ಬೀದರ್: ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಮುಂದುವರಿದಿದ್ದು, ಒಟ್ಟು ಮತದಾರರ ಪೈಕಿ 2.46 ಜನರ ಹೆಸರು ರದ್ದಾಗುವ ಸಾಧ್ಯತೆ ಇದೆ.
ಆಗಸ್ಟ್ 5ರವರೆಗೆ ಜಿಲ್ಲೆಯಾದ್ಯಂತ ಒಟ್ಟು 14.61 ಲಕ್ಷ ಎಸ್‌ಐಆರ್ ನಮೂನೆಗಳನ್ನು ವಿತರಿಸಲಾಗಿದೆ.
ಈ ಪೈಕಿ 12.15 ಲಕ್ಷ ನಮೂನೆ ಸ್ವೀಕೃತವಾಗಿವೆ. ಇನ್ನೂ 2.46 ಲಕ್ಷ ಸಂಗ್ರಹಿಸಬೇಕಿದೆ. ಇನ್ನು, ಡೆತ್ (ಮೃತರು), ಅನ್‌ಟ್ರೇಸೇಬಲ್/ಅಬ್‌ಸೆಂಟ್ (ಪತ್ತೆಯಾಗದವರು/ಗೈರಾದವರು), ಪರ್ಮನೆಂಟ್ಲಿ ಶಿಫ್ಟೆಡ್ (ಶಾಶ್ವತವಾಗಿ ಸ್ಥಳಾಂತರಗೊಂಡವರು), ಅದರ್ಸ್ (ಇತರೆ), ಆಲ್‌ರೆಡಿ ಎನ್‌ರೋಲ್ಡ್ (ಈಗಾಗಲೇ ಹೆಸರು ನೋಂದಣಿ ಮಾಡಿಸಿದವರು) ಈ ರೀತಿ (ಎಎಸ್‌ಡಿಡಿಒ) (ಯುಇಎಫ್) ಎಂದು ವರ್ಗೀಕರಣ ಮಾಡಲಾಗಿದೆ. ಹೀಗೆ ಈ ಐದರಲ್ಲಿ ಒಟ್ಟು 2.46 ಲಕ್ಷ ಜನರ ಹೆಸರುಗಳಿದ್ದು, ಇವುಗಳು ಮತದಾರರ ಪಟ್ಟಿಯಿಂದ ಅಳಿಸಿ ಹೋಗುವ ಸಾಧ್ಯತೆ ಹೆಚ್ಚಿದೆ.
ಜಿಲ್ಲಾಡಳಿತದ ಪ್ರಕಾರ, ಈಗಾಗಲೇ ಬಿಎಲ್‌ಒಗಳು ಜಿಲ್ಲೆಯಾದ್ಯಂತ ಅವರಿಗೆ ವಹಿಸಿದ ವಾರ್ಡ್‌ಗಳಲ್ಲಿ ಮನೆ ಮನೆಗೆ ಓಡಾಡಿ ಎನ್ಯುಮರೇಶನ್ ಫಾರ್ಮ್‌ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ಬಹುತೇಕ ಸಂಗ್ರಹಿಸಿದ್ದಾರೆ. ಇನ್ನು, ಮೃತರ ಮಾಹಿತಿ ಸಿಕ್ಕಿದೆ. ಸಾಕಷ್ಟು ಪ್ರಯತ್ನಿಸಿದರೂ ಹಲವರ ಬಗ್ಗೆ ಮಾಹಿತಿ ದೊರೆತಿಲ್ಲ. ಮನೆಗೆ ಭೇಟಿ ನೀಡಿದಾಗ ಗೈರಾದವರ ಬಾಗಿಲಿಗೆ ಚೀಟಿ ಅಂಟಿಸಿದರೂ ಸಂಪರ್ಕಿಸುವ ಕೆಲಸವಾಗಿಲ್ಲ. ಇನ್ನು, ಶಾಶ್ವತವಾಗಿ ಬೇರೆ ಕಡೆಗೆ ಸ್ಥಳಾಂತರಗೊಂಡವರನ್ನು ಗುರುತಿಸಿದ್ದಾರೆ.
ಎನ್ಯುಮರೇಶನ್ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ, ಬಿಎಲ್‌ಒಗಳಿಗೆ ಹಿಂತಿರುಗಿಸಲು ಆ.8 ಕೊನೆಯ ದಿನವಾಗಿದೆ. 2.46 ಲಕ್ಷ ಜನರಲ್ಲಿ 31,844 ಮೃತರ ಹೆಸರುಗಳಿವೆ. ಇವುಗಳನ್ನು ಹೊರತುಪಡಿಸಿ ಮಿಕ್ಕುಳಿದವರು ಎರಡು ದಿನಗಳ ಅವಧಿಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕಿದೆ. ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ.

ಎಸ್‌ಐಆರ್ ನಮೂನೆ ಸ್ವೀಕೃತಿ ನಾಳೆ ಕೊನೆ
ಬೀದರ್: ಎಸ್‌ಐಆರ್ ನಮೂನೆ ಸ್ವೀಕರಿಸಲು ಶನಿವಾರ (ಆ.8) ಕೊನೆ ದಿನವಾಗಿದೆ.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಎನ್ಯುಮರೇಶನ್ ಹಾಗೂ ಡಿಜಿಟೈಜೇಶನ್ ಕುರಿತು ಹಾಗೂ ಸ್ಥಳಾಂತರಗೊಂಡ, ಗೈರಾದ, ಮೃತ ಹಾಗೂ ನಕಲು ಮತದಾರರ ವಿವರಗಳನ್ನು ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಶೇ 82.97ರಷ್ಟು ಡಿಜಿಟೈಜೇಶನ್ ಕೆಲಸ ಪೂರ್ಣಗೊಂಡಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಹ ಮತದಾರರು ತಪ್ಪಿ ಹೋಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
12.15 ಲಕ್ಷ ಅರ್ಜಿ ಸ್ವೀಕೃತ
ಬೀದರ್: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14.61 ಲಕ್ಷ ನಮೂನೆಗಳನ್ನು ವಿತರಿಸಲಾಗಿದ್ದು, ಈ ಪೈಕಿ 12.15 ಲಕ್ಷ ಸ್ವೀಕತಗೊಂಡಿವೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,57,095 ನಮೂನೆ ವಿತರಿಸಲಾಗಿದ್ದು, 2,22,445 ಸ್ವೀಕೃತಗೊಂಡಿವೆ. ಹುಮನಾಬಾದ್ ಕ್ಷೇತ್ರದಲ್ಲಿ 2,62,818 ನಮೂನೆ ವಿತರಿಸಿದ್ದು, 2,20,072 ಸ್ವೀಕೃತಗೊಂಡಿವೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ 2,19,880 ನಮೂನೆ ವಿತರಿಸಿ, 1,80,995 ಸ್ವೀಕೃತವಾಗಿವೆ.
ಬೀದರ್ ಕ್ಷೇತ್ರದಲ್ಲಿ 2,48,809 ನಮೂನೆ ವಿತರಿಸಲಾಗಿದ್ದು, 1,84,408 ಸ್ವೀಕೃತಗೊಂಡಿವೆ. ಭಾಲ್ಕಿ ಕ್ಷೇತ್ರದಲ್ಲಿ 2,43,811 ವಿತರಿಸಿ, 2,11,462 ಸ್ವೀಕರಿಸಲಾಗಿದೆ. ಔರಾದ್ (ಬಿ) ಕ್ಷೇತ್ರದಲ್ಲಿ 2,29,546 ವಿತರಿಸಲಾಗಿದ್ದು, ಇದುವರೆಗೆ 1,96,274 ಸ್ವೀಕೃತವಾಗಿವೆ.
ವಿಠ್ಠಲದಾಸ್ ಪ್ಯಾಗೆ, ಸದಸ್ಯ ಮತ ಕಾವಲು ಸಮಿತಿಸ್ಥಳಾಂತರಗೊಂಡವರಿಗೆ ನ್ಯಾಯ ಸಿಗುವ ಕೆಲಸ ಜಿಲ್ಲಾಡಳಿತದಿಂದ ಆಗಬೇಕು. ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕುಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-33-595956164

