Dailyhunt Logo
  • Light mode
    Follow system
    Dark mode
    • Play Story
    • App Story
ದ್ರಾಕ್ಷಿ ನಾಡಲ್ಲಿ 'ಕೇಸರ' ಮಾವಿನ ಕಂಪು:  ₹7 ಲಕ್ಷ ಆದಾಯ ಗಳಿಸಿದ ರೈತ

ದ್ರಾಕ್ಷಿ ನಾಡಲ್ಲಿ 'ಕೇಸರ' ಮಾವಿನ ಕಂಪು: ₹7 ಲಕ್ಷ ಆದಾಯ ಗಳಿಸಿದ ರೈತ

ತಿಕೋಟಾ: ದ್ರಾಕ್ಷಿ ಬೆಳೆಗೆ ಹೆಸರಾದ, ಗರಸು ನೆಲದಲ್ಲಿ ಕೇಸರ್‌ ತಳಿಯ ಮಾವು ಬೆಳೆದು ₹7 ಲಕ್ಷ ಆದಾಯ ಪಡೆದಿದ್ದಾರೆ ತಾಲ್ಲೂಕಿನ ಬಾಬಾನಗರ ಗ್ರಾಮದ ರೈತ ಮುರಗೇಶ ಬಸಗೊಂಡ ಡೆಂಗನವರ.

ಮುರಗೇಶ ಅವರ 8 ಎಕರೆ ತೋಟದಲ್ಲಿ 4 ಎಕರೆ ದ್ರಾಕ್ಷಿ ಬೆಳೆ ಇದೆ. 2 ಎಕರೆ ಭೂಮಿಯಲ್ಲಿ ಮಹಾರಾಷ್ಟ್ರದಿಂದ ಕೇಸರ್‌ ತಳಿಯ ಮಾವಿನ ಸಸಿ ತಂದು ನೆಟ್ಟಿದ್ದಾರೆ.

ಒಂದು ಸಸಿಗೆ ₹200 ರಂತೆ 1,200 ಸಸಿಗೆ ಒಟ್ಟು ₹2.4 ಲಕ್ಷ ವೆಚ್ಚ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ ಐದು ಅಡಿ, ಸಾಲಿನಿಂದ ಸಾಲಿಗೆ 12 ಅಡಿ ಹಿಟಾಚಿ ಮೂಲಕ ಲಳಿ (ಉದ್ದ ಸಾಲಾಗಿ ಅಗೆಯುವುದು) ತೆಗೆದಿದ್ದಾರೆ. ಹನಿ ನೀರಾವರಿ ಅಳವಡಿಸಿ ಆರಂಭಿಕ ಖರ್ಚು, ಕೂಲಿಕಾರರ ವೇತನ, ಗೊಬ್ಬರ ಸೇರಿ ಮೂರು ವರ್ಷದವರೆಗೆ ಒಟ್ಟು ₹ 5 ಲಕ್ಷ ವ್ಯಯಿಸಿದ್ದಾರೆ.

ಮೂರು ವರ್ಷದವರೆಗೆ ಜೋಪಾನವಾಗಿ ಬೆಳೆಸಿದ ಮಾವಿನ ಬೆಳೆ ನಾಲ್ಕನೇ ವರ್ಷಕ್ಕೆ ಮೂರು ಟನ್‌ಗಿಂತ ಹೆಚ್ಚು ಫಸಲು ಬಿಟ್ಟಿದೆ. ನಾರು ರಹಿತ ತಿನ್ನಲು ರುಚಿಕರವಾದ ಮಾವನ್ನು ಜಾರ್ಖಂಡ್ ರಾಜ್ಯದ ಪ್ರತಿಷ್ಠಿತ ಮಾರುಕಟ್ಟೆಗೆ ರವಾನೆ ಮಾಡಿದ್ದಾರೆ.

ಕೆ.ಜಿಗೆ ₹150ನಂತೆ ಮಾರಾಟವಾದ ಈ ಮಾವಿನಿಂದ ₹5 ಲಕ್ಷ ರೈತನ ಕೈ ಸೇರಿದೆ. ಸದ್ಯ ಈಗ ಐದನೇ ವರ್ಷದ ಬೆಳೆ ಇದ್ದು ಈ ವರ್ಷ ₹7 ಲಕ್ಷ ಆದಾಯ ಬಂದಿದೆ. ಮೊದಲ ಆದಾಯ ₹5 ಲಕ್ಷ ಖರ್ಚು ಕಳೆದಂತಾಗಿದ್ದು, ಈ ವರ್ಷದ ₹7 ಲಕ್ಷ ರೈತನಿಗೆ ಆದಾಯವಾಗಿದೆ.

ವಿಶೇಷತೆ: ಕೇಸರ ಮಾವು ಭಾರತದ ಪ್ರಸಿದ್ಧ ಮಾವಿನ ತಳಿಗಳಲ್ಲಿ ಒಂದು. ಇದನ್ನು ಮುಖ್ಯವಾಗಿ ಗುಜರಾತ್‌ ರಾಜ್ಯದ ಗೀರ್ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಹಳದಿ-ಕೇಸರಿ ಬಣ್ಣ ಇರುವುದರಿಂದ ಕೇಸರ್‌ ಎಂಬ ಹೆಸರು ಬಂದಿದೆ.

ತುಂಬಾ ಸಿಹಿ, ಸುಗಂಧಯುಕ್ತ ಮತ್ತು ರಸಭರಿತವಾಗಿರುತ್ತದೆ. ಕಡಿಮೆ ನಾರು, ಮೃದುವಾದ ತಿರುಳು ಇದ್ದು, ಜ್ಯೂಸ್, ಐಸ್‌ಕ್ರೀಂ, ಸಿಹಿ ಪದಾರ್ಥಗಳ ತಯಾರಿಕೆಗೆ ಬಳಕೆಯಾಗುತ್ತದೆ. ಕೇಸರ್ ಮಾವಿನ ರುಚಿ ಮತ್ತು ಸುಗಂಧಕ್ಕಾಗಿ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ವಿಟಮಿನ್ ಎ, ಸಿ ಹಾಗೂ ನೈಸರ್ಗಿಕ ಸಕ್ಕರೆ ಅಂಶ ಹೊಂದಿರುತ್ತದೆ.

ನೀರಾವರಿ ಅನುಕೂಲ:ಸಚಿವ ಎಂ.ಬಿ.ಪಾಟೀಲ ಅವರು ಮಾಡಿದ ನೀರಾವರಿ ಯೋಜನೆಯಿಂದ ತೋಟದಲ್ಲಿನ ಬಾವಿ, ಎರಡು ಬೋರ್‌ವೆಲ್ ನೀರಿನಿಂದ ಇಷ್ಟೆಲ್ಲಾ ಬೆಳೆ ಬೆಳೆಯಲು ಅನುಕೂಲವಾಗಿದೆ. ನೀರಾವರಿ ಮಾಡಿದ ಸಚಿವರಿಗೆ ರೈತ ತಾನು ಬೆಳೆದ ಮಾವು ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

-ಮುರಗೇಶ ಡೆಂಗನವರ, ಮಾವು ಬೆಳೆದ ರೈತದ್ರಾಕ್ಷಿ ಜೊತೆಗೆ ಕೇಸರ ಮಾವು ಲಾಭದಾಯಕವಾಗಿದ್ದು, ಕಡಿಮೆ ನಿರ್ವಹಣೆಯಿಂದ ಅಧಿಕ ಲಾಭ ಪಡೆದುಕೊಂಡಿದ್ದೇನೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-26-1210196005

Dailyhunt
Disclaimer: This content has not been generated, created or edited by Dailyhunt. Publisher: Prajavani