Thursday, 29 Jul, 10.55 am ಪ್ರಜಾವಾಣಿ

ಜಿಲ್ಲೆ
ಎನ್‌ಟಿಎಂ ಶಾಲೆ: ರೈತ ಹೋರಾಟಗಾರರು ಭಾಗಿ

ಮೈಸೂರು: ಇಲ್ಲಿನ ಎನ್‌ಟಿಎಂ ಶಾಲೆ ಮುಂಭಾಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಭಾಗಿಯಾದರು. ಈ ಮೂಲಕ ಪ್ರತಿಭಟನೆ 31ನೇ ದಿನ ತಲುಪಿತು.

ಮಹಾರಾಣಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಇವರು 'ಸರ್ಕಾರಿ ಶಾಲೆ ಉಳಿಸಿ' ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಕರ್ನಾಟಕ ಜನಪರ ಶಕ್ತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ಮಧುಮತಿ ಅವರು ಒನಕೆ ಓಬವ್ವ ಧಿರಿಸನ್ನು ಧರಿಸಿ ಗಮನ ಸೆಳೆದರು.

ರೈತ ಸಂಘದ ಪ್ರಸನ್ನ ಎನ್ ಗೌಡ ಮಾತನಾಡಿ, 'ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ನಮಗೆ ಮಾದರಿಯಾಗಿದೆ. ಅದೇ ಬಗೆಯಲ್ಲಿ ನಾವು ಶಾಲೆ ಉಳಿಸಲು ಹೋರಾಡಬೇಕಿದೆ' ಎಂದು ಅಭಿಪ್ರಾಯಪಟ್ಟರು.

'ಸರ್ಕಾರಿ ಶಾಲೆ ಉಳಿಸಿ ಎಂದು ನಾವು ಬೀದಿಯಲ್ಲಿ ನಿಂತು ಸರ್ಕಾರವನ್ನೇ ಕೇಳಬೇಕಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ' ಎಂದು ಹರಿಹಾಯ್ದರು.

ಹೊಸಕೋಟೆ ಬಸವರಾಜು ಮಾತನಾಡಿ, 'ಸರ್ಕಾರಗಳು ಶಾಲೆಗಳನ್ನು ತೆರೆಯಬೇಕೇ ವಿನಾ ಶಾಲೆಗಳನ್ನು ಮುಚ್ಚಬಾರದು. ಆದರೆ, ಎನ್‌ಟಿಎಂ ಸರ್ಕಾರಿ ಶಾಲೆಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ' ಎಂದು ಖಂಡಿಸಿದರು.

ಹೋರಾಟಗಾರರಾದ ‍ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಹೊಸಕೋಟೆ ಬಸವರಾಜು, ಭಾನುಮೋಹನ್‌, ಕರ್ನಾಟಕ ಜನಪರ ಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷೆ ಮಂಜುಳಾ ಇದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top