'ಕಬ್ಬಿಣವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ, ಆದರೆ ಅದರದ್ದೇ ತುಕ್ಕು ಅದನ್ನು ನಾಶಪಡಿಸಬಹುದು. ಅದೇ ರೀತಿ, ಒಬ್ಬ ಮನುಷ್ಯನನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ, ಆದರೆ ಆತನ ಸ್ವಂತ ಮನಸ್ಥಿತಿಯೇ ಅವನ ಅವನತಿಗೆ ಕಾರಣವಾಗಬಹುದು.'
ಟಾಟಾ ಸಮೂಹವನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿಬೆಳೆಸಿದ ದಿವಂಗತ ರತನ್ ಟಾಟಾ ಅವರ ಅತ್ಯಂತ ಜನಪ್ರಿಯ ಮಾತುಗಳಿವು.
ಆದರೆ ವಿಪರ್ಯಾಸವೆಂದರೆ, ರತನ್ ಟಾಟಾ ವಿಧಿವಶರಾಗಿ ಎರಡು ವರ್ಷಗಳಾಗುವ ಹೊತ್ತಿಗೆ ಅವರ ಈ ಎಚ್ಚರಿಕೆಯ ನುಡಿಗಳು 'ಬಾಂಬೆ ಹೌಸ್'ನ (ಟಾಟಾ ಮುಖ್ಯ ಕಚೇರಿ) ಅಂಗಳದಲ್ಲೇ ಪ್ರತಿಧ್ವನಿಸುತ್ತಿವೆ.
ಭಾರತದ ಕಾರ್ಪೊರೇಟ್ ಜಗತ್ತಿನ ಧರ್ಮದರ್ಶಿ, ನೈತಿಕತೆಯ ಪ್ರತೀಕ ಎಂದೇ ನಂಬಲಾಗಿರುವ ಟಾಟಾ ಸಮೂಹದ ಮಾತೃಸಂಸ್ಥೆ 'ಟಾಟಾ ಸನ್ಸ್'ನಲ್ಲಿ ಆಂತರಿಕ ಬಿಕ್ಕಟ್ಟು ಭುಗಿಲೆದ್ದಿದ್ದು, ಆ ವಿಶ್ವಾಸದ ಕೋಟೆಗೆ ಒಳಗಿನಿಂದಲೇ ತುಕ್ಕು ಹಿಡಿಯುವ ಆತಂಕ ಎದುರಾಗಿದೆ.
ರತನ್ ಟಾಟಾ ನಿಧನದ ಬಳಿಕ ಸಂಸ್ಥೆಯ ನಿಯಂತ್ರಣ ಹೊಂದಿರುವ 'ಟಾಟಾ ಟ್ರಸ್ಟ್'ಗಳ ಮುಖ್ಯಸ್ಥರಾಗಿ ಅವರ ಮಲಸಹೋದರ ನೊಯೆಲ್ ಟಾಟಾ ಅಧಿಕಾರ ವಹಿಸಿಕೊಂಡಿದ್ದರು. ಅವರ ನೇಮಕದ ಬೆನ್ನಲ್ಲೇ ಟ್ರಸ್ಟಿಗಳ ನೇಮಕಾತಿ ಮತ್ತು ಮರುನೇಮಕದ ವಿಚಾರದಲ್ಲಿ ಅಸಮಾಧಾನ ಹೊಗೆಯಾಡಲಾರಂಭಿಸಿತು. ಈಗ ಇದು ಬಹಿರಂಗ ಸಂಘರ್ಷದ ರೂಪ ಪಡೆದುಕೊಂಡಿದೆ.
ಸೆಪ್ಟೆಂಬರ್ 17ರಂದು ನಡೆದ ಟಾಟಾ ಸನ್ಸ್ ಮಂಡಳಿ ಸಭೆಯಲ್ಲಿ 2017ರಿಂದ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಕಾರ್ಯನಿರ್ವಾಹಕ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರಿಗೆ ಮತ್ತೆ ಐದು ವರ್ಷಗಳ ಅವಧಿಗೆ (2027ರಿಂದ 2032ರವರೆಗೆ) ಅಧಿಕಾರ ವಿಸ್ತರಣೆ ನೀಡುವ ನಿರ್ಣಯವನ್ನು ಮಂಡಳಿಯ ಬಹುಪಾಲು ನಿರ್ದೇಶಕರು ಅನುಮೋದಿಸಿದರು. ಆದರೆ, ಟಾಟಾ ಟ್ರಸ್ಟ್ನ ಅಧ್ಯಕ್ಷ ನೊಯೆಲ್ ಟಾಟಾ ಇದನ್ನು ಕಟುವಾಗಿ ವಿರೋಧಿಸಿದರು.
ಆಗಸ್ಟ್ನಲ್ಲೇ, ʼಮುಂದಿನ ಅವಧಿಗೆ ಮುಂದುವರಿಯುವುದಿಲ್ಲʼ ಎಂದಿದ್ದ ಚಂದ್ರಶೇಖರನ್, ಮಂಡಳಿಯ ಒತ್ತಾಸೆಯ ಮೇರೆಗೆ ನಿರ್ಧಾರ ಬದಲಿಸಿದ್ದರು. ಮಂಡಳಿ ಸಭೆಯಲ್ಲಿ ನೊಯೆಲ್ ಟಾಟಾ ಅವರ ವಿರೋಧದ ನಡುವೆಯೂ, ನಾಲ್ವರು ನಿರ್ದೇಶಕರು ಚಂದ್ರಶೇಖರನ್ ಅವರ ಮರುನೇಮಕದ ಪರ ಮತ ಚಲಾಯಿಸಿದರು. ಟ್ರಸ್ಟ್ಗಳ ಇಬ್ಬರು ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಅಧ್ಯಕ್ಷರ 'ನಿರ್ಣಾಯಕ ಮತ'ವನ್ನೂ ಬಳಸಲಾಯಿತು. ಇದು ನೊಯೆಲ್ ಟಾಟಾ ನೇತೃತ್ವದ ಟ್ರಸ್ಟ್ಗಳನ್ನು ಕೆರಳಿಸಿದ್ದು, ಈ ನಿರ್ಣಯ 'ಕಾನೂನುಬಾಹಿರ' ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಬಿಕ್ಕಟ್ಟು ಈಗ ಕಂಪನಿಯ ಆಡಳಿತ ನಿಯಮಗಳು, ಮಾಲೀಕತ್ವದ ಹಕ್ಕುಗಳು ಮತ್ತು ನಿರ್ದೇಶಕ ಮಂಡಳಿಯ ಅಧಿಕಾರದ ನಡುವಿನ ಕಾನೂನು ಸಮರವಾಗಿ ಮಾರ್ಪಟ್ಟಿದೆ.
ʼಟಾಟಾ ಸನ್ಸ್ನಲ್ಲಿ ಟಾಟಾ ಟ್ರಸ್ಟ್ಗಳು ಶೇ. 66ರಷ್ಟು ಷೇರು ಬಲ ಹೊಂದಿವೆ. ನಿಯಮಾವಳಿಯ ಆರ್ಟಿಕಲ್ 121ರ ಪ್ರಕಾರ, ಟ್ರಸ್ಟ್ ನೇಮಿಸಿದ ನಿರ್ದೇಶಕರ ಬಹುಮತದ ಒಪ್ಪಿಗೆಯಿಲ್ಲದೆ ಯಾವುದೇ ನಿರ್ಣಯ ಅಂಗೀಕಾರವಾಗಲು ಸಾಧ್ಯವಿಲ್ಲ. ನೊಯೆಲ್ ಟಾಟಾ ವಿರೋಧ ವ್ಯಕ್ತಪಡಿಸಿರುವುದರಿಂದ ಅಗತ್ಯ ಬಹುಮತ ದೊರೆತಿಲ್ಲ; ಅಧ್ಯಕ್ಷರ ನಿರ್ಣಾಯಕ ಮತದ ಮೂಲಕ ಈ ಷರತ್ತನ್ನು ಮೀರುವಂತಿಲ್ಲʼ ಎಂಬುದು ಟ್ರಸ್ಟ್ಗಳ ವಾದ. ಇದೇ ವೇಳೆ, ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಕಾನೂನು ಸಲಹೆಯನ್ನು ಮುಂದಿಟ್ಟಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, "66% ಮಾಲೀಕತ್ವ ಹೊಂದಿರುವ ಮೂಲ ಷೇರುದಾರರ ಹಕ್ಕನ್ನು ಹತ್ತಿಕ್ಕಿ ಮಂಡಳಿ ದಂಗೆ ಎದ್ದಿದೆ" ಎಂದು ವಾದಿಸುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ಚಂದ್ರಶೇಖರನ್ ಮತ್ತು ಟಾಟಾ ಸನ್ಸ್ ಪರ ಕಣಕ್ಕಿಳಿದಿರುವ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ, ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾ. ಬಿ.ಎನ್. ಶ್ರೀಕೃಷ್ಣ ಅವರ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. "ಅಧ್ಯಕ್ಷರ ನಿರ್ಣಾಯಕ ಮತದ ಬಳಕೆ ನಿಯಮಬದ್ಧವಾಗಿದ್ದು, ಹೊಸ ಅಧ್ಯಕ್ಷರ ನೇಮಕಕ್ಕೆ ಅನ್ವಯಿಸುವ ವಿಶೇಷ ಪ್ರಕ್ರಿಯೆ ಹಾಲಿ ಅಧ್ಯಕ್ಷರ ಮರುನೇಮಕಕ್ಕೆ ಅನ್ವಯಿಸುವುದಿಲ್ಲ," ಎಂಬುದು ಇವರ ವಾದ.
ಹೀಗಾಗಿ, ಇಲ್ಲಿ ಚಂದ್ರಶೇಖರನ್ ಅಧ್ಯಕ್ಷಗಿರಿಯ ಪ್ರಶ್ನೆ ಮಾತ್ರವಲ್ಲ. ಶೇ. 66ರಷ್ಟು ಮಾಲೀಕತ್ವ ಹೊಂದಿರುವ ಟ್ರಸ್ಟ್ಗಳ ಹಕ್ಕು ಮತ್ತು ಕಂಪನಿಯ ಆಡಳಿತ ನಡೆಸುವ ನಿರ್ದೇಶಕ ಮಂಡಳಿಯ ಅಧಿಕಾರದ ನಡುವಿನ ಗಡಿ ಎಲ್ಲಿದೆ ಎಂಬ ಮೂಲಭೂತ ಪ್ರಶ್ನೆಯೂ ಎದುರಾಗಿದೆ.
ಇದೆಲ್ಲದರ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಕಟ್ಟುನಿಟ್ಟಿನ ನಿಯಮವೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟಾಟಾ ಸನ್ಸ್ ಅನ್ನು 'ಅಪ್ಪರ್ ಲೇಯರ್' ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ) ಎಂದು ವರ್ಗೀಕರಿಸಿರುವ ಆರ್ಬಿಐ, ಷೇರುಪೇಟೆ ಪ್ರವೇಶಕ್ಕೆ ಪಟ್ಟು ಹಿಡಿದು ಕೂತಿದೆ. ಈ ವಿಚಾರದಲ್ಲಿಯೂ ಮಂಡಳಿ ಮತ್ತು ನೊಯೆಲ್ ಟಾಟಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಒಟ್ಟಿನಲ್ಲಿ, ಒಂದೆಡೆ ಕಂಪನಿಯ ಮೇಲಿನ ನಿಯಂತ್ರಣ ಉಳಿಸಿಕೊಳ್ಳುವ ಹೋರಾಟ; ಇನ್ನೊಂದೆಡೆ ನಿಯಂತ್ರಕ ಸಂಸ್ಥೆಯ ನಿಯಮಗಳನ್ನು ಪಾಲಿಸಬೇಕಾದ ಒತ್ತಡ. ಮತ್ತೊಂದೆಡೆ ಚಂದ್ರಶೇಖರನ್ ಹಾಗೂ ನೊಯೆಲ್ ಟಾಟಾ ನಡುವಿನ ತಿಕ್ಕಾಟ. ಇವೆಲ್ಲದರ ನಡುವೆ ಭಾರತದ ಅತಿದೊಡ್ಡ ಉದ್ಯಮ ಸಮೂಹವೊಂದರ ಭವಿಷ್ಯದ ನಾಯಕತ್ವವೇ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ.
ಟಾಟಾದ ತಲ್ಲಣ, ಆರ್ಥಿಕತೆಗೆ ಆತಂಕ
ಕಾರ್ಪೊರೇಟ್ ಜಗತ್ತಿನ ಈ ವಿವಾದಗಳು ಏನೇ ಇರಲಿ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ, ಉಪ್ಪಿನಿಂದ ಹಿಡಿದು ಸಾಫ್ಟ್ವೇರ್ವರೆಗೆ ಹೆಜ್ಜೆಗುರುತು ಹೊಂದಿರುವ ಟಾಟಾ ಸಮೂಹ ಕೇವಲ ಒಂದು ಖಾಸಗಿ ಕಂಪನಿಯಲ್ಲ; ಭಾರತದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದು. ಇಂತಹ ಸಂಸ್ಥೆಯ ನಾಯಕತ್ವದಲ್ಲಿ ಅನಿಶ್ಚಿತತೆ ಮೂಡಿದರೆ ಅದರ ಪರಿಣಾಮ ಕಂಪನಿಯ ಷೇರುದಾರರಿಗಷ್ಟೇ ಸೀಮಿತವಾಗುವುದಿಲ್ಲ. ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಹೂಡಿಕೆದಾರರ ವಿಶ್ವಾಸದ ಮೇಲೂ ಅದರ ನೆರಳು ಬೀಳಬಹುದು.
ಮೊದಲನೆಯದಾಗಿ, ಬೃಹತ್ ಹೂಡಿಕೆಗಳ ಭವಿಷ್ಯ. ಟಾಟಾ ಸಮೂಹವು ಗುಜರಾತ್ನ ಧೋಲೇರಾ (91,000 ಕೋಟಿ ರೂ.) ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕಗಳು, 'ಅಗ್ರತಾಸ್' ಬ್ಯಾಟರಿ ಗಿಗಾಫ್ಯಾಕ್ಟರಿಗಳು, ಎಐ ಡೇಟಾ ಸೆಂಟರ್ಗಳು ಮತ್ತು ಏರ್ ಇಂಡಿಯಾದ ಪುನಶ್ಚೇತನಕ್ಕಾಗಿ ಒಟ್ಟಾರೆ ಲಕ್ಷಾಂತರ ಕೋಟಿ ರೂಪಾಯಿಗಳ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ. ವಿವಿಧ ಹಂತಗಳಲ್ಲಿ ಇವು ಜಾರಿಯಲ್ಲಿವೆ. ಈ ಯೋಜನೆಗಳು ಕೇವಲ ಟಾಟಾದ ಲಾಭಕ್ಕಾಗಿ ರೂಪುಗೊಂಡಿಲ್ಲ; ಭಾರತದ ಭವಿಷ್ಯದ ಕೈಗಾರಿಕಾ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶಗಳೂ ಇವುಗಳಲ್ಲಿವೆ. ಈ ಯೋಜನೆಗಳೇ ವಿಳಂಬವಾದರೆ ಅದರ ಪರಿಣಾಮ ಪೂರೈಕೆದಾರರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಉದ್ಯೋಗಾವಕಾಶಗಳ ಮೇಲೂ ಆಗಬಹುದು.
ಎರಡನೆಯದಾಗಿ, ಸಮೂಹದ ಆರ್ಥಿಕ ಸಾಮರ್ಥ್ಯ. ಸಮೂಹದ ಪಾಲಿಗೆ ಕಾಮಧೇನುವಾಗಿರುವ ಟಿಸಿಎಸ್ ಪ್ರಸ್ತುತ ಕೃತಕ ಬುದ್ಧಿಮತ್ತೆಯ (ಎಐ) ಸವಾಲುಗಳನ್ನು ಎದುರಿಸುತ್ತಿದೆ. ಟಾಟಾ ಸನ್ಸ್ಗೆ ಹರಿದುಬರುವ ಡಿವಿಡೆಂಡ್ ಮೊತ್ತದಲ್ಲಿ ಇಳಿಕೆಯಾಗುತ್ತಿರುವ ಈ ಸಂದರ್ಭದಲ್ಲೇ, ಹೊಸ ಉದ್ಯಮಗಳಿಗೆ ಹಣ ಒದಗಿಸುವ ಸವಾಲು ಎದುರಾಗಿದೆ. ಇಂತಹ ಹೊತ್ತಿನಲ್ಲಿ ನಾಯಕತ್ವದ ಅನಿಶ್ಚಿತತೆ ಬಂಡವಾಳ ಹಂಚಿಕೆ ಮತ್ತು ಹಣಕಾಸು ನಿರ್ವಹಣೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು.
ಮೂರನೆಯದಾಗಿ, ಜಾಗತಿಕ ಹೂಡಿಕೆದಾರರ ವಿಶ್ವಾಸ. ಹೂಡಿಕೆದಾರರು ಕಂಪನಿಯ ಲಾಭ-ನಷ್ಟಗಳನ್ನಷ್ಟೇ ನೋಡುವುದಿಲ್ಲ; ನಾಯಕತ್ವದ ಸ್ಥಿರತೆ, ಆಡಳಿತದ ಪಾರದರ್ಶಕತೆಯನ್ನೂ ಗಮನಿಸುತ್ತಾರೆ. ಟಾಟಾದಲ್ಲಿ ಇವುಗಳ ಬಗ್ಗೆಯೇ ಪ್ರಶ್ನೆಗಳು ಉದ್ಭವಿಸಿರುವುದು ಭಾರತದ ಕಾರ್ಪೊರೇಟ್ ಆಡಳಿತದ ಬಗೆಗೂ ಅನುಮಾನ ಮೂಡಿಸಬಹುದು.
ವಾಲ್ ಸ್ಟ್ರೀಟ್ನ ದಿಗ್ಗಜ ಜೆಪಿ ಮೋರ್ಗನ್ ಚೇಸ್ನ ಮುಖ್ಯಸ್ಥ ಜೇಮಿ ಡೈಮನ್ ಅವರ ಎಚ್ಚರಿಕೆ ಈ ಆತಂಕಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಚಂದ್ರಶೇಖರನ್ ಅವರ ನಾಯಕತ್ವವನ್ನು ಶ್ಲಾಘಿಸಿರುವ ಡೈಮನ್, 'ಒಂದು ವೇಳೆ ನಾನು ಸರ್ಕಾರದ ಸ್ಥಾನದಲ್ಲಿದ್ದರೆ, ಇಂತಹ ಸಂಘರ್ಷದಿಂದ ವಿದೇಶಿ ಹೂಡಿಕೆಗೆ ಹಿನ್ನಡೆಯಾಗಬಹುದೆಂಬ ಆತಂಕ ನನಗಿರುತ್ತಿತ್ತು' ಎಂದಿದ್ದಾರೆ. ಕಂಪನಿಯ ಆಡಳಿತದಲ್ಲಿನ ಲೋಪಗಳು ಉದ್ಯೋಗ ಸೃಷ್ಟಿ, ಬಂಡವಾಳ ಕ್ರೋಡೀಕರಣ ಮತ್ತು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ ಎಂಬುದನ್ನು ಅವರು ಸೂಚ್ಯವಾಗಿ ಹೇಳಿದ್ದಾರೆ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಮಂದಗತಿಯ ಆರ್ಥಿಕತೆ, ಮಧ್ಯಪ್ರಾಚ್ಯದ ಯುದ್ಧದ ಕಾರ್ಮೋಡ, ಟ್ರಂಪ್ ಸುಂಕದ ಬೆದರಿಕೆಗಳು ಮತ್ತು ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಖಾಸಗಿ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯಾಗದ ಸೂಕ್ಷ್ಮ ಸಂಕ್ರಮಣ ಕಾಲವಿದು. ಇಂತಹ ಹೊತ್ತಿನಲ್ಲಿ ಭಾರತೀಯ ಉದ್ಯಮ ಜಗತ್ತಿನ ಕಿರೀಟಪ್ರಾಯವಾದ ಟಾಟಾದಲ್ಲೇ ಬಿಕ್ಕಟ್ಟು ಭುಗಿಲೆದ್ದಿರುವುದು ಭಾರತದ ಹೂಡಿಕೆ ವಾತಾವರಣದ ಬಗ್ಗೆ ಅನಗತ್ಯ ಅನುಮಾನಗಳಿಗೆ ಎಡೆಮಾಡಿಕೊಡಬಹುದು.
ವಿಶ್ವಾಸಕ್ಕೆ ತಗುಲದಿರಲಿ ತುಕ್ಕು
ಒಂದೇ ಕಾರಿನ ಸ್ಟೇರಿಂಗ್ ವೀಲ್ ಅನ್ನು ಇಬ್ಬರು ಚಾಲಕರು ವಿರುದ್ಧ ದಿಕ್ಕಿಗೆ ಎಳೆದರೆ ಕಾರು ದಿಕ್ಕು ತಪ್ಪುತ್ತದೆ. ಟಾಟಾ ಸನ್ಸ್ನಲ್ಲಿಯೂ ಈಗ ಎದುರಾಗಿರುವುದು ಇಂತಹದ್ದೇ ಆಡಳಿತಾತ್ಮಕ ತಿಕ್ಕಾಟ. ಮಾಲೀಕತ್ವದ ಹಕ್ಕು ಮತ್ತು ನಿರ್ದೇಶಕ ಮಂಡಳಿಯ ಅಧಿಕಾರದ ನಡುವಿನ ಈ ಸಂಘರ್ಷಕ್ಕೆ ಕಾನೂನಿನ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ, ಈ ಹೋರಾಟದಲ್ಲಿ ಸಂಸ್ಥೆಯ ದೀರ್ಘಕಾಲೀನ ಹಿತಾಸಕ್ತಿ ಮತ್ತು ಅದರ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಜನರ ಭವಿಷ್ಯ ಮರೆಯಾಗಬಾರದು.
ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿದರೂ, ಅದರಾಚೆಗೆ ಎರಡೂ ಬಣಗಳ ನಡುವೆ ವಿಶ್ವಾಸ ಮರುಸ್ಥಾಪನೆಯಾಗುವುದು ಅತ್ಯಗತ್ಯ. ಏಕೆಂದರೆ, ಟಾಟಾ ಎಂಬುದು ಕೇವಲ ಒಂದು ಕಂಪನಿಯಲ್ಲ; ನೂರೈವತ್ತು ವರ್ಷಗಳಿಂದ ಕೋಟ್ಯಂತರ ಭಾರತೀಯರು ಇಟ್ಟಿರುವ 'ವಿಶ್ವಾಸ'ದ ಹೆಸರು. ರತನ್ ಟಾಟಾ ಎಚ್ಚರಿಸಿದ್ದಂತೆ, ಹೊರಗಿನ ಸ್ಪರ್ಧೆಗಿಂತ ಒಳಗಿನ ತುಕ್ಕೇ ಸಂಸ್ಥೆಗೆ ದೊಡ್ಡ ಅಪಾಯವಾಗದಿರಲಿ.

