Dailyhunt Logo
  • Light mode
    Follow system
    Dark mode
    • Play Story
    • App Story
ಡೋಣಿ ತೀರದಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ: ತಿಂಗಳಿಗೆ ₹60 ಸಾವಿರ ಸಂಪಾದನೆ

ಡೋಣಿ ತೀರದಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ: ತಿಂಗಳಿಗೆ ₹60 ಸಾವಿರ ಸಂಪಾದನೆ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ನಾಗರಾಳದ ರೈತ ಸಾಹೇಬಗೌಡ ಪಾಟೀಲ ಎಂಬುವವರು ಎಚ್‌ಎಫ್‌ ತಳಿಯ ಆರು ಆಕಳುಗಳೊಂದಿಗೆ ಹೈನುಗಾರಿಕೆ ಆರಂಭಿಸಿದ್ದು, ಪ್ರತಿ ತಿಂಗಳು ₹60 ಸಾವಿರ ಸಂಪಾದಿಸುತ್ತಿದ್ದಾರೆ.

ಕುಮಠೆ ಗ್ರಾಮದ ರೈತ ಪ್ರಶಾಂತ ಗಾಣಿಗೇರ ಎಂಬುವವರು 16 ಆಕಳನ್ನು ತಮ್ಮ ಮನೆಯಲ್ಲಿ ಕಟ್ಟಿದ್ದು, ಪ್ರತಿ ದಿನ 110 ಲೀಟರ್‌ ಹಾಲನ್ನು ಹಿಂಡಿ, ಮಾರುವ ಮೂಲಕ ಪ್ರತಿ ತಿಂಗಳು ₹65 ಸಾವಿರ ಉಳಿತಾಯ ಮಾಡುತ್ತಿದ್ದಾರೆ.

'ಇದುವರೆಗೆ ನಮ್ಮ ಮನೆಯಲ್ಲಿ ಸಾಂಪ್ರದಾಯಕ ಹೈನುಗಾರಿಕೆ ಮಾಡಲಾಗುತ್ತಿತ್ತು. ಇದೀಗ ಹೈನೋದ್ಯಮ ಮಾಡುತ್ತಿದ್ದೇನೆ' ಎಂದು ಲಾಭ-ಲೆಕ್ಕಾಚಾರದ ಮಾತುಗಳನ್ನಾಡುತ್ತಾರೆ.

ನಾಗರಾಳದ ಮಹಾದೇವಿ ಕೊಣ್ಣೂರ ತಮ್ಮ ಹೊಲದಲ್ಲಿ ಎಚ್‌ಎಫ್‌ ತಳಿಯ 13 ಆಕಳೊಂದಿಗೆ ಹೈನುಗಾರಿಕೆ ಮಾಡುತ್ತಿದ್ದು, ತಿಂಗಳಿಗೆ ₹50 ಸಾವಿರ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ ಕೋಳಿ, ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.

ಇದೇ ರೀತಿ ಬಬಲೇಶ್ವರ ತಾಲ್ಲೂಕಿನ ನಿಡೋಣಿ, ಜಾಲಗೇರಿ, ಅರ್ಜುಣಗಿ, ಟಕ್ಕಳಕಿ, ಯಕ್ಕಂಡಿ, ನಾಗರಾಳ, ಕುಮಠೆ, ಟೋಕಳೆವಾಡಿ ಹಾಗೂ ತಿಕೋಟಾ ತಾಲ್ಲೂಕಿನ ಬಾಬಾನಗರ ಸೇರಿದಂತೆ ಒಂಬತ್ತು ಗ್ರಾಮಗಳ 105 ರೈತರು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆ, ಬೆಂಗಳೂರಿನ ಕೃಷಿಕಲ್ಪ ಫೌಂಡೇಷನ್ ಹಾಗೂ ತಿಪಟೂರಿನ ಅಕ್ಷಯಕಲ್ಪ ಫೌಂಡೇಷನ್ ಸಹಯೋಗದಲ್ಲಿ 'ಕ್ಷೀರ' ಪೈಲಟ್ ಯೋಜನೆಯಡಿ ತರಬೇತಿ, ಮಾರ್ಗದರ್ಶನ ಪಡೆದು, ಕಳೆದ ಆರೇಳು ತಿಂಗಳಿಂದ ವೈಜ್ಞಾನಿಕವಾಗಿ ಹೈನೋದ್ಯಮದಲ್ಲಿ ತೊಡಗಿದ್ದಾರೆ.

ರೈತರು ₹40 ಸಾವಿರದಿಂದ ₹90 ಸಾವಿರ ಮೊತ್ತದಲ್ಲಿ ಎಚ್‌ಎಫ್‌ ತಳಿಯ ಆಕಳುಗಳನ್ನು ಖರೀದಿಸಿ ತಂದಿದ್ದಾರೆ. ಪ್ರತಿಯೊಬ್ಬ ರೈತರು ತಮ್ಮ ಕೊಟ್ಟಿಗೆಯಲ್ಲಿ 5 ರಿಂದ 15 ಎಚ್‌ಎಫ್‌ ತಳಿಯ ಆಕಳುಗಳನ್ನು ಕಟ್ಟಿ ಹೈನುಗಾರಿಕೆ ಮಾಡುತ್ತಿದ್ದಾರೆ. ತಿಂಗಳಿಗೆ ₹50 ಸಾವಿರದಿಂದ ₹1 ಲಕ್ಷದ ವರೆಗೂ ಸಂಪಾದಿಸಿ ಇತರೆ ರೈತ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

ಈ ಮೊದಲು ಆಕಳಿಗೆ ಬೇಕಾಬಿಟ್ಟಿ ಒಣ, ಹಸಿ ಮೇವು ಹಾಕುತ್ತಿದ್ದ ರೈತರು ಇದೀಗ ತಾವೇ ಒಣ ಮೇವು, ಹಸಿ ಮೇವಿಗೆ ಉಪ್ಪು, ಅಡುಗೆ ಸೋಡಾ, ಹಿಂಡಿ, ಮೆಕ್ಕೆಜೋಳದ ನುಚ್ಚು, ಬೆಲ್ಲ, ರಸಮೇವು ಹಾಗೂ ಖನಿಜಾಂಶವನ್ನು ಹದವಾಗಿ ಮಿಶ್ರಣ ಮಾಡಿ ಸಮತೋಲಿತ (ಟೋಟಲ್‌ ಮಿಕ್ಸಡ್‌ ರೇಷನ್‌) ಪಶು ಆಹಾರ ತಯಾರಿಸುತ್ತಿದ್ದಾರೆ. ಆಕಳುಗಳಿಗೆ ಅವುಗಳ ದೇಹ ತೂಕದ ಶೇ 10ರಷ್ಟು ಆಹಾರವನ್ನು ಹೊತ್ತು, ಹೊತ್ತಿಗೆ ನೀಡುವ ಮೂಲಕ ಅಧಿಕ ಕೊಬ್ಬಿನಾಂಶ ಇರುವ ಹಾಲು ಪಡೆಯುತ್ತಿದ್ದಾರೆ.

ಕೇವಲ ಕೈಯಲ್ಲಿ ಹಾಲು ಹಿಂಡುವ ಬದಲಿಗೆ ಹಾಲು ಕರೆಯುವ ಯಂತ್ರವನ್ನು (ಮಿಲ್ಕಿಂಗ್‌ ಮಿಷನ್‌) ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕರೆದ ಹಾಲನ್ನು ಸಮೀಪದ ಖಾಸಗಿ ಡೈರಿಗಳಿಗೆ ಲೀಟರ್‌ಗೆ ₹38 ರಿಂದ ₹40 ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಆಕಳುಗಳನ್ನು ಕೊಟ್ಟಿಗೆಯಲ್ಲಿ ಒಂದೇ ಕಡೆ ದಿನವಿಡೀ ಕಟ್ಟಿ ಹಾಕುವ ಬದಲಿಗೆ ಹೊಲದಲ್ಲಿ ಅವುಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿರುವ 'ಪೆಡಾಕ್‌'ನಲ್ಲಿ (ಆವರಣ) ಬಿಡುತ್ತಿದ್ದಾರೆ. ಇದರಿಂದ ಆಕಳುಗಳು ಸ್ವತಂತ್ರವಾಗಿ ಅಡ್ಡಾಡಿಕೊಂಡು ಇರುತ್ತವೆ. ಎಚ್‌ಎಫ್‌ ಆಕಳುಗಳಿಗೆ ಹೆಚ್ಚಾಗಿ ಕಾಡಿಸುವ 'ಕೆಚ್ಚಲ ಬಾವು' ತಡೆಯುವ ಮನೆಮದ್ದನ್ನು ತಾವೇ ತಯಾರಿಸಿ ಲೇಪಿಸುತ್ತಾರೆ. ವೈಜ್ಞಾನಿಕವಾಗಿ ಮತ್ತು ಶುಚಿತ್ವ (ಹೈಜನಿಕ್‌) ಆಗಿ ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಲಾಭ ಗಳಿಸತೊಡಗಿದ್ದಾರೆ.

'ಕ್ಷೀರ' ಪೈಲಟ್ ಯೋಜನೆಯ ಕಾರ್ಯಕ್ರಮ ಅಧಿಕಾರಿ ಸಂತೋಷ ಬಿರಾದಾರ ಹಾಗೂ ಕ್ಷೇತ್ರ ವಿಸ್ತರಣಾಧಿಕಾರಿಗಳಾದ ಶಾನುದ್‌ ಸಾರಾವಾಡ, ಪ್ರಭುಲಿಂಗ ಬಿರಾದಾರ, ಜಬ್ಬರ್‌ ಇನಾಂದಾರ, ರಾಜು ಟಕ್ಕಳಕಿ, ಶಿವರಾಜ ಮತ್ತು ಶಿವಪ್ಪ ಅವರು ಪ್ರತಿ ನಿತ್ಯ ದನದ ಕೊಟ್ಟಿಗೆಗಳಿಗೆ ತೆರಳಿ ರೈತರಿಗೆ ಅಗತ್ಯ ಮಾರ್ಗದರ್ಶನ, ನೆರವು ನೀಡುತ್ತಿದ್ದಾರೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಹಿರಿಯ ಪುತ್ರ ಹಾಗೂ ಬಿಎಲ್‌ಡಿಇ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿಗಳಾದ ಬಸನಗೌಡ ಎಂ.ಪಾಟೀಲ ಅವರ ಕನಸಿನ ಕೂಸಾದ 'ಕ್ಷೀರಾ' ಪೈಲಟ್‌ ಯೋಜನೆ ಸದ್ಯ ಒಂಬತ್ತು ಗ್ರಾಮಗಳಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಿದ್ದು, ಮುಂದಿನ ದಿನಗಳಲ್ಲಿ ಆಸಕ್ತ ರೈತರೊಡಗೂಡಿ ಜಿಲ್ಲೆಯಾದ್ಯಂತ ವಿಸ್ತರಿಸಲು ಅವರು ಅಣಿಯಾಗಿದ್ದಾರೆ.

-ಬಸನಗೌಡ ಎಂ. ಪಾಟೀಲ, ಕುಲಪತಿ, ಬಿಎಲ್‌ಡಿಇ ಡೀಮ್ಡ್‌ ವಿ.ವಿ 'ಕ್ಷೀರ' ಪೈಲಟ್‌ ಯೋಜನೆ ಜಾರಿಗೆ ನೆರವಾಗಲು ಬಿಎಲ್‌ಡಿಇ ಸಂಸ್ಥೆ ಪ್ರತಿ ವರ್ಷ ₹50 ಲಕ್ಷದಂತೆ ಐದು ವರ್ಷ ಆರ್ಥಿಕ ಸಹಾಯ ನೀಡಲಿದೆ.-ಸಿ.ಎಂ.ಪಾಟೀಲ, ಮುಖ್ಯ ಕಾರ್ಯ ನಿರ್ವಣಾಧಿಕಾರಿ, ಕೃಷಿಕಲ್ಪ ಫೌಂಡೇಷನ್, ಬೆಂಗಳೂರು'ಕ್ಷೀರ' ಪೈಲಟ್‌ ಯೋಜನೆ ಜಾರಿಗೆ ಸೂಕ್ತವಾದ ಬಬಲೇಶ್ವರ, ತಿಕೋಟಾ ತಾಲ್ಲೂಕಿನ 150 ರೈತರನ್ನು ಆಯ್ಕೆ ಮಾಡಿ, ವೈಜ್ಞಾನಿಕ ತರಬೇತಿ ನೀಡಲಾಗಿದೆ. ಹಾಲು ಉತ್ಪಾದನೆಯಿಂದ ಆಗುವ ಲಾಭಗಳು ಕುರಿತು ತಿಳಿಸಿದ್ದೇವೆ.-ಮಹಾಂತೇಶ ಬಿರಾದಾರ, ಕೈಗಾರಿಕಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ'ಕ್ಷೀರ' ಯೋಜನೆ ರೈತರು, ಮಹಿಳೆಯರು, ಯುವಕರ ಪರ, ಪಕ್ಷಾತೀತ ಯೋಜನೆಯಾಗಿದೆ. ಇದು ಕೇವಲ ಹಾಲು ಸಂಗ್ರಹ ಯೋಜನೆಯಲ್ಲ, ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವ ಯೋಜನೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-26-1262417223

Dailyhunt
Disclaimer: This content has not been generated, created or edited by Dailyhunt. Publisher: Prajavani