ಹಾಸನ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ನಾಗರಿಕ ಸಮಾಜದ ಸಂಘಟನೆಗಳು ಹಲವು ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದ ಆತಂಕಗಳು ಈಗ ನಿಜವಾಗುತ್ತಿವೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಇತ್ತೀಚೆಗೆ ನೀಡಿರುವ ಹೇಳಿಕೆ ಸಾಮಾನ್ಯ ಹೇಳಿಕೆಯಲ್ಲ.
ಅದು ಒಂದು ರೀತಿಯ ತಪ್ಪೊಪ್ಪಿಗೆಯಂತೆ ಕಾಣುತ್ತಿದೆ ಎಂದು ಆರೋಪಿಸಿದರು.
'ಅಪರಾಧ ಪ್ರಕರಣಗಳಲ್ಲಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಹಲವು ಸಂಗತಿಗಳು ಹೊರಬರುತ್ತವೆ. ಇದೀಗ ಚುನಾವಣಾ ಆಯೋಗ ಮಾಡುತ್ತಿರುವ ಕೆಲಸವೂ ಅದೇ ರೀತಿಯಾಗಿದೆ. ಇದು ಪ್ರಜಾಪ್ರಭುತ್ವದ ಹತ್ಯೆ. ಇದಕ್ಕೆ ಕಾರಣರಾದವರನ್ನೂ ನಾವು ಪ್ರಶ್ನಿಸುತ್ತೇವೆ' ಎಂದರು.
ಎಸ್‌ಐಆರ್ ಪ್ರಕ್ರಿಯೆ ಹಾಗೂ ಇಸಿಐ ನೆಟ್‌ನಲ್ಲಿ ಮತದಾರರ ದತ್ತಾಂಶ ಕೇಂದ್ರೀಕರಣ ಕುರಿತು ಈಗಾಗಲೇ ಪ್ರಶ್ನೆಗಳು ಮತ್ತು ಆಕ್ಷೇಪಗಳು ವ್ಯಕ್ತವಾಗಿವೆ. ಇದೀಗ ಚುನಾವಣಾ ಆಯೋಗವು ದತ್ತಾಂಶ ಪರಿಶೀಲನೆಗೆ ಆಯೋಗ ರಚಿಸುವುದಾಗಿ ಹೇಳುತ್ತಿರುವುದು ತಡವಾದ ಕ್ರಮ ಎಂದು ಟೀಕಿಸಿದರು.
ಚುನಾವಣಾ ಆಯೋಗವು ಎಸ್‌ಐಆರ್ ಸೇರಿದಂತೆ ತನ್ನೆಲ್ಲ ನಿರ್ಧಾರಗಳು ಪೂರ್ಣ ಆಯೋಗದ ಸರ್ವಾನುಮತದ ನಿರ್ಧಾರಗಳಾಗಿವೆ ಎಂದು ಸ್ಪಷ್ಟಪಡಿಸಿದೆ. ಇಸಿಐ ನೆಟ್ ಕುರಿತು ತಜ್ಞರ ಪರಿಶೀಲನೆಯನ್ನೂ ಘೋಷಿಸಿದೆ. ಇಸಿಐ ನೆಟ್‌ನಲ್ಲಿ 13 ಕೋಟಿ ಮತ ಅಳಿಸಿ, ಹಲವು ಚುನಾವಣೆ ನಡೆದ ನಂತರ ಈಗ ಅದನ್ನು ಸರಿಪಡಿಸುತ್ತೇವೆ ಎಂದು ಹೇಳಲಾಗುತ್ತಿದೆ. ಆರೆಂಟು ಚುನಾವಣೆಗಳ ಬಳಿಕ ಬಿಎಲ್‌ಒಗಳನ್ನು ಕಳುಹಿಸಿ ಪರಿಶೀಲನೆ ನಡೆಸುವುದಾಗಿ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅ.13ರಂದು ದುಂಡುಮೇಜಿನ ಸಭೆ: ಎಸ್‌ಐಆರ್ ಕುರಿತು ಸಂಗ್ರಹಿಸಿರುವ ದಾಖಲೆಗಳು ಹಾಗೂ ಜನರ ಅಹವಾಲುಗಳನ್ನು ಮುಂದಿನ ಹಂತದಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದ ಅವರು, ಅ.13ರಂದು ದುಂಡುಮೇಜಿನ ಸಭೆ ನಡೆಸಿ ದಾಖಲೆಗಳನ್ನು ಹೊರ ತರುತ್ತೇವೆ. ಮೊದಲ ಹಂತದಲ್ಲಿ ರಾಷ್ಟ್ರ ರಾಜಧಾನಿಗೆ ತೆರಳುತ್ತೇವೆ. ದೇಶದ ಹಲವು ರಾಜ್ಯಗಳಲ್ಲಿಯೂ ಎಸ್‌ಐಆರ್ ಕುರಿತು ಅಧ್ಯಯನ ನಡೆಯುತ್ತಿದೆ ಎಂದರು.

