Dailyhunt Logo
  • Light mode
    Follow system
    Dark mode
    • Play Story
    • App Story
ದುಡ್ಡಿನ ಚೀಲದ ಜೊತೆ ಆರೋಪಿ: ಅಯೋಧ್ಯೆ ಅಕ್ರಮ ಟ್ರಸ್ಟ್‌ಗೆ ಮೊದಲೇ ತಿಳಿದಿತ್ತು..!

ದುಡ್ಡಿನ ಚೀಲದ ಜೊತೆ ಆರೋಪಿ: ಅಯೋಧ್ಯೆ ಅಕ್ರಮ ಟ್ರಸ್ಟ್‌ಗೆ ಮೊದಲೇ ತಿಳಿದಿತ್ತು..!

ಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ವಿಷಯವು ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಪ್ರಕರಣ ಬಯಲಾಗುವುದಕ್ಕೂ ಮುನ್ನವೇ ಅಕ್ರಮ ನಡೆಯುತ್ತಿರುವ ವಿಷಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗಮನಕ್ಕೆ ಬಂದಿತ್ತು ಎಂಬ ವಿಷಯ ಈಗ ಬಯಲಾಗಿದೆ.

ಮೂಲಗಳ ಪ್ರಕಾರ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸೂಚನೆಯ ಮೇರೆಗೆ ಟ್ರಸ್ಟ್‌ನ ಪ್ರತಿನಿಧಿಗಳು ಜೂನ್ 5 ರಂದು ಪೊಲೀಸರೊಂದಿಗೆ ಆರೋಪಿಗಳಲ್ಲಿ ಒಬ್ಬರಾದ ಅವಿನಾಶ್ ಶುಕ್ಲಾ ಅವರ ನಿವಾಸಕ್ಕೆ ಹೋಗಿದ್ದರು. ಶೋಧದ ಸಮಯದಲ್ಲಿ ನಗದು ಪತ್ತೆಯಾಗಿದ್ದು, ಈ ವಿಷಯ ಆಗಲೇ ಪೊಲೀಸರ ಗಮನಕ್ಕೆ ಬಂದಿತ್ತು.

ಶೋಧ ಕಾರ್ಯಾಚರಣೆ ನಡೆಸಿ ಹಣ ಪತ್ತೆಯಾದ ಬಳಿಕವೂ ಟ್ರಸ್ಟ್ ಪೊಲೀಸರಿಗೆ ದೂರು ನೀಡಿರಲಿಲ್ಲ. ಪೊಲೀಸರ ಜೂನ್ 5ರ ಕಾರ್ಯಾಚರಣೆಯು ಅನೌಪಚಾರಿಕವಾಗಿ ನಡೆದಿತ್ತು. ಅದಕ್ಕೆ ಯಾವುದೇ ಅಧಿಕೃತವಾಗಿ ದಾಖಲಾದ ಎಫ್‌ಐಆರ್‌ ಆಧಾರವಿರಲಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ದೇಣಿಗೆ ದುರುಪಯೋಗದ ಆರೋಪವು ಜೂನ್ 7ರಂದು ಬಹಿರಂಗಗೊಂಡಿತ್ತು. ಇದು ದೇಶದಾದ್ಯಂತ ಜನರ ಗಮನ ಸೆಳೆದಿದ್ದಲ್ಲದೇ ತೀವ್ರ ಟೀಕೆ ಕೇಳಿಬಂದಿತ್ತು. ತನಿಖೆಗೆ ಒತ್ತಾಯಿಸಲಾಗಿತ್ತು.

ದುಡ್ಡಿನ ಚೀಲದ ಜೊತೆ ಆರೋಪಿ: ಸಿಸಿಟಿವಿಯಲ್ಲಿ ಸೆರೆ

ಏತನ್ಮಧ್ಯೆ, ಜೂನ್ 5ರ ಘಟನೆಗೆ ಸಂಬಂಧಿಸಿದೆ ಎಂದು ಹೇಳಲಾದ ಸಿಸಿಟಿವಿ ದೃಶ್ಯಾವಳಿ ಸಹ ಬಹಿರಂಗಗೊಂಡಿವೆ. 24 ಸೆಕೆಂಡುಗಳ ವಿಡಿಯೊ ಕ್ಲಿಪ್‌ನಲ್ಲಿ ಎಂಟು ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್ ಶುಕ್ಲಾ ಅವರನ್ನು ವಶಕ್ಕೆ ಪಡೆದ ನಂತರ ಬಿಳಿ ವಾಹನದ ಕಡೆಗೆ ಪೊಲೀಸ್ ಸಿಬ್ಬಂದಿ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ಶೋಧದ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ನಗದು ತುಂಬಿದ್ದ ಕಪ್ಪು ಚೀಲವನ್ನು ಹೊತ್ತೊಯ್ಯುತ್ತಿರುವ ದೃಶ್ಯಾವಳಿ ಸಹ ಕಾಣಬಹುದಾಗಿದೆ.

ಈ ನಡುವೆ, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ಮತ್ತೊಬ್ಬ ಆರೋಪಿ ರಾಮಶಂಕರ್ ಮಿಶ್ರಾ ಅವರ ಮೊದಲ ಛಾಯಾಚಿತ್ರ ಬಹಿರಂಗಗೊಂಡಿದೆ.

ಹಣಕಾಸಿನ ಅಕ್ರಮಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಈ ಹಿಂದೆ ಅಯೋಧ್ಯೆ ದೇಗುಲದಲ್ಲಿ ಕಾಣಿಕೆಗಳ ನಿರ್ವಹಣೆಯಲ್ಲಿ ನಡೆದಿರುವ ಹಲವು ಲೋಪಗಳನ್ನು ಬಹಿರಂಗಪಡಿಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಗದು ನಿರ್ವಹಣೆ, ಸಿಸಿಟಿವಿ ಮೇಲ್ವಿಚಾರಣೆಯಲ್ಲಿ ನ್ಯೂನತೆಗಳನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ.

ದೇಣಿಗೆಗಳನ್ನು ನಿರ್ವಹಿಸುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಖಾಸಗಿ ಸಂಸ್ಥೆಯ ಮೂಲಕ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೆಲವು ನೇಮಕಾತಿ ಟ್ರಸ್ಟ್ ಅಧಿಕಾರಿಗಳಿಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ. ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಖರೀದಿ ವ್ಯವಹಾರವನ್ನೂ ಪರಿಶೀಲಿಸಲು ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ನಡುವೆ ಎಸ್‌ಐಟಿ ತನ್ನ ತನಿಖಾ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ.

ಪೊಲೀಸ್ ಮೂಲಗಳ ಪ್ರಕಾರ, ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿಸಲಾದ ಎಂಟು ಜನರ ನಿವಾಸಗಳ ಮೇಲೆ ಅಯೋಧ್ಯೆ ಪೊಲೀಸರು ಭಾನುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಲವ ಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮಶಂಕರ್ ಯಾದವ್ ಸೇರಿದಂತೆ ಆರೋಪಿಗಳ ಮನೆಗಳಲ್ಲಿ ಸ್ಥಳೀಯ ಮ್ಯಾಜಿಸ್ಟ್ರೇಟ್‌ ಜೊತೆ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದವು.

ನ್ಯಾಯಾಲಯವು ಎಂಟು ಆರೋಪಿಗಳನ್ನು ಜೂನ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ. ಸೋಮವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಪೊಲೀಸರು ಮತ್ತೆ ಅವರನ್ನು ಕಸ್ಟಡಿಗೆ ಕೇಳುವ ನಿರೀಕ್ಷೆ ಇದೆ.

ಪ್ರಕರಣ ಬಯಲಾದ ರೀತಿ

ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗದ ಆರೋಪಗಳು ಬಂದ ನಂತರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು.

ರಾಮಮಂದಿರ ಟ್ರಸ್ಟ್‌ಗೆ ನೀಡಲಾದ ಕೋಟ್ಯಂತರ ರೂಪಾಯಿ ಹಣಕ್ಕೆ ದಾಖಲೆಯೇ ಇಲ್ಲ. ಈ ಬಗ್ಗೆ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಜೂನ್ 7ರಂದು ಆರೋಪ ಮಾಡಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿದ್ದ ವಿಎಚ್‌ಪಿಯ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್, ಕಾಂಗ್ರೆಸ್ ಮತ್ತು ಎಸ್‌ಪಿ ಈ ವಿಷಯವನ್ನು ರಾಜಕೀಕರಣಗೊಳಿಸುವ ಮೂಲಕ 2027ರ ವಿಧಾನಸಭೆ ಚುನಾವಣೆ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದರು.

ವಾಗ್ಯುದ್ಧಕ್ಕೆ ಮುಂದಾಗಿದ್ದ ಅಖಿಲೇಶ್ ಯಾದವ್

ಈ ವಿಷಯದ ಕುರಿತಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ವಿಶ್ವ ಹಿಂದೂ ಪರಿಷತ್ ಅನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿದ್ದ ಅಖಿಲೇಶ್ ಯಾದವ್,ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದರೂ ರಾಮ ಮಂದಿರದ ಅಕ್ರಮ ಬಯಲಾಗದೇ ಇರುವುದಕ್ಕೆ ಕಾರಣವೇನು? ದೀಪದ ಕೆಳಗೆ ಕತ್ತಲು ಎಂಬ ಗಾದೆ ಮಾತು ಇದಕ್ಕೆ ಸರಿಯಾಗಿ ಹೋಲುತ್ತದೆ ಎಂದು ಕಿಡಿಕಾರಿದ್ದರು.

ಬಳಿಕ, ಪ್ರಕರಣದಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನೂ ರಕ್ಷಿಸುವ ಮಾತೇ ಇಲ್ಲ. ಸಮಗ್ರ ಮತ್ತು ಪಾರದರ್ಶಕ ತನಿಖೆ ನಡೆಯಲಿ ಎಂದು ವಿಎಚ್‌ಪಿ ಹೇಳಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani