ರಣ್‌ಬೀರ್ ಕಪೂರ್ 'ರಾಮ'ನಾಗಿ ಹಾಗೂ ಯಶ್ 'ರಾವಣ'ನಾಗಿ ನಟಿಸಿರುವ 'ರಾಮಾಯಣ' ಸಿನಿಮಾ 2026ರ ದೀಪಾವಳಿಗೆ ತೆರೆಕಾಣಲಿದೆ. ಇತ್ತೀಚೆಗೆ ನಡೆದ ಸಿನಿಮಾದ 'ಪ್ರಥಮ ಸಂಕಲ್ಪ' ಎನ್ನುವ ಕಾರ್ಯಕ್ರಮದಲ್ಲಿ ಯಶ್ ಸಿನಿಮಾದ ಅನುಭವ ಹಂಚಿಕೊಂಡರು.
'ನಾನು ಈ ಅದ್ಭುತ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ಸಂತೋಷವಿದೆ.
'ರಾಮಾಯಣ' ಸಿನಿಮಾವು ಈ ಹಂತದವರೆಗೆ ಬರುವುದಕ್ಕೆ ನಮಿತ್ ಮಲ್ಹೋತ್ರಾ ಅವರ ಛಲ ಕಾರಣ. ಇದು ಭಾರತದ ಕನಸು. ಈ ಕನಸು ನನಸಾಗಿಸಲು ನಾವೆಲ್ಲರೂ ಒಂದೇ ಕನಸಿನಡಿ ಬಂದು, ನಮ್ಮ ಕಥೆಯನ್ನು ವಿಶ್ವದ ವೇದಿಕೆಗೆ ತಲುಪಿಸಲಿದ್ದೇವೆ. ಈ ಪಯಣದಲ್ಲಿ ನಾವು ನಮ್ಮ ವೈಯಕ್ತಿಕ ಆಸಕ್ತಿಯನ್ನು ಬದಿಗೊತ್ತಿದ್ದೇವೆ. ಪ್ರಭು ಶ್ರೀರಾಮನ ಕಥೆಯನ್ನು ವಿಶ್ವದ ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ಹೇಳಲಿದ್ದೇವೆ. ಜೊತೆಗೆ ನಮ್ಮ ದೇಶದಲ್ಲೂ ಶ್ರೀರಾಮನನ್ನು ಸಂಭ್ರಮಿಸುವ ಕೆಲಸ ಈ ಮೂಲಕ ಆಗಲಿದೆ' ಎಂದಿದ್ದಾರೆ.
ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವ ಕಲಾವಿದರ ಕುರಿತು ಮಾತಿಗಿಳಿದ ಅವರು, 'ಶ್ರೀರಾಮನ ಪಾತ್ರಕ್ಕಾಗಿ ರಣ್‌ಬೀರ್ ಕಪೂರ್ ಅವರು ಯಾವ ರೀತಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಹಾಗೂ ಆಗ ಸೃಷ್ಟಿಯಾದ ಮ್ಯಾಜಿಕ್ ಅನ್ನು ಪ್ರೇಕ್ಷಕರು ಪರದೆ ಮೇಲೆ ಗಮನಿಸಲಿದ್ದಾರೆ. ಸಾಯಿ ಪಲ್ಲವಿ ಅವರು ಕಣ್ಣಿನಲ್ಲೇ ನಟಿಸಿದ್ದಾರೆ. ನಾನು ನನ್ನ ತಾತನಿಂದ ರಾಮಾಯಣದ ಕಥೆ ಕೇಳಿದ್ದೆ. ಶೋಭನಾ ಅವರು ಸಿನಿಮಾದೊಳಗೆ ಇರುವುದೇ ಅದಕ್ಕೊಂದು ಹೊಸ ರೂಪ ನೀಡಿದೆ. 'ಶೂರ್ಪಣಕಿ'ಯಾಗಿ ರಾಕುಲ್ ಪ್ರೀತ್ ಸಿಂಗ್ ನಟನೆ ಅದ್ಭುತವಾಗಿದೆ' ಎಂದಿದ್ದಾರೆ.
ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರವನ್ನು ಯಶ್ ಒಡೆತನದ ಮಾನ್‌ಸ್ಟರ್‌ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೊ ನಿರ್ಮಿಸಿದೆ. ಎರಡು ಭಾಗಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260721-51-588223059

