ರಾಯಪುರ : 'ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ (ಎಸ್‌ಐಆರ್) ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ನರೇಂದ್ರ ಮೋದಿ ಸರ್ಕಾರವು ಸಿದ್ಧವಿದ್ದು, ವಿರೋಧ ಪಕ್ಷಗಳಿಗೆ ಧೈರ್ಯವಿದ್ದರೆ ಚರ್ಚೆಗೆ ಬರಲಿ' ಎಂದು ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದರು.
ಇಲ್ಲಿ ನಡೆಯುತ್ತಿರುವ ಮೂರು ದಿನಗಳ ಛತ್ತೀಸಗಢ ರಾಜ್ಯೋತ್ಸವ ಸಮಾರಂಭದಲ್ಲಿ ಮಂಗಳವಾರ ಭಾಗವಹಿಸಿದ ಅವರು, 'ಸುಮ್ಮನೆ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡ ಮಾತ್ರಕ್ಕೆ ಅದನ್ನು ಬೆಂಬಲಿಸಿದಂತಾಗುವುದಿಲ್ಲ. ನಡವಳಿಕೆಯೂ ಸಾಂವಿಧಾನಿಕವಾಗಿರಬೇಕು' ಎಂದು ಟೀಕಿಸಿದರು.
'ಕಾಂಗ್ರೆಸ್ ಪಕ್ಷವು ನಕ್ಸಲ್‌ವಾದವನ್ನು ಬೆಂಬಲಿಸುತ್ತದೆ. ಆ ಪಕ್ಷದ ನಾಯಕ ರಾಹುಲ್ ಗಾಂಧಿ ಮಾವೋವಾದಿಗಳು ನಡೆಸುವ ಅಸಾಂವಿಧಾನಿಕ, ಪರ್ಯಾಯ 'ಜನತಾನಾ ಸರ್ಕಾರ'ವನ್ನು ಬೆಂಬಲಿಸಿದ್ದರು ಮತ್ತು ಈಚೆಗೆ ಅಣಕು ಸಂಸತ್ತನ್ನು ನಡೆಸುವ ಮೂಲಕ ಸಂಸತ್ತನ್ನು ಅಣಕಿಸಿದ್ದರು' ಎಂದು ಆರೋಪಿಸಿದರು.
'ನರೇಂದ್ರ ಮೋದಿ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಕಾನೂನು ಪಾಲಿಸುವವರನ್ನು ನಾಗರಿಕರು ಎಂದು ಪರಿಗಣಿಸಲಾಗುತ್ತದೆ. ದೇಶದ ಯಾವುದೇ ಭಾಗದಲ್ಲಾದರೂ ಸರಿ, ಕಾನೂನು ಉಲ್ಲಂಘಿಸುವವರಿಗೆ ಭದ್ರತಾ ಪಡೆಗಳು ತಕ್ಕ ಉತ್ತರ ನೀಡುತ್ತವೆ' ಎಂದರು.

