ಮಡಿಕೇರಿ: ತಾಲ್ಲೂಕಿನ ಭಾಗಮಂಡಲಕ್ಕೆ ಭಾನುವಾರ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸುದ್ದಿಗಾರರು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಡುತ್ತೀರಾ ಎಂದು ಕೇಳಿದಾಗ ಅವರು ಮುಖ್ಯಮಂತ್ರಿಯಾಗಿ ಕಣ್ಣು ಬಿಡುತ್ತಿರುವೆ. ಮುಂದಿನ ದಿನಗಳಲ್ಲಿ ಈ ಕುರಿತು ಗಮನ ಹರಿಸಲಾಗುವುದು ಎಂದರು.
ಕೊಡಗಿಗೆ ಸಿಎಂ ಆದ ಬಳಿಕ ಮೊದಲ ಬಾರಿಗೆ ಬಂದಿದ್ದೇನೆ. ರಾಜ್ಯದ ಜಲಾಶಯಗಳು ಭರ್ತಿಯಾಗಲಿ ಎಂದು ಕೊಡಗಿನ ದೈವ ಭಗಂಡೇಶ್ವರನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಕೊಡಗಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವರದಿ ಸಂಗ್ರಹಿಸಿ ಪರಿಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಮೃತಪಟ್ಟ ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇನೆ. ಮೃತಪಟ್ಟವರ ಬಳಿ ಎರಡು ಚೀಲ ಕಾಡುಪ್ರಾಣಿಗಳ ಮಾಂಸ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ವರದಿ ಬಂದ ಬಳಿಕ ನಿಜಾಂಶ ತಿಳಿಯಲಿದೆ ಎಂದರು.

