ನವದೆಹಲಿ: ಸ್ನಾಯುಸೆಳೆತದಿಂದ (ಹ್ಯಾಮ್‌ಸ್ಟ್ರಿಂಗ್) ಬಳಲುತ್ತಿರುವ ಭಾರತ ಮಹಿಳಾ ತಂಡದ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರು ಮುಂಬರುವ ಏಷ್ಯಾ ಕಪ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ಅಲಭ್ಯರಾಗಿದ್ದಾರೆ.
25 ವರ್ಷದ ಜೆಮಿಮಾ ಅವರು ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುವಾಗ ಜೆಮಿಮಾ ಸ್ನಾಯುನೋವಿಗೆ ಒಳಗಾಗಿದ್ದರು.
ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ವೈದ್ಯಕೀಯ ತಂಡ ತಪಾಸಣೆ ನಡೆಸಿದ್ದು, ಅವರು ತೀವ್ರ ಸ್ವರೂಪದ ಸ್ನಾಯುಸೆಳೆತ ಹೊಂದಿರುವುದು ದೃಢಪಟ್ಟಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ 28ರಿಂದ ಸೆ.13ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜೆಮಿಮಾ ಬದಲಿಗೆ ಪ್ರತೀಕಾ ರಾವಲ್ ಅವರಿಗೆ ಸ್ಥಾನ ಕಲ್ಪಿಸಿದೆ. ಏಷ್ಯನ್ ಕ್ರೀಡಾಕೂಟವು ಸೆ.19 ರಿಂದ ಅ.4 ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿದೆ.
ಏಷ್ಯಾ ಕಪ್‌ಗೆ ಭಾರತದ ಪರಿಷ್ಕೃತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಶಫಾಲಿ ವರ್ಮಾ, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀಚರಣಿ, ರೇಣುಕಾ ಠಾಕೂರ್, ನಂದಿನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.

