ಭಟ್ಕಳ: ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ, ಭಟ್ಕಳ ಮೂಲದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಪಟ್ಟಣದ ಜಾಲಿ ಆಜಾದ್ ನಗರದ ನಿವಾಸಿ ಮೊಹಮ್ಮದ್ ಸಫ್ವಾನ್ ಶಾನು (38) ಮೃತ. ಅವರು ಭಟ್ಕಳದ ವೈಎಂಎಸ್‌ಎ ಸಂಸ್ಥೆಯ ಸಕ್ರಿಯ ಸದಸ್ಯರಾಗಿದ್ದರು. ಭಾನುವಾರ ರಜೆಯ ಕಾರಣ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದರು.
ಆಟವಾಡುವಾಗ ಹಠಾತ್ ಅಸ್ವಸ್ಥಗೊಂಡು ಮೈದಾನದಲ್ಲಿ ಕುಳಿತರು. ಅವರ ಸಹಚರರು ತಕ್ಷಣವೇ ಆಸ್ಪತ್ರೆಗೆ ಕರೆತರಲು ಪ್ರಯತ್ನಿಸಿದರೂ ಆಸ್ಪತ್ರೆ ತಲುಪುವ ಮೊದಲೇ ಅವರು ನಿಧನರಾದರು ಎಂದು ಮೊಹಮ್ಮದ್ ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಮೃತರಿಗೆ ಪತ್ನಿ, ಮೂವರು ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ನಿಧನದ ಸುದ್ದಿ ತಿಳಿದ ನಂತರ, ಅವರ ಪೋಷಕರು ದುಬೈಗೆ ತೆರಳಿದ್ದಾರೆ.
ಸಫ್ವಾನ್ ಶಾನು ಅವರು ಖಾಸಗಿ ಕಂಪನಿಯೊಂದರಲ್ಲಿ ಸುಮಾರು ಎಂಟು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಐದು ವರ್ಷಗಳ ಹಿಂದೆ ತಮ್ಮದೇ ಆದ ಸ್ವಂತ ವ್ಯವಹಾರವನ್ನು ಆರಂಭಿಸಿದ್ದರು. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದರು. ಒಂದು ವರ್ಷದ ಹಿಂದೆ ಭಟ್ಕಳಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು.

