ಮೈಸೂರು: 'ಇಲ್ಲಿನ ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಮಾರ್ಗಸೂಚಿ ಪ್ರಕಾರ ನಡೆಯುತ್ತಿಲ್ಲ. ಮಸೀದಿ, ಚೌಲ್ಟ್ರಿ, ಸಮುದಾಯ ಭವನ ಮೊದಲಾದ ಕಡೆಗಳಲ್ಲಿ ಜನರನ್ನು ಸೇರಿಸಿ, ಫಾರಂಗಳನ್ನು ಕೊಟ್ಟು ಭರ್ತಿ ಮಾಡಿಸಲಾಗುತ್ತಿದೆ' ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.
'ದೇಶದವರಾದ ಅರ್ಹ ಮತದಾರರಿಗೆ ಮಾತ್ರ ಹಕ್ಕು ಸಿಗಲೆಂದೇ ಎಸ್‌ಐಆರ್ ನಡೆಸಲಾಗುತ್ತಿದೆ. ಆದರೆ, ನರಸಿಂಹರಾಜದಲ್ಲಿನ ಬೆಳವಣಿಗೆಗಳು ಆತಂಕ ಮೂಡಿಸುತ್ತಿವೆ. ಬಿಎಲ್‌ಒಗಳು ಮನೆಗಳಿಗೆ ಗಣತಿ ನಮೂನೆ ಕೊಡುವ ಬದಲಿಗೆ, ಒಂದು ಧರ್ಮದವರು ಹೆಚ್ಚಿರುವಲ್ಲಿ ಗುಂಪುಗುಂಪಾಗಿ ಸೇರಿ ಪರಿಷ್ಕರಣೆಯಲ್ಲಿ ತೊಡಗಿದ್ದಾರೆ. ಇದನ್ನು ತಡೆಯಬೇಕು' ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
'ಅಲ್ಲಲ್ಲಿ ಗುಂಪಾಗಿ ಸೇರಿ ಗಣತಿ ನಮೂನೆ ಭರ್ತಿ ಮಾಡಿಸುವುದು ಮೊದಲಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ' ಎಂದರು.
ಸಿಆರ್‌ಪಿಎಫ್ ನಿಯೋಜನೆಗೆ
'ಆ ಭಾಗದಲ್ಲಿ ಸುಸೂತ್ರ ಹಾಗೂ ಪಾರದರ್ಶಕವಾಗಿ ಪ್ರಕ್ರಿಯೆ ನಡೆಯಲು ಪೊಲೀಸ್ ಭದ್ರತೆಯ ಅಗತ್ಯವಿದೆ. ಇದು ಸೂಕ್ಷ್ಮ ಪ್ರದೇಶವಾದ್ದರಿಂದ ಸಿಆರ್‌ಪಿಎಫ್ ನಿಯೋಜಿಸುವಂತೆಯೂ ಕೇಂದ್ರವನ್ನು ಒತ್ತಾಯಿಸಲಿದ್ದೇವೆ' ಎಂದರು.
'ಬಿಜೆಪಿಯಿಂದ ಬೂತ್ ಮಟ್ಟದಲ್ಲಿ ನೇಮಿಸಿರುವ ಬಿಎಲ್‌ಎಗಳು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಅಲ್ಲಿನವರು ಬೆದರಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಏಜೆಂಟರು 2-3 ಮಂದಿ ಇರುತ್ತಾರೆ. ಅಲ್ಲಿ ಅಕ್ರಮವು ವ್ಯವಸ್ಥಿತವಾಗಿ ನಡೆಯುತ್ತಿದೆ. ಇದನ್ನು ಚುನಾವಣಾ ಆಯೋಗ ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಆಗ ಮಾತ್ರ ನೈಜ ಮತದಾರರು ಯಾರೆಂದು ತಿಳಿಯಲು ಸಾಧ್ಯವಾಗುತ್ತದೆ' ಎಂದು ಹೇಳಿದರು.
'ಕೆಲ ದಿನಗಳ ಹಿಂದೆ ನೂರಾರು ಮಂದಿ ವಲಸಿಗರು ರೈಲಿನಲ್ಲಿ ಮೈಸೂರಿಗೆ ಬಂದರು. ಅವರು ಬಂದಿದ್ದೇಕೆ ಎಂದು ಕೇಳಿದ ನಮ್ಮ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಅನರ್ಹ ಮತದಾರರಿಗೆ ಅನುಕೂಲ ಕಲ್ಪಿಸುತ್ತಿದ್ದು, ಇದರ ವಿರುದ್ಧ ಹೋರಾಡುತ್ತೇವೆ' ಎಂದರು.
ಲಕ್ಷ ಮತದಾರರು ಹೆಚ್ಚಾಗಿದ್ದು ಹೇಗೆ?
'ನಕಲಿ ಟಿಸಿ ಪಡೆದು ಅಕ್ರಮ ಮಾಡುತ್ತಿರುವ ಆರೋಪವೂ ಇದೆ. ಅಕ್ರಮವಾಗಿ ನುಸುಳಿದವರಿಂದ ದೊಡ್ಡ ಪ್ರಮಾಣದಲ್ಲಿ ಆತಂಕ ಎದುರಾಗಿದೆ. ನರಸಿಂಹರಾಜದಲ್ಲಿ ಒಂದು ಲಕ್ಷ ಮತದಾರರು ಜಾಸ್ತಿಯಾಗಿದ್ದಾರೆ. ಇದು ಹೇಗೆ ಸಾಧ್ಯ? ಅವರೆಲ್ಲ ಯಾರು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಪರಿಶೀಲನೆ ಕಾರ್ಯ ಸಮರ್ಪಕವಾಗಿ ನಡೆಯಬೇಕಾಗಿದೆ. ನಕಲಿ ಹೆಸರುಗಳು ಸಾಕಷ್ಟು ಕಂಡುಬಂದಿವೆ' ಎಂದು ದೂರಿದರು.
'ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಿದ್ದೇವೆ. ಪರಿಷ್ಕರಣೆ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕು ಎನ್ನುವುದು ನಮ್ಮ ಒತ್ತಾಯ' ಎಂದು ತಿಳಿಸಿದರು.
ಪಕ್ಷದ ಮುಖಂಡ ಸಂದೇಶ್ ಸ್ವಾಮಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್, ಕೆ.ಸಿ. ರುದ್ರಮೂರ್ತಿ, ಉಪಾಧ್ಯಕ್ಷ ರಾಜೇಶ್, ವಕ್ತಾರ ಮೋಹನ್, ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ರವಿ, ಸಂತೋಷ್ ಇದ್ದರು.

