ಹಾವೇರಿ: 'ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಶಿಕ್ಷಕರನ್ನು ಬಿಎಲ್‌ಒಗಳಾಗಿ ನಿಯೋಜಿಸಲಾಗಿದೆ. ನಿಗದಿತ ಸಮಯಕ್ಕೂ ಮುನ್ನವೇ ಅತೀ ವೇಗದಲ್ಲಿ ಪ್ರಕ್ರಿಯೆ ಮುಗಿಸುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಇದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ' ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ದೂರಿದರು.
ನಗರದಲ್ಲಿ ಶಾಸಕರಾದ ರುದ್ರಪ್ಪ ಲಮಾಣಿ ಹಾಗೂ ಬಸವರಾಜ ಶಿವಣ್ಣನವರ ಅವರನ್ನು ಭಾನುವಾರ ಭೇಟಿಯಾದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮನವಿ ಸಲ್ಲಿಸಿದರು.
'ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರ್ವರ್ ಸಮಸ್ಯೆಯಿದೆ. ಗ್ರಾಮೀಣ ಪ್ರದೇಶದಲ್ಲಿ ತೀವ್ರ ತೊಂದರೆಯಾಗುತ್ತಿದೆ. ನಿಗದಿಯಷ್ಟು ಗಣಕೀಕರಣ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ, ಸರ್ವರ್ ಸಮಸ್ಯೆ ಸರಿಪಡಿಸುತ್ತಿಲ್ಲ. ಒತ್ತಡ ಮಾತ್ರ ಹಾಕುತ್ತಿದ್ದಾರೆ' ಎಂದು ಶಿಕ್ಷಕರು ದೂರಿದರು.
'ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿದೆ. 200 ಅತಿಥಿ ಶಿಕ್ಷಕರ ಪೈಕಿ ಕೇವಲ 100 ಶಿಕ್ಷಕರನ್ನಷ್ಟೇ ನೇಮಕಾತಿ ಮಾಡಿಕೊಳ್ಳಲಾಗಿದೆ. ಉಳಿದ 100 ಹುದ್ದೆಗಳಿಗೆ ಇನ್ನೂ ನೇಮಕಾತಿ ಆಗಿಲ್ಲ. ಇದರಿಂದ ಮಕ್ಕಳ ಬೋಧನೆಗೆ ತೊಂದರೆಯಾಗುತ್ತಿದೆ. ಹಲವು ಶಾಲೆಗಳಲ್ಲಿ ಕೊಠಡಿಗಳ ಕೊರತೆಯಿದೆ. ಮೂಲ ಸೌಕರ್ಯವೂ ಇಲ್ಲದಂತಾಗಿದೆ. ಕಟ್ಟಡಗಳೂ ಶಿಥಿಲಗೊಂಡಿವೆ' ಎಂದು ಆರೋಪಿಸಿದರು.
'ಸಂಘಕ್ಕೆ ಹಾವೇರಿ ತಾಲ್ಲೂಕು ಕೇಂದ್ರದಲ್ಲಿ ಗುರುಭವನ ಬೇಕು. ಇದಕ್ಕಾಗಿ ಜಾಗ ಮಂಜೂರು ಮಾಡಬೇಕು' ಎಂದು ಕೋರಿದರು.
ಸಂಘದ ಅಧ್ಯಕ್ಷ ಸತೀಶ ಶಂಕಿನದಾಸರ, ಮೌನೇಶ ಕರೆಮ್ಮನವರ, ಸುನಿತಾ ಪೂಜಾರ, ಸುಭಾಸ್ ತಂಬೂಲಿ, ಶೈಲಜಾ ಪತ್ತಾರ, ಎನ್.ಎಸ್. ಭಗವಂತಗೌಡ್ರು, ಸಿ.ವೈ. ಸಿದ್ದಾಪುರ, ಮಂಜುಳಾ ಪಾಟೀಲ, ಸಿ.ಸಿ. ಕನವಳ್ಳಿ, ಎ.ಟಿ. ನೀರಲಗಿ, ಲೋಕೇಶ ವಡ್ಡರ, ಸುರೇಶ ಮಡಿವಾಳರ, ಎಸ್.ಎನ್. ಕಂಬಳಿ, ವಿ.ಟಿ. ಸುಣಗಾರ, ಬಿ.ಎಫ್. ತಳವಾರ, ಎಸ್.ಎಸ್. ಸರಗುಣಿಕಿ, ಶಿವಕುಮಾರ ಕುರುವತ್ತಿ ಹಾಗೂ ಇತರರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-22-106289086

