ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವೊಂದನ್ನು ಹಲವು ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಅಮೆರಿಕದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಿಟಿಜನ್ಸ್ ಫಾರ್ ಜಸ್ಟಿಸ್ ಆಯಂಡ್ ಪೀಸ್ (CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಹೇಳುತ್ತಿದ್ದಾರೆ.
ವಿಡಿಯೊದಲ್ಲಿ ಜನಸಮೂಹದ ನಡುವೆ ಸುನಿತಾ ವಿಲಿಯಮ್ಸ್ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು.
ಆದರೆ, ಪರಿಶೀಲನೆಯಲ್ಲಿ ಈ ವಿಡಿಯೊಗೆ ಜಂತರ್ ಮಂತರ್ ಪ್ರತಿಭಟನೆ ಅಥವಾ ಸುನಿತಾ ವಿಲಿಯಮ್ಸ್ ಅವರಿಗೆ ಯಾವುದೇ ಸಂಬಂಧ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಮೊದಲಿಗೆ ಈ ಕುರಿತು ಪರಿಶೀಲಿಸಿಲು ಕೀವರ್ಡ್ಸ್ ಸರ್ಚ್ ನಡೆಸಿದಾಗ, ಸುನಿತಾ ವಿಲಿಯಮ್ಸ್ ಅವರು ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ದೃಢಪಡಿಸುವ ಅಧಿಕೃತ ಮಾಹಿತಿ, ವಿಶ್ವಾಸಾರ್ಹ ಸುದ್ದಿವಾಹಿನಿಗಳ ವರದಿ ಅಥವಾ ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಯಾವುದೇ ಉಲ್ಲೇಖವೂ ಕಂಡುಬಂದಿಲ್ಲ.
ಹರಿದಾಡಿರುವ ವಿಡಿಯೊದಲ್ಲಿನ ಪ್ರಮುಖ ದೃಶ್ಯಗಳನ್ನು (ಕೀಫ್ರೇಮ್ಗಳು) ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, 2026ರ ಜನವರಿ 25ರಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದ ಅದೇ ವಿಡಿಯೊ ಪತ್ತೆಯಾಯಿತು. ಇದರಿಂದ, ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಇತ್ತೀಚಿನ ಪ್ರತಿಭಟನೆಗಳಿಗೂ ಬಹಳ ಮುಂಚೆಯೇ ಈ ವಿಡಿಯೊ ಅಸ್ತಿತ್ವದಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಇದೇ ವಿಡಿಯೊ 2026ರ ಜನವರಿಯಲ್ಲೇ ಯೂಟ್ಯೂಬ್ನಲ್ಲೂ ಅಪ್ಲೋಡ್ ಆಗಿರುವುದು ಕಂಡುಬಂದಿದೆ. ಇದರಿಂದ ಹರಿದಾಡುತ್ತಿರುವ ದೃಶ್ಯಗಳು ಪ್ರಸ್ತುತ ಜಂತರ್ ಮಂತರ್ ಪ್ರತಿಭಟನೆಗೆ ಸಂಬಂಧಿಸಿದವುಗಳಲ್ಲ ಎಂಬುದು ಮತ್ತಷ್ಟು ದೃಢಪಟ್ಟಿದೆ.
ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸುನಿತಾ ವಿಲಿಯಮ್ಸ್ ಅವರು ಕೇರಳ ಲಿಟರೇಚರ್ ಫೆಸ್ಟಿವಲ್ (Kerala Literature Festival - KLF) ಗುರುತಿನ ಚೀಟಿಯನ್ನು ಧರಿಸಿರುವುದು ಗೋಚರಿಸುತ್ತದೆ. ಇದನ್ನು ಆಧರಿಸಿ ಸಂಬಂಧಿತ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, 2026ರ ಜನವರಿ 22ರಂದು ಕೋಝಿಕ್ಕೋಡ್ ಬೀಚ್ನಲ್ಲಿ ನಡೆದ ಕೇರಳ ಲಿಟರೇಚರ್ ಫೆಸ್ಟಿವಲ್ನ 9ನೇ ಆವೃತ್ತಿಯನ್ನು ಸುನಿತಾ ವಿಲಿಯಮ್ಸ್ ಉದ್ಘಾಟಿಸಿದ್ದರು ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.
ಹೀಗಾಗಿ, ಈ ವಿಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ನಮ್ಮ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ. ಈ ವಿಡಿಯೊ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭಾಗವಹಿಸಿದ್ದನ್ನು ತೋರಿಸುವುದಿಲ್ಲ. ವಾಸ್ತವವಾಗಿ, ಇದು 2026ರ ಜನವರಿಯಲ್ಲಿ ಅವರು ಕೋಝಿಕ್ಕೋಡ್ನಲ್ಲಿ ನಡೆದ ಕೇರಳ ಲಿಟರೇಚರ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದ ವೇಳೆ ಸೆರೆಹಿಡಿಯಲಾದ ದೃಶ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಜಂತರ್ ಮಂತರ್ ಪ್ರತಿಭಟನೆಗೆ ಸಂಬಂಧಿಸಿ ಇಂತಹ ಹಲವು ತಪ್ಪು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವೊಮ್ಮೆ ಹಳೆಯ ವಿಡಿಯೊಗಳನ್ನು, ಮತ್ತೊಮ್ಮೆ ಸಂಬಂಧವಿಲ್ಲದ ವ್ಯಕ್ತಿಗಳ ದೃಶ್ಯಗಳನ್ನು ಈ ಪ್ರತಿಭಟನೆಯೊಂದಿಗೆ ಜೋಡಿಸಿ ತಪ್ಪು ಮಾಹಿತಿ ಹಂಚಲಾಗುತ್ತಿದೆ. ಇದೇ ರೀತಿಯಲ್ಲಿ ಈ ವಿಡಿಯೊವನ್ನೂ ಸುನಿತಾ ವಿಲಿಯಮ್ಸ್ ಅವರ ಹೆಸರಿನಲ್ಲಿ ತಪ್ಪಾಗಿ ಪ್ರಸಾರ ಮಾಡಲಾಗಿದೆ.

