ಸೆನೆಗಲ್), (ಪಿಟಿಐ): ಬೆಂಗಳೂರಿನ ದಿನಿಧಿ ದೇಸಿಂಗು ಅವರು ಮಹಿಳೆಯರ 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಾರಿತ್ರಿಕ ಕಂಚು ಗೆದ್ದರು. ಯೂತ್ ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಜಯಿಸಿದ ಭಾರತದ ಮೊದಲ ಈಜುಪಟು ಎಂಬ ದಾಖಲೆ ಬರೆದರು.
ಫೈನಲ್ ಸ್ಪರ್ಧೆಯಲ್ಲಿ ದಿನಿಧಿ 56.27 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಗಳಿಸಿದರು.
ಕ್ರೊವೇಷ್ಯಾದ ಅನಾ ಬೊಬನೋವಿಕ್ (55.89 ಸೆ) ಚಿನ್ನ ಗೆದ್ದರೆ, ನ್ಯೂಜಿಲೆಂಡ್‌ನ ಅಲಿಸಾ ಲಾಸನ್ (56.13 ಸೆ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು.
16 ವರ್ಷದ ದಿನಿಧಿ ಅವರು ತಮ್ಮ ಹೀಟ್‌ನಲ್ಲಿ ಅಗ್ರಸ್ಥಾನ ಮತ್ತು ಒಟ್ಟಾರೆ ಮೂರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ಧ ಭಾರತ ತಂಡದ ಅತ್ಯಂತ ಕಿರಿಯ ಕ್ರೀಡಾಪಟುವಾಗಿದ್ದರು.
ಖುಷ್ಬು ಫೈನಲ್‌ಗೆ: ಗುಜರಾತ್‌ನ ಖುಷ್ಬು ರಜಾಕ್‌ಭಾಯ್ ಅವರು ಯೂತ್ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಭಾರತದ ಎರಡನೇ ಜುಡೊಕಾ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಮಹಿಳೆಯರ 63 ಕೆಜಿ ವಿಭಾಗದಲ್ಲಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡರು.
ತಂಗ್ಜಮ್ ತಬಾಬಿ ದೇವಿ ಅವರು ಯೂತ್ ಒಲಿಂಪಿಕ್ಸ್‌ನ ಜುಡೊ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದಿದ್ದರು. 2018ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಆವೃತ್ತಿಯಲ್ಲಿ ಅವರು ಮಹಿಳೆಯರ 44 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು.
ಖುಷ್ಬು ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಜೋಲಿನಾ ರೀನ್‌ಹೋಲ್ಡ್ (ಜರ್ಮನಿ) ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಅವರು ಚಿನ್ನ ಗೆದ್ದರೆ, ಶೂಟರ್‌ಗಳಾದ ಮನು ಭಾಕರ್ (ಮಹಿಳೆಯರ 10 ಮೀ. ಏರ್ ಪಿಸ್ತೂಲ್) ಮತ್ತು ಸೌರಭ್ ಚೌಧರಿ (ಪುರುಷರ 10 ಮೀ. ಏರ್ ಪಿಸ್ತೂಲ್) ಮತ್ತು ವೇಟ್‌ಲಿಫ್ಟರ್ ಜೆರೆಮಿ ಲಾಲ್‌ರಿನುಂಗಾ (ಪುರುಷರ 62 ಕೆಜಿ) ನಂತರ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗುತ್ತಾರೆ. ಈ ಮೂವರು 2018ರ ಆವೃತ್ತಿಯಲ್ಲಿ ಸ್ವರ್ಣ ಪದಕ ಗೆದ್ದಿದ್ದರು.
15 ವರ್ಷದ ಖುಷ್ಬು ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗಿನಿಯಾದ ಮಾಮೈಸಾಟಾ ಕ್ಯಾಮರಾ ವಿರುದ್ಧ 1-0 ಅಂತರದ ಗೆಲುವಿನೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕೊದ ಅಬಿರ್ ಬೌಝೌಯಿ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅವರು ಅಲ್ಜೀರಿಯಾದ ಡೌನಿಯಾ ಬೆರ್ರಾಹೌಲ್ ವಿರುದ್ಧ ಗೆಲುವು ದಾಖಲಿಸಿದರು.
261103-51-982923384

