ನಾಗೋಯಾ (ಪಿಟಿಐ): ಅಂಕಿತಾ ರೈನಾ ಮತ್ತು ರುತುಜಾ ಭೋಸಲೆ ಜೋಡಿಯು ಸೋಮವಾರ ಮೊದಲ ಸುತ್ತಿನಲ್ಲೇ ಸೋಲುವುದರೊಂದಿಗೆ ಏಷ್ಯನ್ ಗೇಮ್ಸ್‌ನ ಟೆನಿಸ್‌ನಲ್ಲಿ ಭಾರತದ ಮಹಿಳಾ ಡಬಲ್ಸ್ ಅಭಿಯಾನವು ಅಂತ್ಯಗೊಂಡಿತು.
ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿ ಗೆಲುವಿನ ಭರವಸೆ ಮೂಡಿಸಿದ ಭಾರತದ ಆಟಗಾರ್ತಿಯರು 7-5, 3-6, 5-10ರಿಂದ ಕಜಾಕಸ್ತಾನದ ಯೂಲಿಯಾ ಪುಟಿನ್ಸೆವಾ ಮತ್ತು ಅನ್ನಾ ಡ್ಯಾನಿಲಿನಾ ವಿರುದ್ಧ ಪರಾಭವಗೊಂಡರು.
ಭಾರತದ ಸುಮಿತ್ ನಾಗಲ್ ಅವರ ಪುರುಷರ ಸಿಂಗಲ್ಸ್ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡಿತು. 32ರ ಘಟ್ಟದ ಹಣಾಹಣಿಯ ಮೊದಲ ಸೆಟ್‌ನಲ್ಲಿ ನಾಗಲ್ 3-2ರಿಂದ ದಕ್ಷಿಣ ಕೊರಿಯಾದ ಹಾಂಗ್ ಸಿಯೊಂಗ್‌ಚಾನ್ ವಿರುದ್ಧ ಕೊಂಚ ಮುನ್ನಡೆಯಲ್ಲಿದ್ದರು. ಈ ಹಂತದಲ್ಲಿ ಮಳೆ ಸುರಿಯಿತು. ಈ ಪಂದ್ಯ ಮಂಗಳವಾರ ಪುನರಾರಂಭವಾಗಲಿದೆ.
ಇತ್ತೀಚೆಗೆ ಸಿಯೋಲ್‌ನಲ್ಲಿ ನಡೆದ ಡೇವಿಸ್ ಕಪ್ ಪಂದ್ಯದಲ್ಲಿ ನಾಗಲ್ ತಮ್ಮ ಎರಡೂ ಸಿಂಗಲ್ಸ್‌ಗಳಲ್ಲಿ ಕೊರಿಯಾದ ಆಟಗಾರರ ವಿರುದ್ಧ ಸೋತಿದ್ದರು.

