ಇದು ಕೆಲವೇ ವರ್ಷಗಳ ಹಿಂದಿನ ಮಾತು. ಯಾರಿಗಾದರೂ ನಾವು ಹಣ ಕೊಡಬೇಕಿದ್ದರೆ, ಅಂಗಡಿಗಳಲ್ಲಿ ಹಣ ಪಾವತಿಸಬೇಕಿದ್ದರೆ ನಗದು ರೂಪದಲ್ಲೇ ಕೊಡಬೇಕಿತ್ತು. ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಕೆಗಳೆಲ್ಲ ಒಂದಿಷ್ಟು ಉಳ್ಳವರ, ಸುಶಿಕ್ಷಿತರ ಸೊತ್ತಾಗಿತ್ತು. ದೂರದಲ್ಲಿರುವವರಿಗೆ ಹಣ ಕಳುಹಿಸಬೇಕಿದ್ದರೆ ಬ್ಯಾಂಕ್‌ಗೆ ಹೋಗಿ ಸರದಿಯಲ್ಲಿ ನಿಲ್ಲಬೇಕಿತ್ತು ಅಥವಾ ನೆಟ್ ಬ್ಯಾಂಕಿಂಗ್ ಮೊರೆ ಹೋಗಬೇಕಿತ್ತು.
ಆದರೆ ಈಗ ಕಾಲ ಬದಲಾಗಿದೆ. ಟೀ ಕುಡಿದರೂ ಯುಪಿಐ, ತರಕಾರಿ ಕೊಂಡರೂ ಯುಪಿಐ! ಇಡೀ ವಿಶ್ವದಲ್ಲೇ ಇಷ್ಟು ದೊಡ್ಡ ಮಟ್ಟದ ಹಾಗೂ ಸುಲಭವಾದ ಡಿಜಿಟಲ್ ಹಣಕಾಸು ವ್ಯವಸ್ಥೆ ಬೇರೆಲ್ಲೂ ಇಲ್ಲ. ಇದರ ಪರಿಣಾಮ ನಗದು ವ್ಯವಹಾರದ ಪ್ರಮಾಣ ಗಣನೀಯವಾಗಿ ತಗ್ಗಿದೆ.
ಈ ನಗದು ರಹಿತ ವ್ಯವಹಾರದಿಂದ ನಿಸ್ಸಂಶಯವಾಗಿ ಅತಿ ಹೆಚ್ಚು ಲಾಭವಾಗಿರುವುದು ಕೇಂದ್ರ ಸರ್ಕಾರಕ್ಕೆ. 140 ಕೋಟಿಗೂ ಅಧಿಕ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಭೌತಿಕ ನೋಟುಗಳ ಮುದ್ರಣ, ಸಾಗಾಟ ಮತ್ತು ನಿರ್ವಹಣೆಗಾಗಿ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಒಂದೊಮ್ಮೆ ಯುಪಿಐ ಇಲ್ಲದಿದ್ದರೆ ನೋಟು ಮುದ್ರಣ ಮತ್ತು ನಗದು ನಿರ್ವಹಣೆಯ ಮೇಲಿನ ಸರ್ಕಾರದ ಹೊರೆ ಇನ್ನಷ್ಟು ಹೆಚ್ಚಾಗುತ್ತಿತ್ತು.
ಇದಲ್ಲದೆ, ಯುಪಿಐನಿಂದಾಗಿ ಕಾಳಧನಿಕರ ಅಡ್ಡಕಸುಬುಗಳಿಗೂ ವಿರಾಮ ಬಿದ್ದಿದೆ. ಸರ್ಕಾರಕ್ಕೆ ಪ್ರತಿಯೊಬ್ಬರ ಆರ್ಥಿಕ ವಹಿವಾಟಿನ ಮೇಲೂ ಕಣ್ಣಿಡಲು ಸಾಧ್ಯವಾಗಿದ್ದು, ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿ ತೆರಿಗೆ ಸಂಗ್ರಹ ಸುಧಾರಿಸಿದೆ. ಇತ್ತ, ಡಿಜಿಟಲ್ ಪಾವತಿಗಳ ವಿಸ್ತರಣೆಯಿಂದ ನಗದು ನಿರ್ವಹಣೆಯ ಒತ್ತಡ ಮತ್ತು ವೆಚ್ಚಗಳನ್ನು ತಗ್ಗಿಸುವ ಅವಕಾಶ ಬ್ಯಾಂಕುಗಳಿಗೂ ಸೃಷ್ಟಿಯಾಗಿದೆ.
ಇಷ್ಟೆಲ್ಲಾ ಬದಲಾವಣೆಗಳಿಗೆ ಕಾರಣವಾಗಿರುವ, ತಾನೇ ಪ್ರಾಯೋಜಿಸಿದ ಯುಪಿಐ ವ್ಯವಸ್ಥೆ ಈಗ ಸರ್ಕಾರಕ್ಕೆ ಹೊರೆಯಾಗಿ ಕಾಣುತ್ತಿದೆ. ಹಾಗಾಗಿ ಇದರಲ್ಲೂ ಆದಾಯದ ದಾರಿ ಹುಡುಕಲು ಹೊರಟಿದೆ. ಎಂಡಿಆರ್ ಹೆಸರಿನಲ್ಲಿ 2,000 ರೂ. ಮೇಲಿನ ವ್ಯಾಪಾರಿ ವಹಿವಾಟುಗಳಿಗೆ ಶೇ. 0.4ರಷ್ಟು ಶುಲ್ಕ ವಿಧಿಸಲು ತೀರ್ಮಾನಿಸಿದೆ.
ಈ ಸಂದರ್ಭದಲ್ಲಿ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು 2017ರಲ್ಲಿ ಹೈದರಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದ '100 ರೂಪಾಯಿ ನೋಟಿನ' ಉದಾಹರಣೆ ನೆನಪಾಗುತ್ತದೆ. ನೋಟು ಅಮಾನ್ಯೀಕರಣದ ನಂತರ ಸರ್ಕಾರ ನಗದು ರಹಿತ ಆರ್ಥಿಕತೆಯತ್ತ ಆತುರದಿಂದ ಹೆಜ್ಜೆ ಹಾಕುತ್ತಿದ್ದಾಗ, ಸಂಪೂರ್ಣ ಡಿಜಿಟಲ್ ಪಾವತಿಯನ್ನು ಅವರು ಕಟುವಾಗಿ ವಿರೋಧಿಸಿದ್ದರು.
ಅವರ ವಾದ ಸರಳ ಮತ್ತು ತಾರ್ಕಿಕವಾಗಿತ್ತು: "100 ರೂಪಾಯಿಯ ಭೌತಿಕ ನೋಟೊಂದು ದಿನದಲ್ಲಿ 10 ಜನರ ಕೈ ಬದಲಾದರೂ, ದಿನದಂತ್ಯಕ್ಕೆ ಆ ನೋಟಿನ ಮೌಲ್ಯ 100 ರೂ. ಆಗಿಯೇ ಉಳಿಯುತ್ತದೆ. ಆ ವಹಿವಾಟುಗಳಲ್ಲಿ ಯಾವುದೇ ಮಧ್ಯವರ್ತಿ ಲಾಭ ಪಡೆಯುವುದಿಲ್ಲ. ಆದರೆ, ಅದೇ 100 ರೂ. 10 ಬಾರಿ ಡಿಜಿಟಲ್ ರೂಪದಲ್ಲಿ ವರ್ಗಾವಣೆಯಾಗಿ, ಪ್ರತಿ ವಹಿವಾಟಿಗೆ ಶೇ. 1.5ರಷ್ಟು ಶುಲ್ಕ ವಿಧಿಸಿದರೆ, ದಿನದ ಕೊನೆಗೆ ಆ 100 ರೂ.ನಲ್ಲಿ 15 ರೂಪಾಯಿ ಖಾಸಗಿ ಹಣಕಾಸು ಸಂಸ್ಥೆಗಳು ಅಥವಾ ಮಧ್ಯವರ್ತಿಗಳ ಪಾಲಾಗಿರುತ್ತದೆ," ಎಂದಿದ್ದರು.
ಶುಲ್ಕ ಬೇರೆ ಇರಬಹುದು, ಮೊತ್ತ ಬೇರೆಯಾಗಿರಬಹುದು. ಆದರೆ, ಅವರು ಅಂದು ವ್ಯಕ್ತಪಡಿಸಿದ್ದ ಆತಂಕ ಇಂದಿನ ಎಂಡಿಆರ್ ಶುಲ್ಕದ ಪ್ರಸ್ತಾಪದೊಂದಿಗೆ ಅಕ್ಷರಶಃ ನಿಜವಾಗುತ್ತಿದೆ.
ಇದರ ನಡುವೆ, ಸರ್ಕಾರ ಮತ್ತು ಎನ್‌ಪಿಸಿಐ ಮಾತ್ರ ಈ ಶೇ. 0.4ರಷ್ಟು ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಭರಿಸಬೇಕು; ಗ್ರಾಹಕರಲ್ಲ ಎನ್ನುತ್ತಿವೆ. ಆದರೆ ಮಾರುಕಟ್ಟೆಯ ವಾಸ್ತವವೇ ಬೇರೆ. ಉದಾಹರಣೆಗೆ, 20 ರೂ.ನ ಚಹಾಗೆ ನೀವು ಹೋಟೆಲ್‌ನಲ್ಲಿ ಬಿಲ್ ಕಟ್ಟುವಾಗ ಅಲ್ಲಿ ಜಿಎಸ್‌ಟಿ ಎಂದು ಒಂದೆರಡು ರೂ. ವಸೂಲಿ ಮಾಡಲಾಗುತ್ತದೆ. ವ್ಯಾಪಾರಿಯು ತನಗೆ ಬೀಳುವ ಯಾವುದೇ ಶುಲ್ಕವನ್ನು ತನ್ನ ಜೇಬಿನಿಂದ ಭರಿಸುವುದಿಲ್ಲ. ಬದಲಿಗೆ ಆ ಹೊರೆಯನ್ನು ವಸ್ತುಗಳ ಬೆಲೆಗೆ ಸೇರಿಸಿ ಪರೋಕ್ಷವಾಗಿ ಗ್ರಾಹಕನ ತಲೆಗೇ ಕಟ್ಟುತ್ತಾನೆ. ಹೀಗಾಗಿ ಸರ್ಕಾರ ಏನೇ ಹೇಳಿದರೂ ಯುಪಿಐ ಮೇಲಿನ ಈ ಶುಲ್ಕ ಕೊನೆಗೆ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕನ ಗಾಯದ ಮೇಲೆ ಬರೆ ಎಳೆಯುವುದರಲ್ಲಿ ಸಂದೇಹವಿಲ್ಲ.
ಶುಲ್ಕದ ಬಿಸಿಯಿಂದ ತಪ್ಪಿಸಿಕೊಳ್ಳಲು ಇರುವುದು ಒಂದೇ ದಾರಿ. ಮತ್ತೆ ನಗದು ವ್ಯವಹಾರಕ್ಕೆ ಮರಳುವುದು. ಈಗ ಅದೂ ಅಷ್ಟು ಸುಲಭವಲ್ಲ. ನಿಯಮಗಳ ಕಟ್ಟಳೆ ಒಂದೆಡೆಯಾದರೆ, ಎಟಿಎಂಗಳಲ್ಲಿ ಮೊದಲಿನಂತೆ ಸುಲಭವಾಗಿ ಹಣ ಸಿಗುತ್ತಿಲ್ಲ. ಬ್ಯಾಂಕ್‌ಗೆ ನೇರವಾಗಿ ಹೋಗಿ ಹಣ ಡ್ರಾ ಮಾಡಲೂ ನಾನಾ ಮಿತಿಗಳನ್ನು ಹೇರಲಾಗಿದೆ. ಹೀಗಿರುವಾಗ ಅನಿವಾರ್ಯವಾಗಿ ಡಿಜಿಟಲ್ ಮೊರೆಹೋಗಿರುವ ಜನಸಾಮಾನ್ಯರಿಗೆ ಈ ಶುಲ್ಕದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಾರಿ ಇಲ್ಲದಂತಾಗಿದೆ.
ʼಒಟ್ಟು ಯುಪಿಐ ವಹಿವಾಟುಗಳಲ್ಲಿ ಕೇವಲ ಶೇ. 4ರಷ್ಟು ವಹಿವಾಟುಗಳಿಗೆ (2,000 ರೂ. ಮೇಲ್ಪಟ್ಟ ವ್ಯಾಪಾರಿ ವಹಿವಾಟುಗಳು) ಮಾತ್ರ ಈ ಶುಲ್ಕ ಅನ್ವಯವಾಗಲಿದ್ದು, ಶೇ. 96ರಷ್ಟು ವ್ಯವಹಾರಗಳು ಉಚಿತವಾಗಿರಲಿವೆ,ʼ ಎನ್ನುವುದು ಸರ್ಕಾರದ ಮತ್ತೊಂದು ವಾದ.
ಆದರೆ, 'ವಹಿವಾಟುಗಳ ಸಂಖ್ಯೆ' ಮತ್ತು ಅದರಲ್ಲಿ ಹರಿಯುವ 'ಹಣದ ಮೊತ್ತ' ಬೇರೆ ಬೇರೆ ಎನ್ನುವುದನ್ನು ಸ್ವತಃ ಸರ್ಕಾರದ ಹಿಂದಿನ ಪತ್ರಿಕಾ ಪ್ರಕಟಣೆಯೇ ಬಿಚ್ಚಿಟ್ಟಿದೆ. 2025-26ನೇ ಸಾಲಿನ ದತ್ತಾಂಶಗಳ ಪ್ರಕಾರ, 2,000 ರೂ. ಮೇಲ್ಪಟ್ಟ ವ್ಯಾಪಾರಿ ವಹಿವಾಟುಗಳ (ಪಿ2ಎಂ) ಸಂಖ್ಯೆ ಕೇವಲ ಶೇ. 4. ಆದರೆ ಆ ಶೇ. 4ರಷ್ಟು ವಹಿವಾಟುಗಳಲ್ಲಿ ಹರಿಯುವ ಹಣದ ಮೊತ್ತ ಬರೋಬ್ಬರಿ ಶೇ. 67ರಷ್ಟು. ಅಂದರೆ, ವ್ಯಾಪಾರಿ ವಹಿವಾಟುಗಳಲ್ಲಿ ಹರಿಯುವ ಒಟ್ಟು ಮೊತ್ತದ ಶೇ. 67ರಷ್ಟು ಭಾಗದ ಮೇಲೆ ನೇರವಾಗಿ ಶೇ. 0.4ರಷ್ಟು ಶುಲ್ಕದ ಕತ್ತರಿ ಬೀಳಲಿದೆ..
ಇದೇ ವೇಳೆ, ʼಯುಪಿಐ ವ್ಯವಸ್ಥೆಯ ನಿರ್ವಹಣೆ, ಮೂಲಸೌಕರ್ಯ ಹಾಗೂ ಸೈಬರ್ ಭದ್ರತೆಗಾಗಿ ಸಾವಿರಾರು ಕೋಟಿ ರೂ. ವೆಚ್ಚವಾಗುತ್ತಿದ್ದು ಶುಲ್ಕ ಅನಿವಾರ್ಯʼ ಎನ್ನುವುದು ಇನ್ನೊಂದು ವಾದ. ಆದರೆ, ಯುಪಿಐ ನಿರ್ವಹಿಸುವ 'ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ' (ಎನ್‌ಪಿಸಿಐ) ಮೂಲತಃ ಒಂದು ʼಲಾಭೋದ್ದೇಶವಿಲ್ಲದʼ ಸಂಸ್ಥೆ.
ಎನ್‌ಪಿಸಿಐನ ಇತ್ತೀಚಿನ ವಾರ್ಷಿಕ ಲೆಕ್ಕಪತ್ರಗಳನ್ನು ಗಮನಿಸಿದರೆ ಈ 'ವೆಚ್ಚ'ದ ಇನ್ನೊಂದು ಮುಖವೂ ಅನಾವರಣವಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆ 4,872 ಕೋಟಿ ರೂ. ಆದಾಯ ಗಳಿಸಿದ್ದರೆ, ತೆರಿಗೆಯನ್ನೆಲ್ಲಾ ಕಳೆದು ಬರೋಬ್ಬರಿ 1,361 ಕೋಟಿ ರೂ.ಗಳ ನಿವ್ವಳ ಲಾಭ (ಸರ್‌ಪ್ಲಸ್) ಗಳಿಸಿದೆ. ಇಡೀ ದೇಶದ ಪಾವತಿ ಮೂಲಸೌಕರ್ಯ ನಿರ್ವಹಿಸಲು ತಗಲುವ ವಾರ್ಷಿಕ ವೆಚ್ಚ 700 ಕೋಟಿ ರೂ. ದಾಟುವುದಿಲ್ಲ ಎಂಬುದನ್ನು ಸ್ವತಃ ಆ ಸಂಸ್ಥೆಯ ಲೆಕ್ಕಪತ್ರಗಳೇ ಹೇಳುತ್ತಿವೆ. ಉಳಿದ ಮೊತ್ತವೆಲ್ಲ ಪ್ರಚಾರ ಸೇರಿದಂತೆ ಇನ್ನಿತರ ಖರ್ಚುಗಳಿಗೆ ಹೋಗುತ್ತಿದೆ. ಇದರ ಜೊತೆಗೆ, ಶೂನ್ಯ ಎಂಡಿಆರ್ ನಷ್ಟ ಭರಿಸಲು ಸರ್ಕಾರವೇ ಬ್ಯಾಂಕುಗಳಿಗೆ ಪ್ರತಿ ವರ್ಷ ಸರಿಸುಮಾರು 2,000 ಕೋಟಿ ರೂ.ನಷ್ಟು ಸಬ್ಸಿಡಿಯನ್ನೂ ನೀಡುತ್ತಿದೆ.
ಹೀಗಿರುವಾಗ, ಲಾಭದಲ್ಲಿ ನಡೆಯುತ್ತಿರುವ ಲಾಭೋದ್ದೇಶ ರಹಿತ ಸಂಸ್ಥೆಗೆ ಈ ಹೊಸ ಎಂಡಿಆರ್ ಶುಲ್ಕದ ಅವಶ್ಯಕತೆಯಂತೂ ಕಾಣುವುದಿಲ್ಲ. ಇನ್ನು ಬ್ಯಾಂಕುಗಳಿಗೂ ಸರ್ಕಾರವೇ ಹಣ ನೀಡುತ್ತಿದೆ. ಒಂದೊಮ್ಮೆ ಈ ಸಬ್ಸಿಡಿ ನೀಡದೇ ಇದ್ದರೂ ಪ್ರತಿ ತ್ರೈಮಾಸಿಕದಲ್ಲಿ ಸಾವಿರಾರು ಕೋಟಿ ರೂಪಾಯಿ ಲಾಭ ದಾಖಲಿಸುವ ಬ್ಯಾಂಕ್‌ಗಳಿಗೆ ಇದು ಹೊರೆಯೇನೂ ಅಲ್ಲ. ಸಬ್ಸಿಡಿಯನ್ನು ಮುಂದುವರಿಸಬೇಕೆಂದರೂ 53.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಕೇಂದ್ರ ಸರ್ಕಾರಕ್ಕೆ ಇದು ದೊಡ್ಡ ಮೊತ್ತವೂ ಅಲ್ಲ. ಹೀಗಿರುವಾಗ ಈ ಶುಲ್ಕದ ಅಗತ್ಯವೇನಿತ್ತು ಎಂಬುದನ್ನು ಕೇಳಬೇಕಿದೆ.
ಹಾಗಾದರೆ ಇದರ ಅಸಲಿ ಫಲಾನುಭವಿಗಳು ಯಾರು ಎಂದು ಹುಡುಕಿದಾಗ ಕಾಣಿಸಿಕೊಳ್ಳುವುದು ಎರಡು ಪ್ರಮುಖ ಹೆಸರುಗಳು. ಒಂದು ಫೋನ್‌ಪೇ (ವಾಲ್‌ಮಾರ್ಟ್ ಒಡೆತನ), ಮತ್ತೊಂದು ಗೂಗಲ್ ಪೇ (ಆಲ್ಫಾಬೆಟ್ ಒಡೆತನ). ಎನ್‌ಪಿಸಿಐ ಅಂಕಿ-ಅಂಶಗಳ ಪ್ರಕಾರ ಅಮೆರಿಕನ್ ಮೂಲದ ಈ ಬಹುರಾಷ್ಟ್ರೀಯ ಕಂಪನಿಗಳು ಭಾರತದ ಯುಪಿಐ ಮಾರುಕಟ್ಟೆಯ ಶೇ. 80ರಷ್ಟು ಪಾಲನ್ನು ನಿಯಂತ್ರಿಸುತ್ತಿವೆ. ಮೊದಲಿನಿಂದಲೂ ಯುಪಿಐ ಮೇಲಿನ 'ಶೂನ್ಯ ಎಂಡಿಆರ್' ನೀತಿಯನ್ನು ವಿರೋಧಿಸುತ್ತಲೇ ಬಂದ ಈ ಸಂಸ್ಥೆಗಳಿಗೆ ಈಗ ವಿಧಿಸಲಾಗುತ್ತಿರುವ ಶುಲ್ಕದಲ್ಲಿ ಶೇ. 20ರಷ್ಟು ಪಾಲು ಹೋಗಲಿದೆ. ಉಳಿದ ಬಹುಪಾಲು ಹಣ ಬ್ಯಾಂಕುಗಳಿಗೆ ಸೇರಲಿದೆ. ಎನ್‌ಪಿಸಿಐಗೆ ಸಿಗುವುದು ಕೇವಲ ಬಿಡಿಗಾಸು. ಇದರಿಂದ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು, ತಾನು ನೀಡುತ್ತಿದ್ದ ಸಬ್ಸಿಡಿ ಹೊರೆಯನ್ನು ಇಳಿಸಿಕೊಂಡು, ಅದನ್ನು ನೇರವಾಗಿ ಜನಸಾಮಾನ್ಯರ ತಲೆಗೆ ಕಟ್ಟಿತೇ ಎಂಬ ಪ್ರಶ್ನೆ ಮೂಡುತ್ತದೆ.
ಸದ್ಯಕ್ಕೆ ವ್ಯಾಪಾರಿಗಳ ವಹಿವಾಟಿಗೆ (ಪಿ2ಎಂ) ಮಾತ್ರ ಶುಲ್ಕ, ಸಾಮಾನ್ಯ ವ್ಯಕ್ತಿಗಳ ನಡುವಿನ ಪಾವತಿಗೆ (ಪಿ2ಪಿ) ಯಾವುದೇ ಎಂಡಿಆರ್ ಇಲ್ಲ ಎಂದು ಸರ್ಕಾರ ಅಭಯ ನೀಡಿದೆ. ಆದರೆ ಭವಿಷ್ಯದಲ್ಲಿ ಹೀಗೇ ಇರುತ್ತದೆ ಎನ್ನುವ ಖಾತರಿ ಇಲ್ಲ. ಏಕೆಂದರೆ, 2022, 2025ರಲ್ಲಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸ್ವತಃ ಕೇಂದ್ರ ಹಣಕಾಸು ಸಚಿವಾಲಯವೇ ʼಯುಪಿಐ ಮೇಲೆ ಎಂಡಿಆರ್ ತರುವ ಯಾವುದೇ ಯೋಜನೆ ಇಲ್ಲʼ ಎಂದು ಹೇಳಿತ್ತು. ಆದರೆ ಈಗ ಏಕಾಏಕಿ ಎಂಡಿಆರ್ ಜಾರಿಗೆ ತರಲಾಗಿದೆ. ಇಂದು ವ್ಯಾಪಾರಿಗಳಿಗೆ ಬಿದ್ದಿರುವ ಕತ್ತರಿ, ನಾಳೆ ಸಾರ್ವಜನಿಕರ ವೈಯಕ್ತಿಕ ವಹಿವಾಟಿಗೂ (ಪಿ2ಪಿ) ಬೀಳುವುದಿಲ್ಲ ಎಂಬುದಕ್ಕೆ ಖಾತರಿ ಏನು?
ಸಾರ್ವಜನಿಕ ಸೇವೆಗೆ ಬೆಲೆ ಕಟ್ಟುವಾಗ...
ಇಲ್ಲಿ ಇನ್ನೊಂದು ಸಂಗತಿಯನ್ನು ಪ್ರಸ್ತಾಪಿಸಬೇಕು. ಒಂದು ಸರ್ಕಾರ ಎಂದಾಗ ಸಮಾಜದಲ್ಲಿ ಸುವ್ಯವಸ್ಥೆ ಕಾಪಾಡುವುದು ಅದರ ಮೂಲಭೂತ ಜವಾಬ್ದಾರಿಯಾಗುತ್ತದೆ. ಇದರಲ್ಲಿ ಹಣಕಾಸು ವ್ಯವಸ್ಥೆಯೂ ಬರುತ್ತದೆ. ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ಪಾವತಿ ಮೂಲಸೌಕರ್ಯ ಕೂಡ ಅಂತಹ ಅತ್ಯಗತ್ಯ ವ್ಯವಸ್ಥೆಗಳ ಸಾಲಿಗೆ ಸೇರಿದೆ. ಇಂತಹ ಮೂಲಭೂತ ಸಾರ್ವಜನಿಕ ಸೇವೆಯಲ್ಲಿ ಲಾಭ ಹುಡುಕಲಾಗುವುದಿಲ್ಲ; ಅದನ್ನು ಕೇವಲ ಹೊರೆಯ ದೃಷ್ಟಿಯಿಂದಲೂ ನೋಡಲಾಗುವುದಿಲ್ಲ.
ಆಗಲೇ ಹೇಳಿದಂತೆ, ಈ ವ್ಯವಸ್ಥೆಯಿಂದ ಈಗಾಗಲೇ ಕಾಗದದ ನೋಟುಗಳ ಮುದ್ರಣ ವೆಚ್ಚದಲ್ಲಿ ಉಳಿತಾಯ, ತೆರಿಗೆ ಸಂಗ್ರಹ ಹೆಚ್ಚಳ ಸೇರಿದಂತೆ ಸರ್ಕಾರ ಹಾಗೂ ಬ್ಯಾಂಕುಗಳು ಅಗಾಧವಾದ ಲಾಭ ಪಡೆದುಕೊಂಡಿವೆ.
ಹೀಗಿರುವಾಗ, ಜನರ ವಿಶ್ವಾಸ ಗಳಿಸಿ, ಅವರನ್ನು ಅತಿಯಾದ ಅವಲಂಬನೆ ತಳ್ಳಿ ಈಗ ಅದೇ ವ್ಯವಸ್ಥೆಯನ್ನು ಲಾಭದ ಮೂಲವನ್ನಾಗಿ ಪರಿವರ್ತಿಸಲು ನೋಡುವುದು ಲೂಟಿಕೋರ ಕಂಪನಿಯ ಮನಸ್ಥಿತಿಯಾಗುತ್ತದೆಯೇ ಹೊರತು, ಕಲ್ಯಾಣ ರಾಷ್ಟ್ರವೊಂದರ ಲಕ್ಷಣ ಖಂಡಿತ ಅಲ್ಲ. ಮುಂದುವರಿದ ದೇಶವಾಗುವ ತವಕದಲ್ಲಿರುವ, 53.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ದೇಶಕ್ಕೆ ಈ ಮೂಲಭೂತ ಡಿಜಿಟಲ್ ಸೇವೆಯ ಜುಜುಬಿ ವೆಚ್ಚವೇ ದೊಡ್ಡ ಹೊರೆಯಾಗಿ ಕಾಣುತ್ತಿರುವುದು ವಿಪರ್ಯಾಸವೇ ಸರಿ.

