ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ರಚನೆಯಾಗಿರುವ ಐದು ನಗರಪಾಲಿಕೆಗಳು ವರ್ಷ ಕಳೆಯುವ ಮುನ್ನವೇ ಅಸ್ತಿತ್ವ ಕಳೆದುಕೊಳ್ಳಲಿದ್ದು, ಪುನರ್ರಚನೆ ಬಳಿಕ ಎರಡು ಪಾಲಿಕೆಗಳಷ್ಟೇ ಉಳಿಯಲಿವೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಬಳಿಕ ಈ ಬದಲಾವಣೆಯತ್ತ ಸರ್ಕಾರ ಹೆಜ್ಜೆ ಇಟ್ಟಿದೆ.
ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಒಂದು ಕೋಟಿ ಮತದಾರರು ಇದ್ದರು. ಆದರೆ, ಎಸ್ಐಆರ್ ಪ್ರಕ್ರಿಯೆಯಡಿ ಮತಪಟ್ಟಿಯಿಂದ ಹೊರಗುಳಿದವರ ಪಟ್ಟಿಯಲ್ಲಿ (ಎಎಸ್ಡಿಡಿಒ) ಅರ್ಧಕ್ಕೂ ಹೆಚ್ಚು ಮತದಾರರ ಹೆಸರಿರುವುದು ಐದು ನಗರಪಾಲಿಕೆಗಳ ಅಸ್ತಿತ್ವಕ್ಕೆ ಕುತ್ತು ತಂದಿದೆ.
'ಒಂದೂಕಾಲು ಕೋಟಿ ಜನಸಂಖ್ಯೆಯಲ್ಲಿ ಒಂದು ಕೋಟಿ ಮತದಾರರಿರುವಾಗ, ಒಂದು ಬಿಬಿಎಂಪಿಯಿಂದ ಆಡಳಿತ ನೀಡಲು ಸಾಧ್ಯವಿಲ್ಲ' ಎಂದು ಉಪಮುಖ್ಯಮಂತ್ರಿಯಾಗಿದ್ದಾಗ ಹೇಳಿದ್ದ ಡಿ.ಕೆ. ಶಿವಕುಮಾರ್, ಅತ್ಯಂತ ಆಸಕ್ತಿಯಿಂದ ಬಿಬಿಎಂಪಿಯನ್ನು ರದ್ದು ಮಾಡಿದ್ದರು. ಜಿಬಿಎ ರಚಿಸಿ ಐದು ನಗರಪಾಲಿಕೆಗಳನ್ನು 2025ರ ಸೆಪ್ಟೆಂಬರ್ 2ರಂದು ಸ್ಥಾಪನೆ ಮಾಡಿದ್ದರು. ಆದರೆ, ಎಸ್ಐಆರ್ ಮುಗಿದ ಬಳಿಕ ಅರ್ಧ ಕೋಟಿಯಷ್ಟು ಮತದಾರರು ಮಾತ್ರ ಜಿಬಿಎ ವ್ಯಾಪ್ತಿಯಲ್ಲಿ ಉಳಿಯಲಿದ್ದಾರೆ ಎಂಬ ಅಂದಾಜಿದೆ.
'ನಾಲ್ಕು ದಿಕ್ಕುಗಳಿಗೆ ಪೂರಕವಾಗಿ ಹಾಗೂ ಕೇಂದ್ರ ಎಂದು ಪರಿಗಣಿಸಿ ಒಟ್ಟು ಐದು ನಗರಪಾಲಿಕೆಗಳಾಗಿರುವುದನ್ನು ರದ್ದು ಮಾಡಿ, ಅವುಗಳ ವ್ಯಾಪ್ತಿಯಲ್ಲೇ ಉತ್ತರ ಹಾಗೂ ದಕ್ಷಿಣ ನಗರಪಾಲಿಕೆ ಎಂದು ರಚಿಸಲಾಗುತ್ತದೆ. 28 ಕ್ಷೇತ್ರಗಳನ್ನು ಸಮನಾಗಿ ಹಂಚಿಕೆ ಮಾಡಿ, ತಲಾ 100 ವಾರ್ಡ್ಗಳನ್ನು ಎರಡು ನಗರಪಾಲಿಕೆಗಳಿಗೆ ನಿಗದಿ ಮಾಡಲಾಗುತ್ತದೆ. ಒಂದು ವೇಳೆ, ಈಗಿನ ಜಿಬಿಎ ವ್ಯಾಪ್ತಿಯನ್ನು ನಗರ ಜಿಲ್ಲೆಯಾದ್ಯಂತ ವಿಸ್ತರಿಸಿದರೆ ಆಗ ಮೂರು ನಗರಪಾಲಿಕೆಗಳನ್ನು ರಚಿಸಬಹುದು. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಜಿಎ) ಪ್ರಕಾರ, ಗರಿಷ್ಠ ಏಳು ನಗರಪಾಲಿಕೆಗಳನ್ನು ರಚಿಸಬಹುದಾಗಿದೆ. ಯಾವ ಸಂದರ್ಭದಲ್ಲಾದರೂ ಸರ್ಕಾರ ಅದನ್ನು ಬದಲಾಯಿಸಬಹುದಾಗಿದೆ. ಕಾಯ್ದೆಗೆ ತಿದ್ದುಪಡಿ ತರಲು ಕಾನೂನು ಪ್ರಕ್ರಿಯೆಯನ್ನು ಆರಂಭಿಸಲೂ ಸೂಚಿಸಲಾಗಿದೆ' ಎಂದು ಮೂಲಗಳು ಹೇಳಿವೆ.
ಐದು ನಗರಪಾಲಿಕೆಗಳಲ್ಲಿ ಎರಡರಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಪಶ್ಚಿಮ ಹಾಗೂ ದಕ್ಷಿಣ ಅತಿಹೆಚ್ಚು ಸಮಸ್ಯೆ ಎದುರಿಸುತ್ತಿವೆ. ವೇತನ ನೀಡಲೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನೂ ಪರಿಗಣಿಸಿ ಪುನರ್ರಚನೆಯ ಹೆಜ್ಜೆ ಇರಿಸಲಾಗಿದೆ.
'ಬಿಡದಿ ಟೌನ್ಶಿಪ್ ಯೋಜನೆ ಸಮಸ್ಯೆ ಸೇರಿದಂತೆ ಯಾವುದೇ ಅಡ್ಡಿ ಆತಂಕ ಹೆಚ್ಚಾಗಿ ಎದುರಾಗದಿದ್ದರೆ, ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲೇ ಜಿಬಿಜಿಎ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಯೋಜಿಸಲಾಗಿದೆ. ಅದು ಸಾಧ್ಯವಾಗದಿದ್ದರೆ, ನಗರಪಾಲಿಕೆಗಳ ಚುನಾವಣೆಗೆ ಸುಪ್ರೀಂ ಕೋರ್ಟ್ ಡಿಸೆಂಬರ್ವರೆಗೂ ಅವಕಾಶ ನೀಡಿರುವುದರಿಂದ, ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಪ್ರಕ್ರಿಯೆ ಆರಂಭಿಸಲು ಆಲೋಚಿಸಲಾಗಿದೆ' ಎಂದೂ ಮೂಲಗಳು ತಿಳಿಸಿವೆ.
ಚುನಾವಣೆ ಇನ್ನೂ ಮುಂದಕ್ಕೆ
ಜಿಬಿಜಿಎಗೆ ತಿದ್ದುಪಡಿ ತಂದು ಹೊಸದಾಗಿ ನಗರಪಾಲಿಕೆಗಳನ್ನು ರಚಿಸಲು, ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ನಂತರ ಮೀಸಲಾತಿ ನಿಗದಿ ಮಾಡಬೇಕು. ಎಲ್ಲದಕ್ಕೂ ಆರು ತಿಂಗಳಾದರೂ ಬೇಕು. ಹೀಗಾಗಿ, ನಗರಪಾಲಿಕೆಗಳಿಗೆ ಸದ್ಯಕ್ಕೆ ಚುನಾವಣೆ ಸಾಧ್ಯತೆ ಕಡಿಮೆ.
'ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪಾಲಿಕೆಗಳಿಗೆ ಚುನಾವಣೆ ನಡೆಸಲು ಡಿಸೆಂಬರ್ ಅಂತ್ಯದವರೆಗೆ ಅವಕಾಶ ನೀಡಬೇಕು' ಎಂದು ಸರ್ಕಾರ ಕೋರಿದ್ದ ಮನವಿಗೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ. ಅದರೊಳಗೆ ಕಾಯ್ದೆ ತಿದ್ದುಪಡಿಯ ಪ್ರಕ್ರಿಯೆ ಆರಂಭವಾದರೆ, ಅದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ಸಮಯಾವಕಾಶ ಕೇಳಲು ಚಿಂತಿಸಲಾಗಿದೆ.
11 ಲಕ್ಷ ಮತದಾರರಿಗೊಂದು ಪಾಲಿಕೆ ಬೇಕೆ?: ರಾಮಲಿಂಗಾರೆಡ್ಡಿ
'ಕೋಟಿಗೂ ಮೀರಿದ ಮತದಾರರಿದ್ದಾರೆ ಎಂದು ಐದು ನಗರಪಾಲಿಕೆಗಳನ್ನು ಮಾಡಲಾಗಿತ್ತು. ಆಗಲೂ ನಾನು ಇಷ್ಟೊಂದು ನಗರಪಾಲಿಕೆಗಳನ್ನು ಮಾಡುವುದು ಬೇಡ ಎಂದು ಹೇಳಿದ್ದೆ. ಆದರೆ ಇದೀಗ ಮತದಾರರ ಸಂಖ್ಯೆ 55 ಲಕ್ಷ ಮೀರುವುದಿಲ್ಲ ಎಂಬುದು ಎಸ್ಐಆರ್ನಿಂದ ಅರಿವಾಗುತ್ತಿದೆ. ಹೀಗಾಗಿ, 11 ಲಕ್ಷ ಮತದಾರರಿಗೆ ಒಂದು ನಗರಪಾಲಿಕೆ ಬೇಕೆ ಎಂಬ ಪ್ರಶ್ನೆ ಮೂಡಿದೆ' ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
'ಐದು ನಗರಪಾಲಿಕೆಗಳು ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಇನ್ನು ಮತದಾರರೂ ಕಡಿಮೆಯಾದ ಮೇಲೂ ಅವುಗಳನ್ನು ಉಳಿಸಿಕೊಳ್ಳುವಲ್ಲಿ ಅರ್ಥ ಇಲ್ಲ. ಎರಡು ನಗರಪಾಲಿಕೆಗಳನ್ನು ಮಾಡಿದರೆ ಸಾಕು. ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕಿದೆ' ಎಂದು 'ಪ್ರಜಾವಾಣಿ'ಗೆ ತಿಳಿಸಿದರು.

