Dailyhunt Logo
  • Light mode
    Follow system
    Dark mode
    • Play Story
    • App Story
Editorial |ಎಸ್‌ಐಆರ್‌ ವಿರುದ್ಧ ಬೃಹತ್ ಪ್ರದರ್ಶನ; ಕಳವಳಕ್ಕೆ ಸರ್ಕಾರ ಸ್ಪಂದಿಸಲಿ

Editorial |ಎಸ್‌ಐಆರ್‌ ವಿರುದ್ಧ ಬೃಹತ್ ಪ್ರದರ್ಶನ; ಕಳವಳಕ್ಕೆ ಸರ್ಕಾರ ಸ್ಪಂದಿಸಲಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ನಡೆಸಿದ 'ದಿಲ್ಲಿ ಚಲೋ' ಹೆಸರಿನ ಪ್ರದರ್ಶನ, ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಶಕ್ತಿ ಪ್ರದರ್ಶನವಾಗಿದೆ. ಡಿಎಂಕೆ ಮತ್ತು ಎಎಪಿ ಹೊರತುಪಡಿಸಿ ಇತರ ಎಲ್ಲ ಪ್ರಮುಖ ಪಕ್ಷಗಳು ರ್‍ಯಾಲಿಯಲ್ಲಿ ಭಾಗಿಯಾಗಿದ್ದವು.

ಆದರೆ ಈ ಪಕ್ಷಗಳು ಕೂಡ ಬೇಡಿಕೆಯನ್ನು ಬೆಂಬಲಿಸಿವೆ. ಕಾಂಗ್ರೆಸ್‌ ಪಕ್ಷ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನ ಪ್ರಾದೇಶಿಕ ಪಕ್ಷಗಳು, ಎಡಪಕ್ಷಗಳೊಂದಿಗೆ 'ಇಂಡಿಯಾ' ಮೈತ್ರಿಕೂಟದಲ್ಲಿ ಇಲ್ಲದ ಕೆಲವು ಪಕ್ಷಗಳು ಕೂಡ ಸಕ್ರಿಯವಾಗಿ ಭಾಗವಹಿಸಿದ್ದವು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ (ಎಸ್‌ಐಆರ್‌) ಆಗಿರುವ ಹಾನಿಯು ಗಮನಕ್ಕೆ ಬಂದ ಬಳಿಕ ಮತ್ತು ಕೋಟ್ಯಂತರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟ ಬಳಿಕ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಮತ್ತು ಪ‍್ರತಿಭಟನೆಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ವಿರೋಧ ಪಕ್ಷಗಳು ಹೇಳಿವೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಬಳಿಕ ನಡೆದ ಸಿಖ್‌ ವಿರೋಧಿ ಗಲಭೆಯನ್ನು ಕೇಂದ್ರವಾಗಿ ಇರಿಸಿಕೊಂಡು, ವಿರೋಧ ಪಕ್ಷಗಳ ಪ್ರತಿಭಟನೆಯ ದಿನವೇ ದೆಹಲಿ ಮತ್ತು ಇತರೆಡೆಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. 2002ರ ಗುಜರಾತ್‌ ಗಲಭೆಯ ಕುರಿತು ಬಿಜೆಪಿಯನ್ನು ಪ್ರಶ್ನಿಸಬಹುದಾದ ರೀತಿಯಲ್ಲಿಯೇ ಸಿಖ್‌ ವಿರೋಧಿ ಗಲಭೆಯ ಕುರಿತು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಬಹುದು. ಆದರೆ, ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದಿರುವ ಎಸ್‌ಐಆರ್‌ಗೆ ಪ್ರತಿಸಂಕಥನವಾಗಿ ಈ ಪ್ರತಿಭಟನೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ದೊಡ್ಡ ಸಂಖ್ಯೆಯ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಅಪಾಯ ಒಡ್ಡಿರುವ ಎಸ್‌ಐಆರ್‌ ಈಗ ನಮ್ಮ ಮುಂದೆ ಇರುವ ಜೀವಂತ ವಿಚಾರ; ಇದು ಸಾಂವಿಧಾನಿಕ ಸಂಸ್ಥೆಯೊಂದರ ಕಾರ್ಯನಿರ್ವಹಣೆ ಶೈಲಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಚುನಾವಣಾ ಆಯೋಗ ಮತ್ತು ಜ್ಞಾನೇಶ್‌ ಕುಮಾರ್‌ ಅವರು ಕೈಗೊಂಡ ಕ್ರಮಗಳಿಗೆ ಬಿಜೆಪಿ ಬೆಂಬಲ ನೀಡುತ್ತಿರುವುದು ಕೂಡ ಪ್ರಶ್ನೆಗಳಿಗೆ ಕಾರಣವಾಗಿದೆ. ಬಿಜೆಪಿ ಭಾನುವಾರ ಸಂಘಟಿಸಿದ ಪ್ರತಿಭಟನೆಯಲ್ಲಿ ಅದರ ಮಿತ್ರ ಪಕ್ಷಗಳು ಭಾಗಿಯಾಗಿಲ್ಲ ಎಂಬುದು ಕೂಡ ಗಮನಾರ್ಹವಾಗಿದೆ.

ಪ್ರತಿಭಟನೆಯ ಹಿಂದೆ ವಿದೇಶಿ ಕೈವಾಡ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರತಿಭಟನಕಾರರು ದೇಶದ್ರೋಹಿಗಳು ಮತ್ತು ಅರಾಜಕತಾವಾದಿಗಳು ಎಂದಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಂತರರಾಷ್ಟ್ರೀಯ ಷಡ್ಯಂತ್ರದ ಕುರಿತು ಎಚ್ಚರಿಕೆ ನೀಡಿದ್ದಾರೆ. ದೇಶವನ್ನು ಅಸ್ಥಿರಗೊಳಿಸಲು ವಿದೇಶಿ ಶಕ್ತಿಗಳ ಜೊತೆಗೂಡಿ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಭಿನ್ನಮತೀಯರಿಗೆ ತಿರುಗೇಟು ನೀಡಲು ವಿದೇಶಿ ಕೈವಾಡ ಎಂಬುದು ಅತ್ಯಂತ ಸುಲಭ ಮಾರ್ಗವಾಗಿದೆ. ಆದರೆ, ಇಂತಹ ಗಂಭೀರ ಆರೋಪಗಳನ್ನು ಮಾಡಿದಾಗ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ತುರ್ತು ಪರಿಸ್ಥಿತಿಯ ಮೊದಲು ಮತ್ತು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪ್ರತಿಭಟನೆಗಳು ನಡೆದಾಗ ವಿದೇಶಿ ಕೈವಾಡ ಇದೆ ಎಂದು ಇಂದಿರಾ ಗಾಂಧಿ ಅವರು ಆರೋಪಿಸಿದ್ದರು. ವಿರೋಧ ಪಕ್ಷಗಳು ಎತ್ತಿದ ವಿಚಾರಗಳನ್ನು ಎದುರಿಸುವುದು ಅಸಾಧ್ಯವಾದಾಗ ಮತ್ತು ಪರಿಸ್ಥಿತಿ ಕಷ್ಟಕರವಾಗಿ ಪರಿಣಮಿಸಿದಾಗ ವಿದೇಶಿ ಕೈವಾಡದ ಆರೋಪಗಳನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. ಪ್ರತಿರೋಧ ಮತ್ತು ಪ್ರತಿಭಟನೆ ಯಾವುದೇ ಪ್ರಜಾಪ್ರಭುತ್ವದ ಜೀವಾಳ. ಆದರೆ, ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷ ಮತ್ತು ಅದರ ನಾಯಕರಿಗೆ ಭಿನ್ನಮತವೆಂದರೆ ಅಪಥ್ಯ. ಹಾಗಾಗಿಯೇ ಪ್ರತಿಸ್ಪರ್ಧಿ ಪಕ್ಷಗಳ ನಾಯಕರು, ಟೀಕಾಕಾರರು ಮತ್ತು ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹಿಗಳು, ನಗರ ನಕ್ಸಲರು ಮತ್ತು ಧಿಮಾಗಿ ನಕ್ಸಲರು ಎಂದು ಪ್ರಧಾನಿಯವರು ಹತ್ತಾರು ಬಾರಿ ಕರೆದಿದ್ದಾರೆ. ಈಗ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು, ಪತ್ರಕರ್ತರು ಮುಂತಾದವರು ಭಾಗವಹಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರ ಸ್ವಯಂಪ್ರೇರಿತ ಭಾಗವಹಿಸುವಿಕೆಯು ಭಾರತದ ಚುನಾವಣಾ ವ್ಯವಸ್ಥೆಗೆ ಎಸ್‌ಐಆರ್‌ ಮಾಡಿರುವ ಹಾನಿ ಯಾವ ಪ್ರಮಾಣದ್ದು ಎಂಬುದನ್ನು ಸೂಚಿಸುತ್ತದೆ. ಸರ್ಕಾರವು ತನ್ನ ಸರ್ವಾಧಿಕಾರಿ ಧೋರಣೆಯನ್ನು ಬದಿಗಿಟ್ಟು ದಿನದಿಂದ ದಿನಕ್ಕೆ ಬಲ ಪಡೆದುಕೊಳ್ಳುತ್ತಿರುವ ಪ್ರತಿಭಟನೆಯ ಹಿಂದಿನ ಕಳವಳವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಗೆ ಆಗಿರುವ ಹಾನಿಯನ್ನು ಸರಿಪಡಿಸುವ ದಿಸೆಯಲ್ಲಿ ಕೆಲಸ ಮಾಡಬೇಕು. ಹಾನಿಗೆ ಕಾರಣರಾದ ಜ್ಞಾನೇಶ್‌ ಕುಮಾರ್‌ ಅವರನ್ನು ವಜಾಗೊಳಿಸುವುದಷ್ಟೇ ಅಲ್ಲದೆ, ಅವರು ಎಸಗಿರುವ ಅಪರಾಧಕ್ಕೆ ತಕ್ಕ ಶಿಕ್ಷೆ ಆಗುವಂತೆಯೂ ನೋಡಿಕೊಳ್ಳಬೇಕು.

Dailyhunt
Disclaimer: This content has not been generated, created or edited by Dailyhunt. Publisher: Prajavani