ಹಾವೇರಿ: 'ಜಿಲ್ಲೆಯ ಮತದಾರರ ಪಟ್ಟಿಯಲ್ಲಿರುವ 14,247 ಮತದಾರರ ಮಾಹಿತಿಯಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಆಗಿಲ್ಲ. ಅದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ 45,761 ಅಸಹಜ ಮತದಾರರಿದ್ದಾರೆ. ಇವರೆಲ್ಲರೂ ಸೇರಿ 60,008 ಮತದಾರರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ಮತದಾರರು ಇರುವ ಮತಗಟ್ಟೆ ವ್ಯಾಪ್ತಿಯಲ್ಲಿಯೇ ಎಸ್ಐಆರ್ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ' ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನೋಟಿಸ್ ಪಡೆದವರು ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಆಧಾರ್, ಜನ್ಮದಿನಾಂಕ ಹಾಗೂ ಜನ್ಮಸ್ಥಳ ದಾಖಲೆ ನೀಡಬೇಕು. 1987ರ ಪೂರ್ವದಲ್ಲಿ ಜನಿಸಿದವರು ಚುನಾವಣಾ ಆಯೋಗ ನಿಗದಿಪಡಿಸಿದ ಒಂದು ದಾಖಲೆ, 2004ರಲ್ಲಿ ಜನಿಸಿದವರು ತಮ್ಮ ತಂದೆ ಅಥವಾ ತಾಯಿ ದಾಖಲೆ, 2007ರ ನಂತರ ಜನಿಸಿದವರು ತಮ್ಮ ತಂದೆ ಮತ್ತು ತಾಯಿ ಇಬ್ಬರ ದಾಖಲೆ ನೀಡಬೇಕು' ಎಂದರು.
'ಜಿಲ್ಲೆಯಲ್ಲಿ ಬಿಎಲ್ಒಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಿಎಲ್ಎ ಹಾಗೂ ರಾಜಕೀಯ ಪಕ್ಷದವರು ಸಹಕಾರ ನೀಡಿದ್ದಾರೆ. ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದಿಂದ ಎಸ್ಐಆರ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಗಣಕೀರಣದಲ್ಲಿ ಹಾವೇರಿ ಜಿಲ್ಲೆಯಲ್ಲಿ ಶೇ 91.38ರಷ್ಟು ಸಾಧನೆ ಆಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಹಾವೇರಿ ಜಿಲ್ಲೆ 2ನೇ ಸ್ಥಾನದಲ್ಲಿದೆ' ಎಂದು ಹೇಳಿದರು.
ಕರಡಿನಲ್ಲಿ 12,20,281 ಮತದಾರರ ಹೆಸರು: 'ಎಸ್ಐಆರ್ ಪ್ರಕ್ರಿಯೆಯ ಮನೆ ಮನೆ ಭೇಟಿ ಪೂರ್ಣಗೊಳಿಸಿ, ಆ. 24ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ 12,20,281 ಮತದಾರರ ಹೆಸರಿದೆ. ಮತದಾರರು ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ, ನಮೂನೆ 6 ಭರ್ತಿ ಮಾಡಿ ಸಲ್ಲಿಸಬೇಕು' ಎಂದರು.
'ಜಿಲ್ಲೆಯಲ್ಲಿ ಹಾಲಿ ಮತದಾರರ ಪಟ್ಟಿ ಪ್ರಕಾರ 13,35,342 ಮತದಾರರಿದ್ದಾರೆ. ಪ್ರತಿಯೊಬ್ಬರಿಗೂ ವಿತರಣೆ ಮಾಡಲು ಬಿಎಲ್ಒಗಳಿಗೆ ಗಣತಿ ನಮೂನೆಗಳನ್ನು ನೀಡಲಾಗಿದೆ. 12,20,281 ಮತದಾರರು ನಮೂನೆಗಳನ್ನು ವಾಪಸು ನೀಡಿದ್ದು, ಅವರ ಮಾಹಿತಿಯನ್ನು ಗಣಕೀಕರಣ ಮಾಡಿ ಕರಡು ಪಟ್ಟಿ ಪ್ರಕಟಿಸಲಾಗಿದೆ. ಈ ಕರಡು ಪಟ್ಟಿಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಆ. 24ರಿಂದ ಸೆ. 23ರವರೆಗೆ ಅವಕಾಶವಿದೆ. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27ರಂದು ಪ್ರಕಟವಾಗಲಿದೆ' ಎಂದು ವಿಜಯ ಮಹಾಂತೇಶ ತಿಳಿಸಿದರು.
'ಮತದಾರರ ಕರಡು ಪಟ್ಟಿಯಲ್ಲಿ 6,22,375 ಪುರುಷರು, 5,97,879 ಮಹಿಳೆಯರು ಹಾಗೂ 27 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಮನೆ ಭೇಟಿ ವೇಳೆ ಗೈರಾಗಿದ್ದವರು, ವಲಸೆ ಹೋದವರು, ಮರಣ ಹೊಂದಿದವರು, ಎರಡು ಕ್ಷೇತ್ರದಲ್ಲಿ ಹೆಸರು ಇದ್ದವರು ಸೇರಿದಂತೆ 1,15,061 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲು ತೀರ್ಮಾನಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಸಹ ಅವಕಾಶ ಕಲ್ಪಿಸಲಾಗಿದೆ' ಎಂದು ಹೇಳಿದರು.
'ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ವರ್ಷದಲ್ಲಿ ನಾಲ್ಕು ಅವಕಾಶಗಳಿವೆ. 17 ವರ್ಷ ವಯಸ್ಸು ಪೂರ್ಣಗೊಳಿಸಿದ ಯುವ ಮತದಾರರು ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ನೀಡಲಾಗಿದೆ. ಜನವರಿ 1ರ ಅರ್ಹತಾ ದಿನಾಂಕದ ಜೊತೆಗೆ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂದು ಹೆಸರು ಸೇರ್ಪಡೆಗೆ ಅವಕಾಶವಿದೆ' ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್. ಪತ್ರಿಕಾಗೋಷ್ಠಿಯಲ್ಲಿದ್ದರು.
ಕ್ಷೇತ್ರವಾರು ಮತದಾರರ ಕರಡು ಪಟ್ಟಿ ವಿವರ
ಕ್ಷೇತ್ರ;ಪುರುಷರು; ಮಹಿಳೆಯರು;ಇತರೆ;ಒಟ್ಟು
ಹಾನಗಲ್; 1,03,497; 98,513; 2; 2,02,012
ಶಿಗ್ಗಾವಿ; 1,12,158; 1,06,388; 7; 2,18,553
ಹಾವೇರಿ; 1,09,356; 1,04,743; 7; 2,14,106
ಬ್ಯಾಡಗಿ; 1,00,111; 97,299; 2; 1,97,412
ಹಿರೇಕೆರೂರು; 89,573; 85,728; 4; 1,75,305
ರಾಣೆಬೆನ್ನೂರು; 1,07,680; 1,05,208; 5; 2,12,893
ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿಚುನಾವಣಾ ಆಯೋಗದ ಜಾಲತಾಣದಲ್ಲಿ ಮತದಾರರ ಕರಡು ಪಟ್ಟಿ ಪರಿಶೀಲನೆಗೆ ಲಭ್ಯವಿದೆ. ಮತದಾರರು ತಮ್ಮ ಹೆಸರು ಪರಿಶೀಲಿಸಬಹುದು. ಆಕ್ಷೇಪಣೆಗಳಿದ್ದರೆ, ಸೆ. 23ರೊಳಗಾಗಿ ಸಲ್ಲಿಸಬೇಕುಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-22-1878261173

