ಪ್ರಜಾವಾಣಿ
1.4M Followers ಚಿಕ್ಕಮಗಳೂರು: ಎನ್.ಆರ್.ಪುರ ತಾಲ್ಲೂಕಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರ ವಿರುದ್ಧ ದಾಖಲಾಗಿರುವ ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣದ ತನಿಖೆ ಶುರುವಾಗಿದೆ. ಆರೋಪಿಯನ್ನು ಸೋಮವಾರ ಅಮಾನತು ಮಾಡಲಾಗಿದೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್. ಶ್ರುತಿ ಅವರಿಗೆ ತನಿಖೆ ಹೊಣೆ ವಹಿಸಲಾಗಿದೆ. ತನಿಖಾ ತಂಡವು ಸೋಮವಾರ ಶಾಲೆಯ ಶಿಕ್ಷಕರು, ಪೋಷಕರಿಂದ ಮಾಹಿತಿ ಕಲೆ ಹಾಕಿದೆ. ಆರೋಪಿ ಶಿಕ್ಷಕನ ವಿವರ ಪಡೆದುಕೊಂಡಿದೆ.
ಶಿಕ್ಷಕ ತಲೆ ಮರೆಸಿಕೊಂಡಿದ್ದು, ಪತ್ತೆಗಾಗಿ ಬಲೆ ಬೀಸಲಾಗಿದೆ. ಒಂದು ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.
ಆರೋಪಿ ದೈಹಿಕ ಶಿಕ್ಷಣ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ಎನ್.ಆರ್. ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.
ಕಡ್ಡಾಯ ರಜೆ: ಈ ಶಿಕ್ಷಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಈ ಹಿಂದೆ ಪೋಷಕರು ಶಾಲಾಭಿವೃದ್ಧಿ ಸಮಿತಿಗೆ (ಎಸ್‌ಡಿಎಂಸಿ) ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ಪರಿಶೀಲಿಸಿ ಹಿರಿಯ ಶಿಕ್ಷಕರು ವರದಿ ನೀಡಿದ್ದರು.
ವರದಿ ಆಧರಿಸಿ ಜ. 3ರಿಂದ ಆರೋಪಿ ಶಿಕ್ಷಕನನ್ನು15 ದಿನ ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Disclaimer
This story is auto-aggregated by a computer program and has not been created or edited by Dailyhunt Publisher: Prajavani