Dailyhunt Logo
  • Light mode
    Follow system
    Dark mode
    • Play Story
    • App Story
ಎ.ಐನಿಂದ ಉದ್ಯೋಗ ಕಡಿತವೇ? ಬೇರೆಯದೇ ಕಥೆ ಹೇಳುತ್ತಿದೆ ಫ್ರಾನ್ಸ್‌ನ ಕಂಪನಿ!

ಎ.ಐನಿಂದ ಉದ್ಯೋಗ ಕಡಿತವೇ? ಬೇರೆಯದೇ ಕಥೆ ಹೇಳುತ್ತಿದೆ ಫ್ರಾನ್ಸ್‌ನ ಕಂಪನಿ!

'ಕೃತಕ ಬುದ್ಧಿಮತ್ತೆಯಿಂದಾಗಿ (ಎ.ಐ) ನಮ್ಮ ಕಂಪನಿಯು ಉದ್ಯೋಗ ಕಡಿತಗೊಳಿಸುತ್ತಿದೆ' ಇಂಥಹದ್ದೊಂದು ಹೇಳಿಕೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ವಿಶ್ವದ ಯಾವುದಾದರೊಂದು ಭಾಗದಲ್ಲಿ ಕಂಪನಿಯ ಸಿಇಒ ಒಬ್ಬರು ಈ ರೀತಿ ಘೋಷಣೆ ಮಾಡುತ್ತಲೇ ಇರುತ್ತಾರೆ. ಮೆಟಾ, ಅಮೆಜಾನ್, ಗೂಗಲ್‌ನಂತಹ ಬೃಹತ್ ಕಂಪನಿಗಳು ಕೂಡ ಇದಕ್ಕೆ ಹೊರತಾಗಿಲ್ಲ.

'ಎ.ಐ ಆ ಕೆಲಸವನ್ನು ಕಡಿಮೆ ವೆಚ್ಚದಲ್ಲಿ ಮಾಡಬಲ್ಲದು, ಆದ್ದರಿಂದ ಮನುಷ್ಯರ ಅಗತ್ಯವಿಲ್ಲ' ಎಂದು ಸ್ಟಾಂಡರ್ಟ್ ಚಾರ್ಟಡ್ ಬ್ಯಾಂಕ್‌ನ ಸಿಇಒ ಬಿಲ್ ವಿಂಟರ್ಸ್ ನೇರವಾಗಿ ಹೇಳಿದ್ದರು. ಅಂದರೆ ಕಡಿಮೆ ಉತ್ಪಾದಕತೆಯ ಮಾನವನ ಸ್ಥಾನಕ್ಕೆ ತಂತ್ರಜ್ಞಾನವನ್ನು ತರುವುದಾಗಿ ಪರೋಕ್ಷವಾಗಿ ಹೇಳಿದ್ದರು.

ಹಣಕಾಸು ಸಾಕ್ಷರತೆ: ಎ.ಐ ನಿಮ್ಮ ಸಹಾಯಕ, ಯಜಮಾನನಲ್ಲ

ಸದ್ಯ ಲಭ್ಯ ಇರುವ ಅಂಕಿ ಅಂಶಗಳು ಅವರ ಮಾತನ್ನು ಪುಷ್ಟೀಕರಿಸುತ್ತವೆ. ಔಟ್‌ಪ್ಲೇಸ್‌ಮೆಂಟ್ ಸಂಸ್ಥೆಯಾದ ಚಾಲೆಂಜರ್, ಗ್ರೇ ಮತ್ತು ಕ್ರಿಸ್ಮಸ್ ಪ್ರಕಾರ, 2025ರಲ್ಲಿ ಅಮೆರಿಕದಲ್ಲಿ 55 ಸಾವಿರ ಉದ್ಯೋಗ ಕಡಿತಕ್ಕೆ ಎ.ಐ ಕಾರಣ ಎಂದು ಕಂಪನಿಗಳು ಹೇಳಿವೆ. ಅಂದರೆ ಇದು 2023ಕ್ಕೆ ಹೋಲಿಕೆ ಮಾಡಿದರೆ ಹನ್ನೆರಡು ಪಟ್ಟು ಹೆಚ್ಚು. 2025ರಲ್ಲಿ ಅಮೆರಿಕದಲ್ಲಿ ಕೆಲಸ ಕಳೆದುಕೊಂಡವರ ಒಟ್ಟು ಸಂಖ್ಯೆ 11.70 ಲಕ್ಷ . ಇದು 2020ರ ಕೋವಿಡ್ ಬಳಿಕ ನಡೆದ ಅತಿ ದೊಡ್ಡ ಉದ್ಯೋಗ ಕಡಿತ.

ಆದರೆ, ಉತ್ತರ ಫ್ರಾನ್ಸ್‌ನ ನಾರ್ಮಂಡಿಯಲ್ಲಿರುವ ಒಂದು ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ತೀರಾ ವಿಭಿನ್ನವಾದ ಪ್ರಯೋಗವೊಂದು ನಡೆಯುತ್ತಿದೆ. ಎ.ಐನಿಂದ ಕಾರ್ಮಿಕರನ್ನು ಉದ್ಯೋಗದಿಂದ ತೆಗೆದುಹಾಕುವ ಬದಲು, ಅವರನ್ನು ಮತ್ತಷ್ಟು ಸಮರ್ಥರನ್ನಾಗಿ ಮಾಡಿದರೆ ಏನಾಗಬಹುದು? ಇಂಥಹದ್ದೊಂದು ಪ್ರಯೋಗವನ್ನು ಷ್ನೇಡರ್ ಎಲೆಕ್ಟ್ರಿಕ್ (Schneider Electric) ಮಾಡುತ್ತಿದೆ.

ಕಂಪನಿಯ ವಿಭಿನ್ನ ಆಲೋಚನೆ

ಷ್ನೇಡರ್ ಎಲೆಕ್ಟ್ರಿಕ್ ಯಾವುದೋ ಹೊಸದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಹೊಸ ತಂತ್ರಜ್ಞಾನ ಕಂಪನಿಯಲ್ಲ. 1836ರಲ್ಲಿಯೇ ಇದು ಸ್ಥಾಪನೆಯಾಗಿದೆ. ವಿದ್ಯುತ್ ಸುರಕ್ಷಿತವಾಗಿ ಹರಿಯುವಂತೆ ಮಾಡುವ ಉಪಕರಣಗಳನ್ನು ಈ ಕಂಪನಿ ತಯಾರಿಸುತ್ತದೆ. ಎಲಿವೇಟರ್‌ನಲ್ಲಿರುವ ಸ್ವಿಚ್‌ಗಳು, ಆಸ್ಪತ್ರೆಗಳು ಮತ್ತು ಡೇಟಾ ಕೇಂದ್ರಗಳಲ್ಲಿ ವಿದ್ಯುತ್ ನಿರ್ವಹಿಸುವ ವ್ಯವಸ್ಥೆಗಳು, ಎಲೆಕ್ಟ್ರಿಕ್ ವಾಹನಗಳ ಒಳಗಿನ ಘಟಕಗಳನ್ನು ಷ್ನೇಡರ್ ತಯಾರಿಸುತ್ತದೆ. ‍ಪ್ರಪಂಚದಾದ್ಯಂತ ಸುಮಾರು 155,000 ಜನರು ಈ ಕಂಪನಿಯಲ್ಲಿ ಕೆಲಸಕ್ಕಿದ್ದಾರೆ.

ಎ.ಐ ಅಳವಡಿಕೆಯಲ್ಲಿ ಈ ಕಂಪನಿ ಮಂಚೂಣಿಯಲ್ಲಿದೆ. 'ಎಐ ಜನರ ಕೆಲಸವನ್ನು ಸುಲಭವಾಗಿಸಲು ಬಳಸಲಾಗುವುದು, ಅವರ ಸ್ಥಾನವನ್ನು ಕಸಿದುಕೊಳ್ಳುವಲ್ಲಿ ಅಲ್ಲ' ಎನ್ನುವುದು ಕಂಪನಿಯ ನೀತಿ.

ಗೂಗಲ್‌ಗೆ ಸವಾಲೊಡ್ಡಿದ ಚೀನಾದ ಡೀಪ್‌ಸೀಕ್‌ನ ಹೊಸ ಎ.ಐ ಮಾದರಿ

'ಕೆಲಸದ ಅವಧಿಯಲ್ಲಿ ಸಕಾರಣವಿಲ್ಲದೆ ವ್ಯರ್ಥವಾಗುವ ಕ್ಷಣಗಳನ್ನು ಪತ್ತೆ ಮಾಡಲು ಆರಂಭಿಸಿದೆವು. ನಮ್ಮ ಕೆಲಸಗಾರರು ಪುನರಾವರ್ತಿತ ಕೆಲಸಗಳನ್ನು ಮಾಡುವಲ್ಲಿ, ಬೇಸರದ ಕೆಲಸಗಳನ್ನು ಮಾಡುವಲ್ಲಿ ಅಥವಾ ಅನಗತ್ಯ ಕೆಲಸಗಳನ್ನು ಮಾಡುವ ಮೂಲಕ ಸಮಯ ಪೋಲಾಗುತ್ತಿತ್ತು. ಸುಲಭವಾಗಿ ಹೇಳಬೇಕೆಂದರೆ, ಕೆಲಸಕ್ಕೆ ಅಡ್ಡಿ ಉಂಟುಮಾಡುವ ಕಾರಣಗಳನ್ನು ಪತ್ತೆ ಮಾಡಲು ಆರಂಭಿಸಿದೆವು' ಎಂದು ಷ್ನೇಡರ್‌ನ ಮುಖ್ಯ ಎ.ಐ ಅಧಿಕಾರಿ ಫಿಲಿಪ್ ರಾಂಬಾಚ್ ಹೇಳಿದ್ದಾರೆ.

ಕಾಲ್‌ ಸೆಂಟರ್‌ನಲ್ಲಿ ಮೊದಲ ಪ್ರಯೋಗ

ಈ ಕೆಲಸ ಮೊದಲು ಪ್ರಾರಂಭಿಸಿದ್ದೇ ಗ್ರಾಹಕ ಸೇವೆ (ಕಸ್ಟಮರ್ ಸರ್ವಿಸ್) ವಿಭಾಗದಲ್ಲಿ. ಷ್ನೇಡರ್ ತನ್ನ ಕಾಲ್ ಸೆಂಟರ್‌ಗಳಲ್ಲಿ ಎ.ಐ ಅಳವಡಿಸಿಕೊಳ್ಳುವ ಮೊದಲು, ಗ್ರಾಹಕರು ಕರೆ ಮಾಡಿದಾಗೆಲ್ಲಾ, ಏಜೆಂಟರು ಲಕ್ಷಾಂತರ ಪುಟಗಳ ತಾಂತ್ರಿಕ ದಾಖಲೆಗಳನ್ನು ಹಸ್ತಚಾಲಿತವಾಗಿ ಹುಡುಕಬೇಕಾಗಿತ್ತು. ಇದು ನಿಧಾನಗತಿ ಹಾಗೂ ದಣಿವು ಉಂಟು ಮಾಡುವ ಕೆಲಸ. ಇದರಿಂದ ಗ್ರಾಹಕರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿರಲಿಲ್ಲ. 'ನಮ್ಮ ಗ್ರಾಹಕರು ಉತ್ತರದ ಗುಣಮಟ್ಟದಿಂದಾಗಲಿ ಅಥವಾ ಉತ್ತರದ ವೇಗದಿಂದಾಗಲಿ ತೃಪ್ತರಾಗಿರಲಿಲ್ಲ' ಎಂದು ರಾಂಬಾಚ್ ಹೇಳಿದ್ದಾರೆ.

ಆದರೆ ಈಗ, ಗ್ರಾಹಕರೊಬ್ಬರು ಕರೆ ಮಾಡಿದಾಗ, ಎ.ಐ ತಕ್ಷಣವೇ ದಾಖಲೆಗಳನ್ನು ಹುಡುಕಲು ‍ಪ್ರಾರಂಭಿಸುತ್ತದೆ. ಉತ್ತರವನ್ನು ಸಿದ್ಧಪಡಿಸುತ್ತದೆ. ಮತ್ತು ಆ ಮಾಹಿತಿ ಎಲ್ಲಿಂದ ಬಂದಿದೆ ಎಂಬುದನ್ನು ಏಜೆಂಟ್‌ಗೆ ನಿಖರವಾಗಿ ತೋರಿಸುತ್ತದೆ. ಏಜೆಂಟ್ ಅದನ್ನು ಪರಿಶೀಲಿಸುತ್ತಾರೆ. ಅದು ಸರಿಯಾಗಿದ್ದರೆ, ಅವರು ಅದನ್ನು ಬಳಸುತ್ತಾರೆ. ಏನನ್ನಾದರೂ ಸರಿಮಾಡಬೇಕಿದ್ದರೆ, ಅದನ್ನೂ ಎ.ಐ ಸಹಾಯದೊಂದಿಗೆ ಮಾಡುತ್ತಾರೆ. ಇದರಿಂದ ಏಜೆಂಟ್ ಮತ್ತಷ್ಟು ಜವಾಬ್ದಾರರಾಗಿದ್ದಾರೆ. ಅವರು ಹುಡುಕಾಟಕ್ಕೆ ವ್ಯಯಿಸುತ್ತಿದ್ದ ಸಮಯ ಭಾರಿ ಕಡಿಮೆಯಾಗಿದೆ.

2025ರ ಕೊನೆಯ ಮೂರು ತಿಂಗಳಲ್ಲಿ, ಷ್ನೇಡರ್‌ನ ಕಾಲ್ ಸೆಂಟರ್‌ಗಳಿಗೆ 1.5 ಲಕ್ಷ ಕರೆಗಳು ಬಂದಿವೆ. ನಾಲ್ಕರಲ್ಲಿ ಮೂರು ಬಾರಿ, ಸ್ವತಃ ಎ.ಐ ಸರಿಯಾದ ಉತ್ತರವನ್ನು ಕಂಡುಕೊಂಡಿದೆ ಎಂದು ಕಂಪನಿ ಅಂಕಿ ಅಂಶಗಳು ತಿಳಿಸಿವೆ. ಗ್ರಾಹಕರ ಹಲವು ಸಂಕೀರ್ಣ ‍ಪ್ರಶ್ನೆಗಳಿಗೆ ಅದು ಸೂಕ್ತ ಉತ್ತರ ನೀಡಿದೆ. ಇದು ಏಜೆಂಟರ ಮೇಲಿನ ಒತ್ತಡ ಕಡಿಮೆ ಮಾಡಿದೆ. ಉತ್ತರ ನೀಡುವ ಸಮಯವೂ ಕಡಿಮೆಯಾಗಿದೆ.

ಇದರಿಂದ ನೌಕರರ ಕೆಲಸ ಸುಗಮವಾಯಿತು. ಅವರ ಮೇಲಿದ್ದ ಒತ್ತಡವೂ ಕಡಿಮೆಯಾಗಿ ಕಾರ್ಯಕ್ಷಮತೆ ಹೆಚ್ಚಾಯಿತು. ಇದು ಕೇವಲ ಒಂದು ಕಂಪನಿಯ ಅನುಭವವಲ್ಲ. ಬ್ರಿಂಜಾಲ್ಫ್ಸನ್ ಮತ್ತು ಅವರ ಸಹೋದ್ಯೋಗಿಗಳಾದ ಲಿಂಡ್ಸೆ ರೇಮಂಡ್ ಮತ್ತು ಡೇನಿಯಲ್ ಲಿ ಅವರು ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಯೊಂದರಲ್ಲಿ 5,000 ಕ್ಕೂ ಹೆಚ್ಚು ಗ್ರಾಹಕ ಸೇವಾ ಏಜೆಂಟರ ಮೇಲೆ ಔಪಚಾರಿಕ ಅಧ್ಯಯನವನ್ನು ನಡೆಸಿದರು. ಎ.ಐ ಬೆಂಬಲದಿಂದ ಕೆಲಸ ಮಾಡುವ ಕಾರ್ಮಿಕರ ಉತ್ಪಾದಕತೆಯಲ್ಲಿ ಸರಾಸರಿ ಶೇ 14ರಷ್ಟು ಹೆಚ್ಚಳ ಕಂಡುಬಂತು. ಕಡಿಮೆ ಅನುಭವ ಇರುವ ಉದ್ಯೋಗಿಗಳ ಕ್ಷಮತೆಯೂ ಹೆಚ್ಚಾಯಿತು. ಗ್ರಾಹಕರ ತೃಪ್ತಿ ಸುಧಾರಿಸಿತು. ಉದ್ಯೋಗ ಕಡಿತ ಪ್ರಮಾಣವೂ ಕಡಿಮೆಯಾಯಿತು!

ಎಲ್ಲಕ್ಕಿಂತ ಮುಖ್ಯ ವಿಷಯವೇನೆಂದರೆ, ಕರೆ ಮಾಡುವವರು ಸಭ್ಯ ಭಾಷೆ ಬಳಕೆ ಮಾಡಲಾರಂಭಿಸಿದರು, ಮ್ಯಾನೇಜರ್‌ಗೆ ಕರೆ ವರ್ಗಾಯಿಸಿ ಎನ್ನುವ ಕೋರಿಕೆಗಳು ಕಡಿಮೆಯಾದವು!

ಊಹೆ ಮಾಡುವುದನ್ನು ನಿಲ್ಲಿಸಿದ ಕಾರ್ಖಾನೆ

ಪ್ಯಾರಿಸ್‌ನಿಂದ ವಾಯುವ್ಯಕ್ಕೆ ಸುಮಾರು 66 ಮೈಲುಗಳಷ್ಟು ದೂರದ ನಾರ್ಮಂಡಿಯಲ್ಲಿರುವ ಷ್ನೇಡರ್ ಕಾರ್ಖಾನೆಯು ದಶಕಗಳಷ್ಟು ಹಳೆಯದು. ಎ.ಐ ಆಗಮನಕ್ಕೂ ಮೊದಲೇ ರೋಬೋಟ್‌ಗಳು ಮತ್ತು ಡಿಜಿಟಲ್ ವ್ಯವಸ್ಥೆಗಳೊಂದಿಗೆ ಅದು ಆಧುನೀಕಣಗೊಂಡಿದೆ. ಬಿಡಿ ಭಾಗಗಳನ್ನು ಮಹಡಿ ಮೇಲೆ ತಲುಪಿಸಲು ಸ್ವಯಂಚಾಲಿತ ಟ್ರಾಲಿಗಳಿವೆ. ಇಲ್ಲಿ ಎಲ್ಲವೂ ಎ.ಐ ಮೇಲೆ ಅವಲಂಬಿತವಾಗಿಲ್ಲ. 'ಎ.ಐ ನಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ ಎಂದು ತಿಳಿದಾಗ ಮಾತ್ರ ನಾವು ಅದನ್ನು ಬಳಸುತ್ತೇವೆ' ಎಂದು ಸೈಟ್‌ನ ಪ್ರಾಜೆಕ್ಟ್ ಮುಖ್ಯಸ್ಥ ವರ್ಜಿನಿ ರಿಗಾಡೋ ಹೇಳುತ್ತಾರೆ.

ಸಿಲ್ವರ್ ಟಿಪ್ ಉತ್ಪಾದನೆಯಲ್ಲಿ ಎ.ಐ ಬಳಕೆ ಮಾಡಿ ಕಂಪನಿ ಯಶ ಕಂಡಿದೆ. ಈ ಕಾರ್ಖಾನೆಯು ವರ್ಷಕ್ಕೆ 74 ಮಿಲಿಯನ್ ಸಿಲ್ವರ್ ಟಿಪ್‌ಗಳನ್ನು ಉತ್ಪಾದಿಸುತ್ತದೆ. ವಿದ್ಯುತ್ ಇರುವ ‍ಪ್ರತಿಯೊಂದಲ್ಲೂ ಈ ಸಿಲ್ವರ್ ಟಿಪ್‌ಗಳು ಇರುತ್ತವೆ. ಅವುಗಳನ್ನು ತಯಾರಿಸಲು ಸಿಲ್ವರ್ ನೈಟ್ರೇಟ್ ಮತ್ತು ಸೋಡಿಯಂ ಅನ್ನು ಒಟ್ಟಿಗೆ ಬೇಯಿಸಬೇಕು. ಅದರ ಮಿಶ್ರಣವನ್ನು ಸೆಂಟ್ರಿಫ್ಯೂಜ್‌ನಲ್ಲಿ ತಿರುಗಿಸಿ, ಹೆಚ್ಚುವರಿ ಸೋಡಿಯಂ ಅನ್ನು ತೆಗೆದುಹಾಕಲು ಅದರ ಮಿಶ್ರಣವನ್ನು ತೊಳೆಯಬೇಕು.

ಆದರೆ ತೊಳೆಯುವುದನ್ನು ಯಾವಾಗ ನಿಲ್ಲಿಸಬೇಕು ಎಂದು ಯಾರಿಗೂ ನಿಖರವಾಗಿ ಗೊತ್ತಿಲ್ಲ. ಆಪರೇಟರ್‌ಗಳು ತಮ್ಮ ಅನುಭವದ ಆಧಾರದ ಮೇಲೆ ಊಹೆ ಮಾಡಿಕೊಂಡು ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ತುಂಬಾ ಸಮಯ ತೊಳೆಯುತ್ತಿದ್ದರಿಂದ ನೀರು ಮತ್ತು ಶಕ್ತಿ ವ್ಯರ್ಥವಾಗುತ್ತಿತ್ತು. ಕೆಲವೊಮ್ಮೆ ಅವರು ಬೇಗನೆ ನಿಲ್ಲಿಸುತ್ತಿದ್ದರು. ಇದರಿಂದ ಉತ್ಪನ್ನವು ಗುಣಮಟ್ಟದ ತಪಾಸಣೆಯಲ್ಲಿ ವಿಫಲವಾಗುತ್ತಿತ್ತು. ಪ್ರತಿಯೊಂದು ಬ್ಯಾಚ್ ಅನ್ನು ಪರೀಕ್ಷೆಗಾಗಿ ಆಫ್-ಸೈಟ್ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗಿತ್ತು . ಇದು ಕನಿಷ್ಠ 24 ರಿಂದ 48 ಗಂಟೆ ತೆಗೆದುಕೊಳ್ಳುತ್ತಿತ್ತು.

ಆದರೆ ಎ.ಐ ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಎಷ್ಟು ಹೊತ್ತು ತೊಳೆಯಬೇಕು, ಯಾವಾಗ ನಿಲ್ಲಿಸಬೇಕು ಎನ್ನುವುದನ್ನು ಎ.ಐ ಸೂಚಿಸುತ್ತದೆ. ಗುಣಮಟ್ಟದ ಪರಿಶೀಲನೆಯನ್ನೂ ಎ.ಐ ಮಾಡುತ್ತದೆ. ಯಾವಾಗ ಕೆಲಸ ಮುಗಿಯುತ್ತದೆ, ಕೆಲಸ ಹೇಗೆ ನಡೆಯುತ್ತದೆ ಎನ್ನುವುದನ್ನು ನೇರವಾಗಿ ವೀಕ್ಷಿಸುವುದನ್ನೂ ಕೂಡ ಎ.ಐ ಸಾಧ್ಯವಾಗಿಸಿದೆ.

ಇದರಿಂದ ಒಂದು ವರ್ಷದಲ್ಲಿ ತೊಳೆಯುವ ಪ್ರಕ್ರಿಯೆಯಿಂದ ವ್ಯರ್ಥವಾಗುವ ಪ್ರಮಾಣ ಶೇ 73ರಷ್ಟು ಕುಸಿದಿದೆ. ನೀರಿನ ಬಳಕೆ ತೀವ್ರವಾಗಿ ಕಡಿಮೆಯಾಗಿದೆ. ಪ್ರಯೋಗಾಲಯದ ವೆಚ್ಚಗಳು ಸಾವಿರಾರು ಯುರೋಗಳಷ್ಟು ಕಡಿಮೆಯಾಗಿವೆ. ಪ್ರಯೋಗಾಲಯಕ್ಕೆ ಮಾದರಿಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಸಾಗಿಸುತ್ತಿದ್ದ ಟ್ರಕ್‌ಗಳ ಇಂಧನ ಬಳಕೆ ಕೂಡ ಶೇ 22 ಕಡಿಮೆಯಾಗಿದೆ.

ಅದೇ ಕಾರ್ಖಾನೆಯ ಮಹಡಿಯಲ್ಲಿ ಅಳವಡಿಸಲಾದ ಎ.ಐ ಕ್ಯಾಮೆರಾಗಳು ಉತ್ಪನ್ನಗಳ ಗುಣಮಟ್ಟವನ್ನು ಸೆಕೆಂಡುಗಳಲ್ಲಿ ಪರಿಶೀಲಿಸುತ್ತವೆ. ಈ ಕೆಲಸಕ್ಕೆ ಹಿಂದೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ಮಾನವ ದೋಷಗಳಿಗೆ ಒಳಗಾಗುವ ಸಾಧ್ಯತೆಯಿತ್ತು.

ಎ.ಐ ಬಳಸಿ ಸಿದ್ಧಪಡಿಸಿದ ತೀರ್ಪು ಉಲ್ಲೇಖ ಹೆಚ್ಚಳ: ಸುಪ್ರೀಂ ಕೋರ್ಟ್ ಕಳವಳ

ಯುರೋಪ್‌ನಲ್ಲಿ ಇದೇಕೆ ಸಾಧ್ಯವಾಗುತ್ತದೆ?

ಫ್ರೆಂಚ್ ಕಂಪನಿಯೊಂದರಲ್ಲಿ ಎ.ಐ ಅನ್ನು ಇಷ್ಟೊಂದು ರಚನಾತ್ಮಕವಾಗಿ ಬಳಕೆ ಮಾಡಲು ಕಾರಣ ಕೂಡ ಇದೆ. ಫ್ರಾನ್ಸ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ, ಕಾರ್ಮಿಕ ಕಾನೂನು ಬಿಗಿಯಾಗಿದೆ. ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದರೆ, ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಅಲ್ಲಿಯ ಕಾನೂನು ಅದನ್ನು ಕಡ್ಡಾಯಗೊಳಿಸಿದೆ. ಏಕಾಏಕಿ ಉದ್ಯೋಗ ಕಡಿತ ಮಾಡುವ ಸ್ವಾತಂತ್ರ್ಯ ಅಲ್ಲಿ ಇಲ್ಲ. ಹೀಗಾಗಿ ಈಗಿರುವ ಕಾರ್ಮಿಕರಿಂದ ಹೆಚ್ಚಿನ ಉತ್ಪಾದಕತೆ ಬಯಸುತ್ತಿದ್ದಾರೆ. ಹೀಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಿದ್ದಾರೆ.

ಷ್ನೇಡರ್ ಎಲೆಕ್ಟ್ರಿಕ್, ತನ್ನ ಉದ್ಯೋಗಿಗಳಿಗೆ ಸಹಾಯಕವಾಗಲು ಎ.ಐ ಅಳವಡಿಸಿಕೊಂಡಿದೆ. ಇದರಿಂದ ದಕ್ಷತೆ, ತೃಪ್ತಿ ಮತ್ತು ತ್ಯಾಜ್ಯ ಕಡಿತದಲ್ಲಿನ ಫಲಿತಾಂಶಗಳು ನಿಜವಾಗಿವೆ. ತಂತ್ರಜ್ಞಾನವನ್ನು ಹೇಗೆ ಚಿಂತನಶೀಲವಾಗಿ ಬಳಸಬಹುದು ಎಂಬುದಕ್ಕೆ ಕಂಪನಿಯು ಒಂದು ಮಾದರಿಯಾಗಿದೆ.

ಆದರೂ ಪ್ಲಗ್-ಅಂಡ್-ಪ್ಲೇ ಎಲೆಕ್ಟ್ರಿಕಲ್ ಕಾಂಟಾಕ್ಟರ್ ಸ್ಥಾಪಿಸಲು ಇನ್ನು ಮುಂದೆ ಎಲೆಕ್ಟ್ರಿಷಿಯನ್ ಅಗತ್ಯ ಇಲ್ಲ ಎಂದು ಕಾರ್ಖಾನೆಯ ಜನರಲ್ ಮ್ಯಾನೇಜರ್ ಸ್ಯಾಂಡ್ರಾ ಫೆರಾಗುಟಿ ಹೇಳಿದ್ದಾರೆ. ಅಂದರೆ ಒಂದು ಕಾಲದಲ್ಲಿ ತರಬೇತಿ ಪಡೆದ ಮಾನವನ ಅಗತ್ಯವಿದ್ದ ವೈರಿಂಗ್ ಕೆಲಸವನ್ನು ಎ.ಐ ಸ್ವಯಂ ಚಾಲಿತವಾಗಿ ಮಾಡಲಿದೆ.

ಹಾಗಿದ್ದರೆ ಎ.ಐನಿಂದ ಉದ್ಯೋಗ ಕಡಿತ ಮಾಡುವ ಬಗ್ಗೆ ಯೋಚಿಸಬೇಕಾ ಅಥವಾ ಎ.ಐನಿಂದ ಕೆಲಸ ಸುಲಭ ಎಂದು ಪರಿಗಣಿಸಬೇಕಾ? ಬೋರ್ಡ್‌ರೂಮ್‌ನಲ್ಲಿ ಇದು ಸಂಘರ್ಷದ ವಿಷಯವೇ? ಸಂಘರ್ಷವಲ್ಲ ಪ್ರಗತಿಯ ಸಂಕೇತ ಎನ್ನುತ್ತಾರೆ ವಿಶ್ಲೇಷಕರು.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ಆಂಥ್ರೊಪಿಕ್ ಇನ್‌ಸ್ಟಿಟ್ಯೂಟ್, ಯುವಿಎ ಡಾರ್ಡನ್ ಸ್ಕೂಲ್ ಆಫ್ ಬಿಸಿನೆಸ್

'ಎ.ಐ. ಬಂಡವಾಳಶಾಹಿಯ ಸರಕು'
Dailyhunt
Disclaimer: This content has not been generated, created or edited by Dailyhunt. Publisher: Prajavani