Tuesday, 15 Sep, 6.10 am ಪ್ರಜಾವಾಣಿ

ಮೈಸೂರು
ಎಂಜಿನಿಯರಿಂಗ್ ಕಾಲೇಜು ಆರಂಭ

ಮೈಸೂರು: 'ಮೈಸೂರು ವಿಶ್ವವಿದ್ಯಾನಿಲಯ 2021-22ನೇ ಸಾಲಿಗೆ ಎಂಜಿನಿಯರಿಂಗ್ ಕಾಲೇಜು ಆರಂಭಿಸುವುದು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ' ಎಂದು ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಸೋಮವಾರ ಇಲ್ಲಿ ತಿಳಿಸಿದರು.

ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ, 'ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲೇ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಲಾಗುವುದು' ಎಂದು ಪ್ರಕಟಿಸಿದರು.

'ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಳ್ಳೆಯ ಹೆಸರಿದೆ. ಇದರಿಂದ ದಾಖಲಾತಿಯ ಸಮಸ್ಯೆ ಆಗುವುದಿಲ್ಲ. ಮೊದಲ ಮೂರು ವರ್ಷ ಕಳೆದರೆ, ವಿ.ವಿ.ಗೆ ಎಂಜಿನಿಯರಿಂಗ್‌ ಕಾಲೇಜಿನಿಂದಲೇ ವಾರ್ಷಿಕ ₹ 4 ಕೋಟಿಯಿಂದ ₹ 5 ಕೋಟಿ ಆದಾಯ ಬರಲಿದೆ. ಈ ಹಣದಿಂದ ಇನ್ನಿತರೆ ಶೈಕ್ಷಣಿಕ, ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಬಹುದು' ಎಂದು ಹೇಳಿದರು.

ಕುಲಪತಿಯ ಪ್ರಸ್ತಾವಕ್ಕೆ ಮಂಡಳಿ ಸದಸ್ಯ ವೆಂಕಟೇಶ್‌ ಆಕ್ಷೇಪ ವ್ಯಕ್ತಪಡಿಸಿದರು. 'ಎಐಸಿಟಿಇಯ ಅನುಮತಿ ಪಡೆಯದೇ ಯಾವೊಂದು ಕೋರ್ಸ್‌ ಆರಂಭಿಸಬಾರದು. ಅನುಮತಿ ಸಿಕ್ಕ ವಿಷಯದ ಕೋರ್ಸ್‌ ಮಾತ್ರ ನಡೆಸಬೇಕು. ಈಗಾಗಲೇ ವಿ.ವಿ. ಕೆಲವೊಂದು ಕೋರ್ಸ್‌ಗಳನ್ನು ಅನುಮತಿ ಪಡೆಯದೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಕವಿದಿದೆ. ಅದನ್ನು ಸರಿಪಡಿಸಬೇಕು' ಎಂದರು.

'ಎಐಸಿಟಿಇಯ ಛೇರ್‌ಮನ್‌ ಸೂಚನೆಯಂತೆ ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಮುಂದಾಗಿದ್ದೇವೆ. ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ, ಸುಸಜ್ಜಿತ ಕಟ್ಟಡ ಸೇರಿದಂತೆ ಸಕಲ ಸೌಲಭ್ಯ ಒದಗಿಸಿದ ಬಳಿಕ, ಎಐಸಿಟಿಇಯ ಅನುಮತಿ ಪಡೆದೇ ಕಾಲೇಜು ಆರಂಭಿಸೋದು. ತರಾತುರಿಯಲ್ಲಿ ಮಾಡುವುದಿದ್ದರೇ, ಈ ವರ್ಷವೇ ಮಾಡುತ್ತಿದ್ದೆವು. ಮುಂದಿನ ವರ್ಷದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ' ಎಂದು ಹೇಮಂತ್‌ಕುಮಾರ್ ಸಮಜಾಯಿಷಿ ನೀಡಿದರು.

ಸಭೆಯಲ್ಲಿ ವಿ.ವಿ.ಯ ಬಜೆಟ್‌, ಹೊಸ ಕೋರ್ಸ್‌ ಆರಂಭಿಸುವ ಬಗ್ಗೆ, ಪಿ.ಎಚ್‌ಡಿ ಮಾನದಂಡ, ಸಮಿತಿಗಳ ರಚನೆ ಕುರಿತಂತೆ, ಪಿಎಂಇಬಿ ಬೋರ್ಡ್‌ ಬಗ್ಗೆಯೂ ಚರ್ಚೆಯಾಯ್ತು.

ಎನ್‌ಇಪಿ: ಸಮಿತಿ ರಚನೆ

'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಈಗಿನಿಂದಲೇ ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಹತ್ತು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ' ಎಂದು ಕುಲಪತಿ ಸಭೆಯಲ್ಲಿ ತಿಳಿಸಿದರು.

'20 ಪ್ರೊಫೆಸರ್‌ಗಳ ಟಾಸ್ಕ್‌ಫೋರ್ಸ್‌ ಸಮಿತಿಯೊಂದನ್ನು ರಚಿಸಲಾಗುವುದು. ಸೆ.19ರಂದು ಈ ಟಾಸ್ಕ್‌ಫೋರ್ಸ್‌ ಉದ್ಘಾಟಿಸಲಾಗುವುದು. ಇದು ಎನ್‌ಇಪಿಯನ್ನು ಮತ್ತಷ್ಟು ಪರಿಣಾಮಕಾರಿ ಅನುಷ್ಠಾನಗೊಳಿಸುವ ಕೆಲಸ ಮಾಡುವುದು' ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ, ಮಂಡ್ಯ ಶಾಸಕ ಎಂ.ಶ್ರೀನಿವಾಸ್‌, ಶಿಕ್ಷಣ ಮಂಡಳಿ ಸದಸ್ಯರು, ಶಿಕ್ಷಣ ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಶೇಷ ಕೋರ್ಸ್‌ಗೆ ಅನುಮತಿ

ಮೈಸೂರಿನ ನಟನ ರಂಗಶಾಲೆ ಸಂಸ್ಥೆಗೆ ಡಿಪ್ಲೊಮಾ ಇನ್ ಥಿಯೇಟರ್, ಸರ್ಟಿಫಿಕೇಟ್ ಕೋರ್ಸ್‌ ಇನ್ ಥಿಯೇಟರ್ ಆಯಕ್ಟಿಂಗ್ ಕೋರ್ಸ್‌ ನಡೆಸಲು ಮೈಸೂರು ವಿ.ವಿ. ಅನುಮೋದನೆ ನೀಡಿದೆ.

ಅಮೆರಿಕದ ಸಂಸ್ಥೆಯೊಂದಕ್ಕೆ ಸರ್ಟಿಫಿಕೇಟ್ ಕೋರ್ಸ್‌ ಇನ್ ಕನ್ನಡ ಲಾಂಗ್ವೇಜ್ ಅಂಡ್ ಕಲ್ಚರ್ ಹೊಸ ಕೋರ್ಸ್‌ನ ಅನುಮತಿ ನೀಡಿದರೆ, ಕುವೈತ್‌ನ ಸಂಸ್ಥೆಯೊಂದಕ್ಕೆ ಬಿಕಾಂ, ಬಿಬಿಎ, ಬಿಎ ಪದವಿಯ ನೂತನ ಕೋರ್ಸ್‌ ಆರಂಭಕ್ಕೆ ಅನುಮತಿ ನೀಡಿದೆ.

ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ, ಐಐಎಫ್‌ಎ ಲ್ಯಾನ್‌ಕಾಸ್ಟರ್‌ ಪದವಿ ಕಾಲೇಜು, ಇಂಟರ್‌ನ್ಯಾಷನಲ್ ಕಾಲೇಜ್ ಆಫ್ ಫೈನಾನ್ಶಿಯಲ್ ಪ್ಲ್ಯಾನಿಂಗ್ ಸಂಸ್ಥೆಗಳಲ್ಲೂ ಕೆಲವೊಂದು ಹೊಸ ಕೋರ್ಸ್‌ ಆರಂಭಕ್ಕೆ ಶಿಕ್ಷಣ ಮಂಡಳಿ ಸಭೆ ಅನುಮೋದನೆ ನೀಡಿತು.

ವಿ.ವಿ.ಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಡಿ ಸ್ನಾತಕೋತ್ತರ ರಾಸಾಯನಿಕ ಜೀವವಿಜ್ಞಾನ ವಿಷಯವನ್ನು 2021-22ನೇ ಶೈಕ್ಷಣಿಕ ಸಾಲಿನಿಂದ ಆರಂಭಿಸಲೂ ಅನುಮತಿ ನೀಡಿದೆ.

ಘಟಕ ಕಾಲೇಜು

'ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಪದವಿ ಪೂರ್ವ ಕಾಲೇಜು, ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಪ್ರಥಮ ದರ್ಜೆ ಕಾಲೇಜುಗಳನ್ನು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳನ್ನಾಗಿ ಸರ್ಕಾರದಿಂದ ಪಡೆಯುತ್ತಿದ್ದೇವೆ. ಈ ಕಾಲೇಜುಗಳಲ್ಲಿ ಗ್ರಾಮೀಣ ಕೌಶಲ ಆಧಾರಿತ ಕೋರ್ಸ್‌ ಆರಂಭಿಸಲಾಗುವುದು. ನೋ ಲಾಸ್, ನೋ ಪ್ರಾಫಿಟ್ ಸ್ಕೀಂನಡಿ ಈ ಕಾಲೇಜುಗಳನ್ನು ನಡೆಸಲಾಗುವುದು' ಎಂದು ಕುಲಪತಿ ಸಭೆಯ ಅನುಮೋದನೆ ಕೋರಿದರು.

ಘಟಕ ಕಾಲೇಜುಗಳ ಅಧ್ಯಾಪಕ ವರ್ಗಕ್ಕೂ ನಿಯಮಾನುಸಾರ ಪ್ರೊಫೆಸರ್ ಹುದ್ದೆಗೆ ಪದೋನ್ನತಿ ನೀಡುವ ವಿಷಯವನ್ನು ಹೇಮಂತ್‌ಕುಮಾರ್ ಸಭೆಯಲ್ಲಿ ಮಂಡಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top