Dailyhunt Logo
  • Light mode
    Follow system
    Dark mode
    • Play Story
    • App Story
ಎ.ಐ ಜಾತ್ರೆಯಲ್ಲಿ 'ಜಿ.ಐ' ಕಾಫಿಯ ಪರಿಮಳ

ಎ.ಐ ಜಾತ್ರೆಯಲ್ಲಿ 'ಜಿ.ಐ' ಕಾಫಿಯ ಪರಿಮಳ

ಡಿಕೇರಿ: ನವದೆಹಲಿಯಲ್ಲಿ ನಡೆಯುತ್ತಿರುವ 'ಎಐ (ಕೃತಕ ಬುದ್ಧಿಮತ್ತೆ) ಇಂಪ್ಯಾಕ್ಟ್ ಶೃಂಗಸಭೆ'ಯಲ್ಲಿ ಭಾರತೀಯ ಕಾಫಿ ಮಂಡಳಿ ತೆರೆದಿರುವ ಮಳಿಗೆಯು ಎಲ್ಲ ದೇಶದ ಗಣ್ಯರ ಗಮನ ಸೆಳೆದಿದೆ.

ಗೂಗಲ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಈ ಮಳಿಗೆಗೆ ಭೇಟಿ ನೀಡಿ ವೈವಿಧ್ಯಮಯವಾದ ಭಾರತೀಯ ಕಾಫಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಜಿ.ಐ ಟ್ಯಾಗ್‌ ಹೊಂದಿರುವ ಕಾಫಿಯನ್ನು ಸುಂದರ್ ಪಿಚೈ ಅವರು ಕುತೂಹಲದಿಂದ ವೀಕ್ಷಿಸಿ ಕಾಫಿ ಸವಿಯುವ ವಿಡಿಯೊವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯೆಲ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಕಾಫಿ ಬೆಳೆಗಾರರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ.

'ಭಾರತೀಯ ಕಾಫಿಯು ಜಾಗತಿಕವಾಗಿ ಬ್ರಾಂಡಿಂಗ್ ಆಗಲು ಇದು ಉತ್ತಮ ಮೊದಲ ಹೆಜ್ಜೆಯಾಗಿದ್ದು, ಈ ಅವಕಾಶವನ್ನು ಭಾರತೀಯ ಕಾಫಿ ಮಂಡಳಿ ಮಾತ್ರವಲ್ಲ, ಕೇಂದ್ರ ವಾಣಿಜ್ಯ ಸಚಿವಾಲಯ ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳಬೇಕು' ಎಂಬ ಒತ್ತಾಯ ಕೇಳಿ ಬಂದಿದೆ.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್‌, 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿ, 'ಸುಂದರ್ ಪಿಚೈ ಮಾತ್ರವಲ್ಲ, ಸಾಕಷ್ಟು ಜಾಗತಿಕ ಉದ್ಯಮಿದಾರರು ಮಳಿಗೆಗೆ ಭೇಟಿ ನೀಡಿ ಪ್ರದರ್ಶನಕ್ಕಿಟ್ಟಿದ್ದ ಭಾರತೀಯ ಜಿಐ ಟ್ಯಾಗ್‌ ಕಾಫಿಯ ಕುರಿತು ಮಾಹಿತಿ ಪಡೆದುಕೊಂಡರು. ಇದು ಭಾರತೀಯ ಕಾಫಿ ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಆಗುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ' ಎಂದು ತಿಳಿಸಿದರು.

'ಈ ಮಳಿಗೆಯಲ್ಲಿ ಕರ್ನಾಟಕದಿಂದ ಜಿ.ಐ ಟ್ಯಾಗ್ ಪಡೆದಿರುವಂತಹ ಚಿಕ್ಕಮಗಳೂರು, ಬಾಬಾಬುಡನ್, ಮಂಜರಾಬಾದ್, ಕೂರ್ಗ್ ಅರೆಬಿಕಾ ಹಾಗೂ ಮಾನ್ಸೂನ್‌ ಮಲಬಾರ್ ಕಾಫಿ ಸಹ ಸ್ಥಾನ ಪಡೆದಿತ್ತು. ಇವುಗಳೂ ಜಾಗತಿಕ ನಾಯಕರ ಗಮನ ಸೆಳೆದವು' ಎಂದು ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಕೂರ್ಗ್ ಪ್ಲಾಂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ನಂದಾ ಬೆಳ್ಳಿಯಪ್ಪ, 'ಜಾಗತಿಕವಾಗಿ ಭಾರತೀಯ ಕಾಫಿಯನ್ನು ಹೆಚ್ಚು ಪ್ರಚಾರ ಮಾಡಲು ಇದೊಂದು ಸುವರ್ಣ ಅವಕಾಶ' ಎಂದರು.

'ನೆರಳಿನಡಿ ಬೆಳೆಯುವ ಭಾರತದ ಕಾಫಿ ಜಾಗತಿಕವಾಗಿ ವಿಭಿನ್ನ ಮಾತ್ರವಲ್ಲ ವಿಶೇಷವೂ ಹೌದು. ಬ್ರೆಜಿಲ್, ಉಗಾಂಡ, ವಿಯೆಟ್ನಾಂ ಸೇರಿ ಕಾಫಿ ಬೆಳೆಯುವ ಇತರೆ ದೇಶಗಳಿಗಿಂತ ಭಾರತದ ಕಾಫಿ ವಿಭಿನ್ನವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಕಾಫಿಯನ್ನೇ ಜಾಗತಿಕವಾಗಿ ಜಿ.ಐ ಟ್ಯಾಗ್ ಮಾಡಿ, ಬ್ರಾಂಡಿಂಗ್ ಮಾಡುವುದು ಅವಶ್ಯ' ಎಂದು ಹೇಳಿದರು.

 ನವದೆಹಲಿಯಲ್ಲಿ ನಡೆಯುತ್ತಿರುವ ಎ.ಐ (ಕೃತಕ ಬುದ್ಧಿಮತ್ತೆ) ಇಂಪ್ಯಾಕ್ಟ್ ಶೃಂಗಸಭೆಯಲ್ಲಿರುವ ಭಾರತೀಯ ಕಾ‍ಫಿ ಮಂಡಳಿಯ ಮಳಿಗೆಯಲ್ಲಿ ಗೂಗಲ್ ಕಂಪ‍ನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಅವರು ಕಾಫಿ ಸ್ವೀಕರಿಸಿದರು

ಮಳಿಗೆಯಲ್ಲಿದೆ ತರಹೇವಾರಿ ಭಾರತೀಯ ಕಾಫಿ ಕರ್ನಾಟಕದಿಂದ ಜಿ.ಐ ಟ್ಯಾಗ್ ಪಡೆದ ಕಾಫಿಗೆ ಮೆಚ್ಚುಗೆ ಜಾಗತಿಕವಾಗಿ ಬ್ರಾಂಡ್ ಮಾಡಲು ಒತ್ತಾಯ

Dailyhunt
Disclaimer: This content has not been generated, created or edited by Dailyhunt. Publisher: Prajavani