Dailyhunt Logo
  • Light mode
    Follow system
    Dark mode
    • Play Story
    • App Story
Explainer: ಅಮೆರಿಕ-ಇರಾನ್ ಯುದ್ಧ ತಡೆಯಲು ಮತ್ತೊಮ್ಮೆ ಮುಂದಾಯಿತೇ ಪಾಕಿಸ್ತಾನ?

Explainer: ಅಮೆರಿಕ-ಇರಾನ್ ಯುದ್ಧ ತಡೆಯಲು ಮತ್ತೊಮ್ಮೆ ಮುಂದಾಯಿತೇ ಪಾಕಿಸ್ತಾನ?

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಇರಾನ್ ಪ್ರವಾಸದಿಂದ ಯುದ್ಧವನ್ನು ಕೊನೆಗೊಳಿಸಲು ಮತ್ತು ವ್ಯಾಪಕ ಮಾತುಕತೆಗಳನ್ನು ಪುನರಾರಂಭಿಸಲು ಇರಾನ್-ಅಮೆರಿಕ ನಡುವೆ ಸಂಭಾವ್ಯ ತಾತ್ಕಾಲಿಕ ಒಪ್ಪಂದದ ಬಗೆಗಿನ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದಂತಾಗಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿದೆ ಎನ್ನಲಾದ ಕೆಳಹಂತದ ಮಾತುಕತೆಗಳ ಬೆನ್ನಲ್ಲೇ ಮುನೀರ್ ಅವರು ಇರಾನ್‌ಗೆ ಭೇಟಿ ನೀಡಿದ್ದಾರೆ. ಮುನೀರ್ ಅವರು ಕಳೆದ ತಿಂಗಳೂ ಇರಾನ್‌ಗೆ ಭೇಟಿ ನೀಡಿದ್ದರು. ಹಿರಿಯ ಮಿಲಿಟರಿ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದರು. ಇದರೊಂದಿಗೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರೂ ಇರಾನ್‌ಗೆ ಭೇಟಿ ನೀಡಿದ್ದು, ಮಾತುಕತೆ ಮುಂದುವರಿದ ಕಾರಣ ಶುಕ್ರವಾರವೂ ಅಲ್ಲೇ ಉಳಿದಿದ್ದರು.

ಇರಾನ್‌ನ ಯುರೇನಿಯಂ ಸಮೃದ್ಧೀಕರಣ ಮತ್ತು ಹೊರ್ಮುಜ್ ಜಲಸಂಧಿ ಬಂದ್ ಆಗಿರುವುದರ ಕುರಿತಾದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪಾಕ್‌ನ ಮಧ್ಯಸ್ಥಿಕೆ ಪ್ರಯತ್ನದ ಭಾಗವಾಗಿ ಈ ಭೇಟಿ ನಡೆದಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

'ಮುನೀರ್ ಅವರ ಭೇಟಿಯು ಪಾಕಿಸ್ತಾನದ ಕೊನೆಯ ಪ್ರಯತ್ನವೂ ಆಗಿರಬಹುದು. ಇರಾನ್-ಅಮೆರಿಕ ಉಭಯ ದೇಶಗಳ ನಡುವಿನ ಹಗೆತನವನ್ನು ಕಡಿಮೆ ಮಾಡುವುದು ಸೇರಿದಂತೆ ಇರಾನ್‌ನ ಪರಮಾಣು ಕಾರ್ಯಕ್ರಮ ಹಾಗೂ ಬಗೆಹರಿಯದ ವಿವಾದಗಳ ಕುರಿತು ಇನ್ನೂ 30 ದಿನಗಳ ಕಾಲ ಮಾತುಕತೆ ಮುಂದುವರಿಸಲು ತಾತ್ಕಾಲಿಕ ಒಪ್ಪಂದವನ್ನು ಜಾರಿಗೊಳಿಸುವ ಉದ್ದೇಶವಿದೆ' ಎಂದು ಅಮೆರಿಕದ ಮಾಧ್ಯಮ ಸಂಸ್ಥೆ 'ಆಕ್ಸಿಯೋಸ್‌' ವರದಿ ಮಾಡಿದೆ.

ಮಾಧ್ಯಮಗಳ ಊಹಾಪೋಹ & ಇರಾನ್ ಪ್ರತಿಕ್ರಿಯೆ

'ಪಾಕಿಸ್ತಾನದ ಆಂತರಿಕ ಸಚಿವರು ಅಮೆರಿಕದ ಯಾವುದೇ ಹೊಸ ಪ್ರಸ್ತಾಪವನ್ನು ಇರಾನ್‌ ಬಳಿ ಮಂಡಿಸಿಲ್ಲ. ಆದರೆ, ಅಂತಿಮ ಒಪ್ಪಂದದ ಕರಡು ಸಿದ್ಧವಾಗಿದೆ ಎಂಬ ವರದಿಗಳು ಕೇವಲ ಮಾಧ್ಯಮಗಳ ಊಹಾಪೋಹಗಳಷ್ಟೇ ಆಗಿವೆ' ಎಂದು ಇರಾನ್ ಮೂಲವೊಂದು ಅರೇಬಿಕ್ ಮಾಧ್ಯಮ 'ಅಲ್-ಅರಬಿ ಅಲ್-ಜದೀದ್'ಗೆ ತಿಳಿಸಿದೆ.

ಮುನೀರ್ ಭೇಟಿ ಕುರಿತು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯಿ ಮಾತನಾಡಿದ್ದು, 'ಇಂತಹ ಭೇಟಿಗಳು ಹೆಚ್ಚಾಗುತ್ತಿದ್ದರೂ, ಇವು ಹಳೆಯ ರಾಜತಾಂತ್ರಿಕ ಪ್ರಕ್ರಿಯೆಯ ಮುಂದುವರಿಕೆಯಷ್ಟೇ. ಒಪ್ಪಂದಕ್ಕೆ ತೀರಾ ಹತ್ತಿರವಾಗಿದ್ದೇವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅಲ್ಲದೆ, ಇರಾನ್ ಮತ್ತು ಅಮೆರಿಕ ನಡುವಿನ ಭಿನ್ನಾಭಿಪ್ರಾಯಗಳು ಎಷ್ಟು ಆಳವಾಗಿವೆ ಎಂದರೆ ಕೆಲವೇ ವಾರಗಳ ಭೇಟಿ ಅಥವಾ ಮಾತುಕತೆಗಳಿಂದ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗದು' ಎಂದಿದ್ದಾರೆ.

ಪಾಕಿಸ್ತಾನವು ಕಳೆದ ಎರಡು ತಿಂಗಳಿನಿಂದ ಇರಾನ್ ಮತ್ತು ಅಮೆರಿಕ ನಡುವಿನ ಪ್ರಮುಖ ಮಧ್ಯವರ್ತಿಯಾಗಿ ಹೊರಹೊಮ್ಮಿದೆ. ಏಪ್ರಿಲ್ 7ರಂದು ಕದನ ವಿರಾಮ ಜಾರಿಯಾಗಲು ಪಾಕ್ ಸಹಾಯ ಮಾಡಿದ ನಂತರ ಅದರ ಮಧ್ಯಸ್ಥಿಕೆ ಪ್ರಯತ್ನ ವೇಗ ಪಡೆದುಕೊಂಡಿದೆ. ಆದರೆ, ಇರಾನ್ ಮತ್ತು ಅಮೆರಿಕ ನಡುವಿನ ಮೊದಲ ಸುತ್ತಿನ ನೇರ ಮಾತುಕತೆಗಳು ಶಾಶ್ವತ ಒಪ್ಪಂದ ಏರ್ಪಡಲು ವಿಫಲವಾಗಿತ್ತು.

ಓಮಾನ್‌ ಪಾತ್ರ...

ಇದಕ್ಕೂ ಮುನ್ನ ಓಮಾನ್‌ ದೇಶವು ಪ್ರಮುಖ ಮಧ್ಯವರ್ತಿಯಾಗಿ ಗುರುತಿಸಿಕೊಂಡಿತ್ತು. ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುವ ಮುನ್ನ ಮಸ್ಕತ್‌ನಲ್ಲಿ ಮಾತುಕತೆಗಳು ನಡೆಯುತ್ತಿದ್ದವು. ಯುದ್ಧದ ಹಿನ್ನೆಲೆಯಲ್ಲಿ ರಾಜತಾಂತ್ರಿಕತೆ ಕುಸಿಯುವ ಮೊದಲು ಸಂಧಾನ ಮಾತುಕತೆಗಳು ಅಭೂತಪೂರ್ವ ಪ್ರಗತಿ ಸಾಧಿಸಿದ್ದವು ಎಂದು ಓಮಾನ್‌ ವಿದೇಶಾಂಗ ಸಚಿವ ಬದ್ರ್‌ ಅಲ್‌ ಬುಸೈದಿ ಹೇಳಿದ್ದರು.

ತಟಸ್ಥ ಮಧ್ಯವರ್ತಿಯಾಗಿ ತನ್ನನ್ನು ಗುರುತಿಸಿಕೊಂಡಿದ್ದ ಓಮಾನ್‌ಗಿಂತಲೂ ಭಿನ್ನವಾಗಿ ಪಾಕಿಸ್ತಾನವು ಸೌದಿ ಅರೇಬಿಯಾದೊಂದಿಗೆ ನಿಕಟ ಭದ್ರತಾ ಸಂಬಂಧವನ್ನು ಹೊಂದಿದ್ದು, ಈ ಮೂಲಕ ಇರಾನ್ ಮತ್ತು ಅಮೆರಿಕ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಯಿತು. ಇದು ಪಾಕ್‌ನ ಪಾತ್ರವನ್ನು ಸಂಕೀರ್ಣಗೊಳಿಸುತ್ತದೆ ಎಂಬುದು ಕೆಲವು ವಿಶ್ಲೇಷಕರು ವಾದ.

2025ರಲ್ಲಿ ಸೌದಿ ಅರೇಬಿಯಾದೊಂದಿಗೆ ಪಾಕಿಸ್ತಾನ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ದಾಳಿಯ ಸಂದರ್ಭದಲ್ಲಿ ಪರಸ್ಪರ ಬೆಂಬಲಿಸಲು ಬದ್ಧವಾಗಿವೆ. ಆದರೆ, ಈಚಿನ ಯುದ್ಧದ ಸಮಯದಲ್ಲಿ ಇರಾನ್, ಸೌದಿ ಅರೇಬಿಯಾವನ್ನು ಪದೇ ಪದೇ ಗುರಿಯಾಗಿಸಿಕೊಂಡಿದ್ದರಿಂದ ಪಾಕ್‌ನ ತಟಸ್ಥತೆ ಬಗ್ಗೆ ಕೆಲವು ಪ್ರಶ್ನೆಗಳು ಮೂಡುವಂತಾಗಿದೆ.

ಪಾಕ್‌ ಹಿತಾಸಕ್ತಿ & ಚೀನಾದ ಬೆಂಬಲ

ಇರಾನ್-ಅಮೆರಿಕ ನಡುವಿನ ಸಂಘರ್ಷವನ್ನು ತಡೆಯುವುದೇ ಪಾಕಿಸ್ತಾನದ ಪ್ರಮುಖ ಕಾಳಜಿಯಾಗಿದೆ. ಯುದ್ಧವು ದಕ್ಷಿಣ ಏಷ್ಯಾಕ್ಕೂ ವ್ಯಾಪಿಸಿ, ಪಶ್ಚಿಮ ಗಡಿ ಪ್ರದೇಶಗಳನ್ನು ಅಸ್ಥಿರಗೊಳಿಸಬಹುದು ಎಂಬುದು ಪಾಕ್‌ನ ಆತಂಕವಾಗಿದೆ ಎಂದು ಇರಾನ್‌ನ ಅಧಿಕೃತ ಸುದ್ದಿಸಂಸ್ಥೆ 'ಇರ್ನಾ' ವರದಿ ಮಾಡಿದೆ.

ಮಧ್ಯಸ್ಥಿಕೆಯನ್ನು ಯಶಸ್ವಿಗೊಳಿಸಲು ಪಾಕ್ ಅಧಿಕಾರಿಗಳು ಕಾರ್ಯತಂತ್ರದ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ. ಪಾಕ್ ರಾಜತಾಂತ್ರಿಕ ಇತ್ಯರ್ಥಕ್ಕೆ ಸಹಾಯ ಮಾಡಿದರೆ, ಅದು ಪಾಕ್‌ನ ಪ್ರಾದೇಶಿಕ ಸ್ಥಾನಮಾನವನ್ನು ಬಲಪಡಿಸುತ್ತದೆ ಮತ್ತು ಇರಾನ್‌ನೊಂದಿಗೆ ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು 'ಇರ್ನಾ' ವಿಶ್ಲೇಷಿಸಿದೆ.

ಪಾಕ್‌ನ ಈ ಮಧ್ಯಸ್ಥಿಕೆ ಪ್ರಯತ್ನಕ್ಕೆ ಚೀನಾದಿಂದಲೂ ಬೆಂಬಲ ವ್ಯಕ್ತವಾಗಿದೆ. ಪಾಕ್‌ನ ರಾಜತಾಂತ್ರಿಕ ಪ್ರಯತ್ನಗಳಿಗೆ ಚೀನಾದ ಬೆಂಬಲವಿದೆ ಎಂದೂ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಖಚಿತಪಡಿಸಿದ್ದಾರೆ.

'ಹೊರ್ಮುಜ್'ನ ಪರ್ಯಾಯ ಮಾರ್ಗವಾಗಿ 'ಖಸಾಬ್'

ಅಮೆರಿಕ, ಇಸ್ರೇಲ್ ಮತ್ತು ಇರಾನ್ ಒಳಗೊಂಡ ಯುದ್ಧದ ಆರಂಭಕ್ಕೂ ಮುನ್ನ ಓಮಾನ್‌ನ ಮುಸಂದಮ್ ಪೆನಿನ್ಸುಲಾದಲ್ಲಿರುವ 'ಖಸಾಬ್' ಎಂಬ ಬಂದರಿದೆ. ಇದು ಓಮಾನ್ ಮತ್ತು ಇರಾನ್‌ನ ದಕ್ಷಿಣ ಕರಾವಳಿಯ ನಡುವೆ ಸಂಚರಿಸುವ ಮೀನುಗಾರರು, ಪ್ರವಾಸಿಗರು ಮತ್ತು ವೇಗದ ದೋಣಿಗಳು ಬಳಸುವ ಅನೌಪಚಾರಿಕ ಮಾರ್ಗವಾಗಿತ್ತು.

ಸ್ಥಳೀಯವಾಗಿ ಇವುಗಳನ್ನು 'ಶೂಟಿ ದೋಣಿಗಳು' ಎಂದು ಕರೆಯಲಾಗುತ್ತಿತ್ತು. ಇರಾನ್‌ನಲ್ಲಿ 'ಶೂಟಿ' ಎಂದರೆ ತೆರಿಗೆ ರಹಿತ ಅಥವಾ ಕಳ್ಳಸಾಗಣೆ ಸರಕುಗಳನ್ನು ದೂರದವರೆಗೆ ಸಾಗಿಸುವುದು ಎಂದರ್ಥ. ಖಸಾಬ್ ಸುತ್ತಮುತ್ತ, ಕರಾವಳಿ ಪ್ರದೇಶಗಳಿಗೆ ತ್ವರಿತವಾಗಿ ಸಂಚರಿಸುವ ದೋಣಿಗಳಿಗೆ ವ್ಯಾಪಾರಿಗಳು ಇದೇ ಪದವನ್ನು ಬಳಸುತ್ತಾರೆ. ಹಲವು ವರ್ಷಗಳಿಂದ ಈ ಮಾರ್ಗವು ಸಿಗರೇಟ್, ಮದ್ಯ, ಗೃಹೋಪಯೋಗಿ ವಸ್ತುಗಳು ಮತ್ತು ಐಷಾರಾಮಿ ವಸ್ತುಗಳ ಸಣ್ಣ ಪ್ರಮಾಣದ ಕಳ್ಳಸಾಗಣೆಗೆ ಬಳಕೆಯಾಗುತ್ತಿತ್ತು.

ಪ್ರಸ್ತುತ ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದರಿಂದಾಗಿ 'ಖಸಾಬ್' ಬಂದರು ಇರಾನ್‌ಗೆ ಸರಕುಗಳನ್ನು ಸಾಗಿಸುವ ಪ್ರಮುಖ ಪರ್ಯಾಯ ಮಾರ್ಗಗಳಲ್ಲಿ ಒಂದಾಗಿದೆ. ಈ ಹಿಂದೆ ಯುಎಇ ಮತ್ತು ಪ್ರಮಾಣಿತ ವಾಣಿಜ್ಯ ಮಾರ್ಗಗಳ ಮೂಲಕ ಚಲಿಸುತ್ತಿದ್ದ ಸರಕುಗಳನ್ನು ಈಗ ಓಮಾನ್ ಮತ್ತು ಖಸಾಬ್ ಮೂಲಕ ಸಾಗಿಸಲಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani